ವಾಷಿಂಗ್ಟನ್: ಇರಾನ್ ಹೊಡೆದು ಹಾಕಿದ್ದ ಎಫ್ 15 ಈಗಲ್ (F-15E Strike Eagle) ಯುದ್ಧ ವಿಮಾನದ ಪೈಲಟ್ ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ವಿಮಾನ ಪತನಗೊಂಡ ಕೆಲವೇ ಗಂಟೆಗಳಲ್ಲಿ ಅಮೆರಿಕದ ವಿಶೇಷ ಪಡೆಗಳು ಮೊದಲ ಪೈಲಟ್‌ನನ್ನು ಯಶಸ್ವಿಯಾಗಿ ರಕ್ಷಿಸಿದರೆ ಎರಡನೇ ಪೈಲಟ್ (ಕ್ರೂ ಮೆಂಬರ್) ಅವರನ್ನು ಸುಮಾರು 48 ಗಂಟೆಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ಈ ಕಾರ್ಯಾಚರಣೆ ಅಮೆರಿಕದ ಪಾಲಿಗೆ ಅತ್ಯಂತ ಸವಾಲಿನಿಂದ ಕೂಡಿತ್ತು. ಅಂತಿಮವಾಗಿ ಇರಾನ್ (Iran) ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯ (Heavy Firefight) ನಂತರ ಅಮೆರಿಕದ ಕಮಾಂಡೋಗಳು ಎರಡನೇ ಪೈಲಟ್ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆ ಹೇಗೆ ನಡೆಯಿತು? ನಿಖರವಾಗಿ ಜಾಗ ಪತ್ತೆ ಹಚ್ಚಿ ರಕ್ಷಿಸಿದ್ದು ಹೇಗೆ ಎನ್ನುವ ಕುತೂಹಲ ಎಲ್ಲರಲ್ಲಿ ಇರುವುದು ಸಹಜ. ಹೀಗಾಗಿ ಇಲ್ಲಿ ಪೈಲಟ್ ರಕ್ಷಣೆ ಮಾಡಿದ್ದು ಹೇಗೆ ಎಂಬ ಕುತೂಹಲಕಾರಿ ವಿವರಗಳನ್ನು ನೀಡಲಾಗಿದೆ.

ರಕ್ಷಿಸಿದ್ದು ಹೇಗೆ?
ಫೈಟರ್ ಜೆಟ್‌ನಿಂದ ಎಜೆಕ್ಟ್ ಆಗಿ ಭೂಮಿಗೆ ಬಿದ್ದಿದ್ದ ಅಮೆರಿಕದ (USA) ಪೈಲಟ್ ಅನ್ನು ರಕ್ಷಿಸಿದ್ದು Combat Survivor Evader Locator (CSEL) ಹೆಸರಿನ ಸಾಧನ. ಇರಾನ್ ಸೈನಿಕರಿಂದ ತಪ್ಪಿಸಿಕೊಂಡು ಅಜ್ಞಾತ ಸ್ಥಳದಲ್ಲಿ ಅಡಗಿದ್ದ ಅಮೆರಿಕದ ಪೈಲಟ್, ಸುಮಾರು 48 ಗಂಟೆಗಳ ಕಾಲ ಈ ಸಾಧನದ ಮೂಲಕ ತನ್ನ ನಿಖರವಾದ ಸ್ಥಳವನ್ನು ಅಮೆರಿಕ ಸೇನೆಗೆ ಕಳುಹಿಸುತ್ತಿದ್ದರು.
ಇದು ಅತ್ಯಾಧುನಿಕ ರೇಡಿಯೋ ಸಂವಹನ ವ್ಯವಸ್ಥೆಯಾಗಿದ್ದು, ಶತ್ರುಗಳ ಕಣ್ತಪ್ಪಿಸಿ ಜಿಪಿಎಸ್ (GPS) ಮತ್ತು ಸ್ಯಾಟಲೈಟ್ ಮೂಲಕ ಸಂದೇಶ ಕಳುಹಿಸಲು ಸಹಾಯ ಮಾಡುತ್ತದೆ. ಈ ಸಾಧನ ನೀಡಿದ ನಿಖರ ಮಾಹಿತಿಯ ಆಧಾರದ ಮೇಲೆ ಅಮೆರಿಕದ ಪಡೆಯು ಇರಾನ್ ಗಡಿಯೊಳಗೆ ನುಗ್ಗಿ ಪೈಲಟ್ ಅವರನ್ನು ಯಶಸ್ವಿಯಾಗಿ ರಕ್ಷಿಸಿದೆ.
ಸಿಎಸ್‌ಇಎಲ್ ವಿಶೇಷತೆ ಏನು?
CSEL ಎನ್ನುವುದು ಕೇವಲ ಒಂದು ರೇಡಿಯೋ ಅಲ್ಲ, ಇದು ಶತ್ರುಗಳ ಪ್ರದೇಶದಲ್ಲಿ ಸಿಲುಕಿಕೊಂಡ ಸೈನಿಕರ ಅಥವಾ ಪೈಲಟ್‌ಗಳ ಜೀವ ಉಳಿಸುವ ಒಂದು ಸಂಪೂರ್ಣ ಸಂವಹನ ವ್ಯವಸ್ಥೆ ಎಂದೇ ಬಣ್ಣಿಸಲಾಗುತ್ತದೆ.
ಈ ಸಾಧನವು ಬಳಸುವ ಸಂಕೇತಗಳನ್ನು ಶತ್ರುಗಳು ಪತ್ತೆಹಚ್ಚುವುದು ಅಥವಾ ಡಿಕೋಡ್ ಮಾಡುವುದು ಅಸಾಧ್ಯ. ಇದು ‘ಫ್ರೀಕ್ವೆನ್ಸಿ-ಹಾಪಿಂಗ್’ (Frequency-Hopping) ತಂತ್ರಜ್ಞಾನವನ್ನು ಬಳಸುವುದರಿಂದ ಶತ್ರು ಪಡೆಯ ಎಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಮ್‌ಗಳಿಗೂ ಪತ್ತೆ ಹಚ್ಚಲು ಸಾಧ್ಯವಿಲ್ಲ.

ಇದು ಸಾಮಾನ್ಯ ಜಿಪಿಎಸ್‌ಗಿಂತ ಹೆಚ್ಚು ನಿಖರ ಮತ್ತು ಸುರಕ್ಷಿತವಾದ ಮಿಲಿಟರಿ ದರ್ಜೆಯ ಜಿಪಿಎಸ್ ಬಳಸುತ್ತದೆ. ಇದರಿಂದ ರಕ್ಷಣಾ ಪಡೆಗೆ ಪೈಲಟ್ ಎಲ್ಲಿದ್ದಾನೆ ಎಂಬ ನಿಖರ ಮಾಹಿತಿ ತಕ್ಷಣವೇ ಲಭ್ಯವಾಗುತ್ತದೆ. ಪೈಲಟ್‌ಗಳು ಕೇವಲ ಧ್ವನಿ ಮೂಲಕವಷ್ಟೇ ಅಲ್ಲದೆ ಶತ್ರುಗಳ ಕಣ್ಣಿಗೆ ಬೀಳದಂತೆ ಸಣ್ಣ ಎನ್‌ಕ್ರಿಪ್ಟ್ ಮಾಡಿದ ಟೆಕ್ಸ್ಟ್ ಸಂದೇಶಗಳನ್ನು ಕಳುಹಿಸಬಹುದು.
ಈ ಸಾಧನ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಸುಮಾರು 21 ದಿನಗಳವರೆಗೆ ಕಾರ್ಯನಿರ್ವಹಿಸಬಲ್ಲದು. ಕಠಿಣ ಪರಿಸ್ಥಿತಿಗಳಲ್ಲಿ ಪೈಲಟ್‌ಗಳು ಹಲವಾರು ದಿನಗಳ ಕಾಲ ರಕ್ಷಣೆ ಮಾಡುತ್ತದೆ. ಈ ಸಾಧನವನ್ನು ಗಟ್ಟಿಮುಟ್ಟಾಗಿ ವಿನ್ಯಾಸ ಮಾಡಲಾಗಿದ್ದು ಫೈಟರ್ ಜೆಟ್ ವಿಮಾನದಿಂದ ಸೀಟ್ ಎಜೆಕ್ಟ್ ಆಗುವ ಸಂದರ್ಭದ ಒತ್ತಡವನ್ನು ತಡೆದುಕೊಳ್ಳಬಲ್ಲದು. ಅಲ್ಲದೆ ಇದು ಸುಮಾರು 10 ಮೀಟರ್ ನೀರಡಿಯಲ್ಲಿಯೂ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ.
ಯುದ್ಧದ ಆತಂಕ ಅಥವಾ ಗಾಯಗೊಂಡ ಸಮಯದಲ್ಲಿಯೂ ಸೈನಿಕರು ಸುಲಭವಾಗಿ ಬಳಸುವಂತೆ ಇದರ ಸ್ಕ್ರೀನ್ ಮತ್ತು ಬಟನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
ಇರಾನ್‌ಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಯಾಕೆ?
ಇರಾನ್ ಸೇನೆಯು ಪೈಲಟ್‌ಗಾಗಿ ಹುಡುಕಾಟ ನಡೆಸುತ್ತಿತ್ತು. ಅಷ್ಟೇ ಅಲ್ಲದೇ ಯಾರಾದರೂ ಪತ್ತೆ ಹಚ್ಚಿದರೆ ನಗದು ಬಹುಮಾನ ಸಹ ನೀಡಲಾಗುವುದು ಎಂದು ಘೋಷಿಸಿತ್ತು. ಆದರೆ ಈ ಸಾಧನವು ‘ಬರ್ಸ್ಟ್ ಡೇಟಾ’ (Bursts of data) ರೂಪದಲ್ಲಿ ಮಾಹಿತಿಯನ್ನು ಕಳುಹಿಸಿದ್ದರಿಂದ ಶತ್ರು ಪಡೆಯ ರೇಡಾರ್ ಅಥವಾ ಟ್ರ್ಯಾಕಿಂಗ್ ವ್ಯವಸ್ಥೆಗಳಿಗೆ ಈ ಸಂಕೇತವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಪೈಲಟ್ ಅಡಗಿದ್ದ ಸ್ಥಳದಲ್ಲಿ ರೇಡಿಯೋ ಸಿಗ್ನಲ್‌ಗಳು ಸಿಗದಿದ್ದರೂ ಈ ಸಾಧನವು ಮಿಲಿಟರಿ ಸಂವಹನ ಉಪಗ್ರಹಗಳ (Communication Satellites) ಮೂಲಕ ನೇರವಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್‌ಗೆ (CENTCOM) ಮಾಹಿತಿಯನ್ನು ನೀಡಿತ್ತು. ಇದನ್ನೂ ಓದಿ: ಇರಾನ್ ನೆಲದಲ್ಲಿ ತನ್ನ 927 ಕೋಟಿಯ 2 ವಿಮಾನಗಳನ್ನು ಸುಟ್ಟು ಹಾಕಿದ ಅಮೆರಿಕ
ಎಲ್ಲಿ ಇರುತ್ತದೆ?
ಇದು ಸಣ್ಣದಾದ, ಗಟ್ಟಿಮುಟ್ಟಾದ ವಾಕಿ-ಟಾಕಿಯಂತೆ ಕಾಣುವ CSEL ಸಾಧನವನ್ನು ಪೈಲಟ್‌ಗಳು ತಮ್ಮ ಸರ್ವೈವಲ್ ವೆಸ್ಟ್ (ವಿಮಾನದ ಪೈಲಟ್‌ಗಳು ತಮ್ಮ ಸಮವಸ್ತ್ರದ ಮೇಲೆ ಧರಿಸುವ ಒಂದು ವಿಶೇಷವಾದ ಜಾಕೆಟ್. ವಿಮಾನ ಪತನಗೊಂಡಾಗ ಅಥವಾ ತುರ್ತು ಪರಿಸ್ಥಿತಿಯಲ್ಲಿ ಶತ್ರುಗಳ ಪ್ರದೇಶದಲ್ಲಿ ಪೈಲಟ್ ಜೀವ ಉಳಿಸಿಕೊಳ್ಳಲು ಬೇಕಾದ ಎಲ್ಲಾ ಅಗತ್ಯ ವಸ್ತುಗಳು ಈ ವೆಸ್ಟ್‌ನಲ್ಲಿರುತ್ತವೆ) ಜೇಬಿನಲ್ಲಿ ಸುರಕ್ಷಿತವಾಗಿ ಇಡಲಾಗಿರುತ್ತದೆ.
ಕೆಲವು ಸಂದರ್ಭಗಳಲ್ಲಿ, ಪ್ಯಾರಾಚೂಟ್‌ನೊಂದಿಗೆ ಬರುವ ತುರ್ತು ರಕ್ಷಣಾ ಕಿಟ್‌ನಲ್ಲಿಯೂ (Survival Kit) ಇದನ್ನು ಅಳವಡಿಸಲಾಗಿರುತ್ತದೆ. ಇದನ್ನೂ ಓದಿ: Explained| ಇರಾನ್ ಅಮೆರಿಕದ F-15E Strike Eagle ವಿಮಾನವನ್ನು ಹೊಡೆದು ಹಾಕಿದ್ದು ಹೇಗೆ? ರಷ್ಯಾದ ಪಾತ್ರ ಏನು?
ಇದು ಕೇವಲ 6 ಇಂಚು ಎತ್ತರ ಮತ್ತು ಸುಮಾರು ಒಂದು ಕೆಜಿಗಿಂತ ಕಡಿಮೆ ತೂಕ ಇರುವುದರಿಂದ ಪೈಲಟ್‌ಗಳು ಇದನ್ನು ಎಲ್ಲಿಗೆ ಬೇಕಾದರೂ ಸುಲಭವಾಗಿ ಹೊತ್ತೊಯ್ಯಬಹುದು. ಈ ಸಾಧನವನ್ನು ಬೋಯಿಂಗ್ (Boeing) ಕಂಪನಿಯು ಅಮೆರಿಕದ ವಾಯುಪಡೆ, ನೌಕಾಪಡೆ ಮತ್ತು ಭೂಸೇನೆಗಾಗಿ ಅಭಿವೃದ್ಧಿಪಡಿಸಿದೆ.
ಕಾಲಿನಲ್ಲಿ ಇರುವುದಿಲ್ಲ ಯಾಕೆ?
ಯುದ್ಧ ವಿಮಾನ ಪತನಗೊಂಡಾಗ ಅಥವಾ ಪೈಲಟ್ ಕೆಳಕ್ಕೆ ಹಾರಿದಾಗ ಕಾಲುಗಳಿಗೆ ಗಾಯವಾಗುವ ಸಾಧ್ಯತೆ ಹೆಚ್ಚು. ಒಂದು ವೇಳೆ ಸಾಧನ ಕಾಲಿನಲ್ಲಿದ್ದರೆ, ಪೈಲಟ್ ನಡೆಯಲು ಅಥವಾ ಅಡಗಿಕೊಳ್ಳಲು ಕಷ್ಟವಾಗಬಹುದು. ಹೀಗಾಗಿ ಕೈಗೆ ಸುಲಭವಾಗಿ ಸಿಗುವಂತೆ ಎದೆಯ ಭಾಗದ ಜೇಬಿನಲ್ಲಿ ಇದನ್ನು ಇರಿಸಲಾಗುತ್ತದೆ.

