ಭೂಮಿಯ ಮೇಲ್ಮೈ ಪ್ರಧಾನವಾಗಿ ನೀರಿನಿಂದ (Water) ಆವರಿಸಿದ್ದರೂ, ಇಲ್ಲಿರುವುದು ಕೇವಲ 3% ಮಾತ್ರ ಶುದ್ಧ ನೀರು. ಶತ ಕೋಟಿಗೂ ಹೆಚ್ಚು ಜನರು ನಿಯಮಿತವಾಗಿ ನೀರನ್ನ ಹೊಂದಿರುವುದಿಲ್ಲ ಮತ್ತು 2.7 ಶತಕೋಟಿ ಜನರು ವಾರ್ಷಿಕವಾಗಿ ಕನಿಷ್ಠ ಒಂದು ತಿಂಗಳ ಕಾಲ ನೀರಿನ ಕೊರತೆಯನ್ನು ಅನುಭವಿಸುತ್ತಿದ್ದಾರೆ ಅನ್ನೋದನ್ನ ಕಳೆದ ವರ್ಷ ತಜ್ಞರ ಸಮಿತಿಯ ವರದಿಯೊಂದು ಬಹಿರಂಗಪಡಿಸಿತ್ತು.
ವರದಿಗಳನ್ನು ಅವಲೋಕಿಸಿದಾಗ, ಪ್ರಪಂಚದಾದ್ಯಂತದ ಅತ್ಯಂತ ಜನಪ್ರಿಯ ನಗರಗಳೇ ಕುಡಿಯುವ ನೀರಿನ (Drinking Water) ಕೊರತೆಯ ಅಪಾಯ ಎದುರಿಸುತ್ತಿವೆ. ಕುಡಿಯುವ ನೀರಿನ ಕೊರತೆಯು ಈ ಪ್ರಮುಖ ನಗರಗಳಲ್ಲಿಯೂ ಇದೆ ಎನ್ನುವುದು ಗಮನಾರ್ಹ ಸಂಗತಿ. ಹವಾಮಾನ ಬದಲಾವಣೆ, ಮಾನವನ ಚಟುವಟಿಕೆಗಳು ಮತ್ತು ಜನಸಂಖ್ಯೆಯ ಬೆಳವಣಿಗೆಯಿಂದಾಗಿ 2030ರ ವೇಳೆಗೆ ಜಾಗತಿಕ ಸಿಹಿನೀರಿನ ಪೂರೈಕೆಯಲ್ಲಿ 40% ಕೊರತೆ ಉಂಟಾಗುತ್ತದೆ ಎಂದು ವಿಶ್ವಸಂಸ್ಥೆಯ ಸಹಯೋಗದ ಬೆಂಬಲಿತ ಸಂಸ್ಥೆ ಮುನ್ಸೂಚನೆ ನೀಡಿವೆ.
ದಕ್ಷಿಣ ಆಫ್ರಿಕಾದ (South Africa) ಕೇಪ್ ಟೌನ್ ನಂತಹ ಮಹಾ ನಗರವೂ ಸಹ ನೀರಿನ ಕೊರತೆ ಅನುಭವಿಸುತ್ತಿರುವ ಪ್ರಮುಖ ದೇಶಗಳ ನಗರ ಪಟ್ಟಿಯಲ್ಲಿ ಸೇರಿಕೊಂಡಿದೆ. 2017 ಮತ್ತು 2018 ರಲ್ಲಿ ನೀರಿನ ಪ್ರಮಾಣವು 14% ಕ್ಕಿಂತಲೂ ಕಡಿಮೆಗೆ ಇಳಿದಾಗ ನಗರ ತೀವ್ರವಾದ ಅಭಾವ ಎದುರಿಸಿತ್ತು. ಬೇಸಿಗೆಯ ಹೊರತಾಗಿ ಇಲ್ಲಿ ನೀರಿನ ಮಟ್ಟಗಳು ಈಗ 50% ರಷ್ಟಿದ್ದರೂ, ವಿಶೇಷವಾಗಿ ಶುಷ್ಕ ಋತುವಿನ ಸಮೀಪಿಸುತ್ತಿರುವಂತೆ ಇದು ಸಾಕಾಗುವುದಿಲ್ಲ. ಕಾಬೂಲ್‌ನಲ್ಲೂ ಕೂಡ ನೀರಿಗೆ ಹಾಹಾಕಾರ ಶುರುವಾಗಿದ್ದು, ಮುಂದಿನ 5 ವರ್ಷಗಳಲ್ಲಿ ನೀರೇ ಇಲ್ಲದೇ ಭೂಮಿ ಒಣಗಿಹೋಗುತ್ತದೆ ಎನ್ನುತ್ತಿವೆ ವರದಿಗಳು. ಇದೀಗ ನೀರಿನ ಕೊರತೆ ಎದುರಿಸುತ್ತಿರುವ ದೇಶಗಳ ಸಾಲಿಗೆ ಇರಾನ್ ಕೂಡ ಸೇರಿಕೊಂಡಿದೆ.
ಹೌದು.. ನೀರಿನ ಕೊರತೆ ಮತ್ತು ಭದ್ರತಾ ಆತಂಕದಿಂದಾಗಿ ಇರಾನ್ ದೇಶವು ಈಗ ತನ್ನ ರಾಜಧಾನಿಯನ್ನ ಸ್ಥಳಾಂತರಿಸಲು ಸಿದ್ಧತೆ ನಡೆಸಿದೆ. ಶೀಘ್ರದಲ್ಲೇ ಈ ಕುರಿತಾಗಿ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಇತ್ತೀಚಿನ ಭಾಷಣವೊಂದರಲ್ಲಿ ಮಾತನಾಡಿದ್ದ ಟೆಹ್ರಾನ್ ಅಧ್ಯಕ್ಷ ಮಸೌದ್ ಪಜೇಶ್ಕಿಯಾನ್, ಪ್ರಸ್ತುತ 1.5 ಕೋಟಿ ಜನರಿಗೆ ನೆಲೆಯಾಗಿರುವ ಟೆಹ್ರಾನ್ (Tehran) ಇರಾನ್ ರಾಜಧಾನಿಯಾಗಿದೆ. ಇದನ್ನ ಶೀಘ್ರದಲ್ಲೇ ಸ್ಥಳಾತರಿಸಬಹುದು, ನಮಗೆ ಬೇರೆ ಆಯ್ಕೆಯಿಲ್ಲ. ಏಕೆಂದ್ರೆ ಟೆಹ್ರಾನ್‌ನಲ್ಲಿ ಬೆರಳೆಣಿಕೆಯ ದಿನಕ್ಕೆ ಬೇಕಾಗುವಷ್ಟು ನೀರು ಮಾತ್ರ ಬಾಕಿ ಉಳಿದಿದೆ. ಮಳೆ ಬರದಿದ್ದರೆ, ಟೆಹ್ರಾನ್‌ಗೆ ನೀರನ್ನು ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ಬರುತ್ತದೆ ಅಂತ ಹೇಳಿದ್ದರು. ಇದಕ್ಕೆ ಕಾರಣ ಇಲ್ಲಿ ಉಂಟಾಗಿರುವ ನೀರಿನ ಕೊರತೆ. ಅಷ್ಟಕ್ಕೂ ಇರಾನ್‌ನ ಈ ಪರಿಸ್ಥಿತಿಗೆ ಕಾರಣ ಏನು? ಟೆಹ್ರಾನ್ ಬಿಟ್ಟರೆ ಮುಂದಿನ ರಾಜಧಾನಿ ಆಯ್ಕೆ ಯಾವುದು? ಅನ್ನೋದನ್ನ ತಿಳಿಯಬೇಕಿದ್ದರೆ ಮುಂದೆ ಓದಿ…
ಹಿಮ ನದಿಗಳೇ ಆಸರೆ
ಅಂದೊಂದು ಕಾಲವಿತ್ತು… ಇರಾನ್‌ನಲ್ಲಿ ನೀರಿಗೆ ಯಾವುದೇ ಬರ ಇರಲಿಲ್ಲ. ಏಕೆಂಂದ್ರೆ ಇಲ್ಲಿನ ಪರ್ವತಗಳಲ್ಲಿ ಹಿಮ ಕರಗಿದಾಗೆಲ್ಲ ನದಿಗಳು ತುಂಬಿ ಹರಿಯುತ್ತಿದ್ದವು. ಹಿಮ ನದಿಗಳನ್ನೇ ಟೆಹ್ರಾನ್ ಕೂಡ ಅವಲಂಬಿಸಿತ್ತು. ಇದರ ನಡುವೆ ಮಳೆ ಜನರ ಕೈ ಹಿಡಿಯುತ್ತಿತ್ತು. ಜನಸಂಖ್ಯೆ ಕಡಿಮೆ ಹಾಗೂ ಕಡಿಮೆ ಕೃಷಿ ಚಟುವಟಿಕೆಗಳಿಂದ ಮಳೆಯಿಲ್ಲದಿದ್ದ ಸಂದರ್ಭದಲ್ಲೂ ನೀರಿನ ಕೊರತೆ ಕಂಡುಬಂದಿರಲಿಲ್ಲ. ಆದ್ರೆ ಇಲ್ಲಿನ ನಗರಗಳು ಅಭಿವೃದ್ಧಿ ಹೊಂದುವ ಜೊತೆಗೆ ಜನಸಂಖ್ಯೆ ಕೂಡ ಹೆಚ್ಚುತ್ತಾ ಬಂದಿತು, ಇದರಿಂದ ಅಂತರ್ಜಲ ಬಳಕೆ ಹೆಚ್ಚಾಗಿ ಹವಾಮಾನಕ್ಕೆ ಪೆಟ್ಟುಬಿದ್ದಿತು. ಇದು ಇರಾನ್‌ನ ಇಂದಿನ ನೀರಿನ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ.
ಇರಾನ್‌ನ ಕೆಲವು ಪ್ರದೇಶಗಳು ಇದೇ ರೀತಿ 6 ವರ್ಷಗಳಿಂದ ಬರಗಾಲ ಎದುರಿಸುತ್ತಿವೆ. ಕಳೆದ ಬೇಸಿಗೆಯಲ್ಲಿ 50 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗಿತ್ತು. ಟೆಹ್ರಾನ್ ಪರಿಸ್ಥಿತಿ ಇನ್ನೂ ಕೆಟ್ಟದಾಗುತ್ತಿದೆ. ಹೀಗಾಗಿ ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ನೀರಿನ ಅಗತ್ಯವೂ ಹೆಚ್ಚುತ್ತಿದೆ. ಈ ಹಿಂದೆ 350 ಮಿಲಿಯನ್ ಘನ ಮೀಟರ್ ನೀರನ್ನ ವಾರ್ಷಿಕವಾಗಿ ಬಳಸಲಾಗುತ್ತಿತ್ತು. ಆದ್ರೆ 2025ರ ಅಂಕಿ ಅಂಶವು 2025ರ ವೇಳೆಗೆ ಇರಾನ್ ನೀರಿನ ಬಳಕೆ ಪ್ರಮಾಣ 1.2 ಶತಕೋಟಿ ಘನಮೀಟರ್‌ಗೆ ತಲುಪಿದೆ. ಟೆಹ್ರಾನ್ ಸೀಮಿತಿ ಸಿಹಿನೀರಿನ ಬಳಕೆ ಹೊರತಾಗಿಯೂ ಇಷ್ಟು ಪ್ರಮಾಣದ ನೀರು ಬಳಕೆ ಆಗಿದೆ.
ಜಲಾಶಯ ಒಣಗುತ್ತಿವೆ, ನೀರೇ ಕಳ್ಳತನವಾಗ್ತಿದೆ
ಪ್ರಮುಖ ನೀರಿನ ಆಶ್ರಯ ತಾಣಗಳಾಗಿದ್ದ 5 ಜಲಾಶಯಗಳ ಪೈಕಿ 4 ಬಹುತೇಕ ಒಣಗಿವೆ. ಅಲ್ಲಲ್ಲಿ ಕಾಣುವ ಬಾವಿಗಳೂ ಬತ್ತಿಹೋಗುತ್ತಿವೆ. ಹೇಗೋ ಹರಸಾಹಸ ಪಟ್ಟು ಟ್ಯಾಂಕರ್ ನೀರನ್ನ ಅಲ್ಲಿನ ಸರ್ಕಾರ ಪೂರೈಸುತ್ತಿದೆ. ಆದ್ರೆ ಅದು ಜನರನ್ನ ತಲುಪುವ ಮೊದಲೇ ಅರ್ಧದಷ್ಟು ಕಳ್ಳತನವಾಗ್ತಿದೆ. ಒಂದಿಷ್ಟು ಪ್ರಮಾಣದ ನೀರು ಜನರನ್ನ ತಲುಪುವಷ್ಟರಲ್ಲಿ ದಾರಿಯಲ್ಲೇ ಸೋರಿಹೋಗುತ್ತಿದೆ. ಹೀಗಾಗಿ ಪ್ರತಿ ವ್ಯಕ್ತಿಗೆ ತಲಾ 130 ಲೀಟರ್ ನೀರು ಬಳಸಲು ಮಿತಿ ಹೇರಲಾಗಿದೆ. ಆದ್ರೆ ಉಚಿತವಾಗಿ ನೀಡುತ್ತಿರೋದ್ರಿಂದ ಹೆಚ್ಚಿನ 200 ರಿಂದ 400 ಲೀಟರ್ ವರೆಗೆ ಬಳಸುತ್ತಿದ್ದಾರೆ. ಇದರಿಂದ ನೀರಿನ ಬಿಕ್ಕಟ್ಟು ರಾಜಧಾನಿಗೆ ಮಾತ್ರ ಸೀಮಿತವಾಗಿಲ್ಲ. ಡಜನ್‌ಗಟ್ಟಲೆ ಪ್ರಾಂತ್ಯಗಳು ಪರಿಣಾಮ ಎದುರಿಸುತ್ತಿವೆ.
ಸಹಜವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಮಳೆಯಾಗಬೇಕಿತ್ತು. ಆದ್ರೆ ಈವರೆಗೆ ಒಂದು ಹನಿ ಮಳೆಯೂ ಭೂಮಿ ತಾಕಿಲ್ಲ. ನೂರಾರು ಹಳ್ಳಿಗಳು ಟ್ಯಾಂಕರ್ ನೀರನ್ನೇ ಅವಲಂಬಿಸಿವೆ. ಇನ್ನೂ ಕೆಲವರು ನೀರು ಸಿಗದೇ ಊರಿಗೆ ಊರನ್ನೇ ತೊರೆಯುತ್ತಿದ್ದಾರೆ.
ಕೃಷಿಯೂ ಕಾರಣವಾಯ್ತಾ?
ಸದ್ಯ ನೀರಿನ ಬಿಕ್ಕಟ್ಟಿಗೆ ಈಗ ಕೃಷಿ ಚಟುವಟಿಕೆಗಳನ್ನ ದೂಷಿಸಲಾಗುತ್ತಿದೆ. ವಾಸ್ತವವಾಗಿ ದೇಶದ 85 ಪ್ರತಿಶತ ಧಾನ್ಯವನ್ನ ದೇಶೀಯವಾಗಿ ಉತ್ಪಾದಿಸಲಾಗುತ್ತದೆ. ಈ ಚಟುವಟಿಕೆಯು ಒಟ್ಟು ನೀರಿನ ಅತಿದೊಡ್ಡ ಪಾಲನ್ನು ಒಳಗೊಳ್ಳುತ್ತಿದೆ. ಟೆಹ್ರಾನ್ ಬಿಕ್ಕಟ್ಟಿಗೆ ಇದೂ ಕೂಡ ಒಂದು ಕಾರಣ ಅಂತ ಹೇಳಲಾಗ್ತಿದೆ.
ಪಾಕಿಸ್ತಾನದ ನೆರೆಹೊರೆಯಲ್ಲಿ ಇರಾನ್ ರಾಜಧಾನಿ?
ಪಾಕಿಸ್ತಾನದ ಪಕ್ಕದಲ್ಲಿರುವ ಇರಾನ್‌ನ ಮಕ್ರಾನ್ ಪ್ರಾಂತ್ಯದಲ್ಲಿ ರಾಜಧಾನಿಯನ್ನು ಸ್ಥಾಪಿಸುವ ಬಗ್ಗೆ ಚರ್ಚೆ ಹೆಚ್ಚುತ್ತಿದೆ. ಮಕ್ರಾನ್ ಪಾಕಿಸ್ತಾನದೊಂದಿಗೆ ಗಡಿಯನ್ನು ಸಹ ಹಂಚಿಕೊಂಡಿದೆ. ಇರಾನ್‌ನ ಚಾಬರ್ ಬಂದರು ಇಲ್ಲೇ ಇದೆ. ಈ ಇರಾನಿನ ಪ್ರಾಂತ್ಯವು ಹೇರಳವಾದ ನೀರನ್ನು ಹೊಂದಿದೆ. ಮಕ್ರಾನ್ ಪ್ರಾಂತ್ಯವು ಟೆಹ್ರಾನ್ ಗಿಂತ ಸುರಕ್ಷಿತವಾಗಿದೆ. ಇಸ್ರೇಲ್ ಮಕ್ರಾನ್ ಮೇಲೆ ಸುಲಭವಾಗಿ ದಾಳಿ ಮಾಡಲು ಸಾಧ್ಯವಿಲ್ಲ. ಇದು ಟೆಹ್ರಾನ್ ನಿಂದ 1,000 ಕಿಲೋಮೀಟರ್ ದೂರದಲ್ಲಿದೆ. ಇಸ್ರೇಲಿ ಯುದ್ಧ ವಿಮಾನಗಳು ಅದನ್ನು ತಲುಪುವ ಮೊದಲೇ ನಾಶವಾಗುತ್ತವೆ. ಹೀಗಾಗಿ ಮಕ್ರಾನ್‌ಗೆ ರಾಜಸ್ಥಾನಿ ಸ್ಥಳಾಂತರಿಸಲು ಇರಾನ್ ಎದುರುನೋಡುತ್ತಿದೆ.
ಇದಲ್ಲದೇ ಟೆಹ್ರಾನ್‌ನಿಂದ ಜನಸಂಖ್ಯೆಯನ್ನ ಸ್ಥಳಾಂತರಿಸಲು 9 ಲಕ್ಷ ಕೋಟಿಗಿಂತ ಹೆಚ್ಚು ವೆಚ್ಚವಾಗುತ್ತದೆ. ಹಾಗಾಗಿ ಇದು ಪ್ರಸ್ತುತ ಇರಾನ್‌ಗೆ ಕಾರ್ಯಸಾಧ್ಯವೆಂದು ತೋರುತ್ತಿಲ್ಲ. ದೇಶವ ಆರ್ಥಿಕವಾಗಿ ಬಲಿಷ್ಠವಾಗಿಯೂ ಇಲ್ಲ. ಇಸ್ರೇಲ್ ವಿರುದ್ಧದ ಯುದ್ಧದಿಂದ ಸಾಕಷ್ಟು ಸಂಪತ್ತು ಕಳೆದುಕೊಂಡಿದೆ. ಇದರೊಂದಿಗೆ ಯುನೈಟೆಡ್ ಸ್ಟೇಟ್ಸ್‌ನಿಂದ ಹಲವಾರು ನಿರ್ಬಂಧಗಳನ್ನ ಎದುರಿಸುತ್ತಿದೆ. ಹೀಗಾಗಿ ಇರಾನ್ ಸ್ಥಿತಿ ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಎಂಬುದನ್ನು ಕಾದುನೋಡಬೇಕಿದೆ.






