ಕಾರವಾರ: ಚಾಲಕನೊಬ್ಬ ಲಾರಿಯನ್ನು ಯದ್ವತದ್ವಾ ಚಾಲನೆ ಮಾಡಿದ ಪರಿಣಾಮ ಲಾರಿಯಲ್ಲಿ ಸಾಗಣೆ ಮಾಡಲಾಗುತ್ತಿದ್ದ ಕಬ್ಬಿಣದ ಕಂಬ ಸರ್ಕಾರಿ ಬಸ್ಸಿಗೆ ಡಿಕ್ಕಿಯಾದ ಕಾರಣ ಮಹಿಳೆ ಸೇರಿ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಮಣಕಿ ಬಳಿ ನಡೆದಿದೆ.
ಕುಮಟಾ ತಾಲೂಕಿನ ಹೊಸಕಟ್ಟಾದ ನಿವಾಸಿ ಶಶಿಕಲಾ (60), ಗೊನೆಹಳ್ಳದ ತೋರ್ಕೆ ನಿವಾಸಿ ವೆಂಕಟೇಶ ಗಣಪತಿ ಗುನಗ (46) ಮೃತಪಟ್ಟವರು. ಇನ್ನು ಘಟನೆಯಲ್ಲಿ 25 ಜನರು ಗಾಯಗೊಂಡಿದ್ದಾರೆ. ಇವರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಯಿಂದ ಉಡುಪಿ ಜಿಲ್ಲೆಯ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ಏನಿದು ಘಟನೆ: ಗೋಕರ್ಣ ದಿಂದ ಕುಮಟಾ ಕಡೆ ಹೋಗುತ್ತಿದ್ದ ಸರ್ಕಾರಿ ಬಸ್ಸಿಗೆ ಮಂಗಳೂರು ಕಡೆಯಿಂದ ಮಹಾರಾಷ್ಟ್ರದ ಕಡೆ ಹೋಗುತ್ತಿದ್ದ ಲಾರಿಯಲ್ಲಿದ್ದ ಕಬ್ಬಿಣದ ಕಂಬ ಬಸ್ಸಿನ ಬಲಭಾಗಕ್ಕೆ ಡಿಕ್ಕಿಯಾಗಿದೆ. ಪರಿಣಾಮವಾಗಿ ಬಸ್ಸಿನ ಬಲಭಾಗದಲ್ಲಿ ಕುಳಿತ್ತಿದ್ದವರಿಗೆ ಹೆಚ್ಚಿನ ಹಾನಿಯಾಗಿದೆ.
ಅಪಘಾತಗೊಂಡ ಲಾರಿ ನಾಗಾಲ್ಯಾಂಡ್ ಮೂಲದಾಗಿದ್ದು, ಅನುಮತಿಯಿಲ್ಲದೇ ಬೃಹತ್ ಆಕಾರದ ಕಬ್ಬಿಣದ ಕಂಬದಂತಹ ವಸ್ತುವನ್ನು ತೆಗೆದುಕೊಂಡು ಹೋಗುತಿದ್ದ ವೇಳೆ ಘಟನೆ ನಡೆದಿದೆ. ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ಲಾರಿಯಲ್ಲಿ ತುಂಬಿಸಲಾಗಿರುವ ಕಬ್ಬಿಣದ ಕಂಬ ವಾಹನದ ಅಗಲಕ್ಕಿಂತ ಹೆಚ್ಚಿದ್ದು, ರಸ್ತೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಕುರಿತು ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಚೆಕ್ ಪೋಸ್ಟ್ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಆರೋಪ ಮಾಡಿರುವ ಸಾರ್ವಜನಿಕರು, ಅಂತರ್ ರಾಜ್ಯ ಲಾರಿಯನ್ನು ಒಂದು ಚೆಕ್ ಪೋಸ್ಟ್ ನಿಂದ ಔಟ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.