– ಅಂತ್ಯಕ್ರಿಯೆಯಲ್ಲಿ 2 ಕೋಟಿ ಜನ ಪಾಲ್ಗೊಳ್ಳಲು ಅವಕಾಶ
ಟೆಹ್ರಾನ್: ಫೆಬ್ರವರಿ 28ರಂದು ಯುಎಸ್-ಇಸ್ರೇಲ್ ವೈಮಾನಿಕ ದಾಳಿಗೆ ಬಲಿಯಾಗಿದ್ದ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ (Khameneis Funeral) ಪ್ರಕ್ರಿಯೆಗಳು ಅಧಿಕೃತವಾಗಿ ಆರಂಭವಾಗಿದೆ. ಅಲಿ ಖಮೇನಿ ಅವತ ಪಾರ್ಥಿವ ಶರೀರವನ್ನು ಬರೋಬ್ಬರಿ 4 ತಿಂಗಳುಗಳ ಕಾಲ ಸಂರಕ್ಷಿಸಿ ಇಡಲಾಗಿತ್ತು.
ಈಗ ಯುದ್ಧದ ಕಾರ್ಮೋಡ ಸರಿದಿರುವುದರಿಂದ ಈ ದೈತ್ಯ ನಾಯಕನನ್ನ ಗೌರವಪೂರ್ವಕವಾಗಿ ಕಳುಹಿಸಿಕೊಡಲು ಇರಾನ್ ಸಿದ್ಧವಾಗಿದೆ. ಖಮೇನಿ ಅಂತ್ಯಕ್ರಿಯೆಯಲ್ಲಿ 2 ಕೋಟಿ ಜನ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ವಾರಪೂರ್ತಿ ನಡೆಯುವ ಅಂತ್ಯಕ್ರಿಯೆ ಸಮಾರಂಭದಲ್ಲಿ ಕಾಲ್ತುಳಿತ ಅಥವಾ ಸಾಮೂಹಿಕ ಸಾವು-ನೋವು ಸಂಭವಿಸುವ ಸಾಧ್ಯತೆಗಳಿವೆ ಎಂದು ಇರಾನ್‌ನ ಅಧಿಕಾರಿಗಳು ಅಂದಾಜಿಸಿದ್ದಾರೆ. ಜನಸಂದಣಿಯಿಂದ 1,500 ರಿಂದ 3,000 ಜನ ಸಾಯಬಹುದು ಅಂದಾಜಿಸಲಾಗಿದೆ.

ವರದಿಗಳ ಪ್ರಕಾರ, ಇರಾನಿನ ರೆಡ್ ಕ್ರೆಸೆಂಟ್ ಮತ್ತು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಂಸ್ಥೆಯು ಮೊದಲ ಉಪಾಧ್ಯಕ್ಷ ಮೊಹಮ್ಮದ್-ರೆಜಾ ಅರೆಫ್ ಅವರಿಗೆ ಕಳುಹಿಸಿದ ಪತ್ರದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಅಂತ್ಯಕ್ರಿಯೆಯ ಮೆರವಣಿಗೆ ಸಮಯದಲ್ಲಿ 1,500 ರಿಂದ 3,000 ಸಾವು-ನೋವು ಆಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ಸಮಾರಂಭದಲ್ಲಿ 2 ಕೋಟಿ ಜನ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ ತಾಪಮಾನ ಏರಿಕೆಯೊಂದಿಗೆ, ಭೀಕರ ಕಾಲ್ತುಳಿತ ಅಥವಾ ಇತರ ಜನಸಂದಣಿ-ಸಂಬಂಧಿತ ಘಟನೆಗಳಿಗೆ ಕಾರಣವಾಗಬಹುದು ಎಂದು ಊಹಿಸಲಾಗಿದೆ.
ವರದಿಯ ಪ್ರಕಾರ, ದೊಡ್ಡ ವಿಪತ್ತು ಸಂಭವಿಸಿದಲ್ಲಿ ಮೃತಪಟ್ಟವರು ಮತ್ತು ಕಾಣೆಯಾದವರನ್ನ ನಿರ್ವಹಣೆ ಸಂಘಟಿಸಲು ವಿಶೇಷ ಘಟಕವನ್ನೂ ಸ್ಥಾಪಿಸಲಾಗಿದೆ. ಅಂತ್ಯಸಂಸ್ಕಾರಕ್ಕೆ ಮುಂಚಿತವಾಗಿಯೇ 3,000 ಸಮಾಧಿಗಳನ್ನ ಸಿದ್ಧಪಡಿಸಲಾಗಿದೆ.
