ಧರ್ಮಶಾಲಾ: ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್‌ಗಳ ಅಮೋಘ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19ನೇ ಆವೃತ್ತಿಯ ಐಪಿಎಲ್‌ನ ಪ್ಲೇ ಆಫ್‌ಗೆ (IPL Playoffs) ಭರ್ಜರಿ ಎಂಟ್ರಿ ಕೊಟ್ಟಿದೆ. ಆದ್ರೆ, ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಗಿಂತಲೂ ಹೆಚ್ಚು ಗಮನ ಸೆಳೆಯುತ್ತಿರುವುದು ಆಸ್ಟ್ರೇಲಿಯಾ ವೇಗಿ ಜೋಶ್ ಹೇಜಲ್ವುಡ್.
ಹೌದು. ಫೈನಲ್ ಪಂದ್ಯದ ʻಲಕ್ಕಿ ಪ್ಲೇಯರ್ʼ ಎಂದೇ ಬ್ರ್ಯಾಂಡ್ ಆಗಿರುವ ಹೆಜಲ್ವುಡ್ (Josh Hazlewood), ಇಂದಿನ ಪಂದ್ಯದ ಗೇಮ್ ಚೇಂಜರ್ ಕೂಡ ಆಗಿದ್ದಾರೆ.

ಗೇಮ್ ಚೇಂಜರ್ ಹೇಗೆ?
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಜೋಶ್ ಒಂದೇ ವಿಕೆಟ್ ಪಡೆದರೂ ನಿರ್ಣಾಯಕ ಸಮಯದಲ್ಲಿ ರನ್ ಬಿಟ್ಟುಕೊಡದೇ ಬ್ಯಾಟರ್‌ಗಳ ವಿರುದ್ಧ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. 4 ಓವರ್ ಬೌಲಿಂಗ್ ಮಾಡಿದ ಹೇಜಲ್ವುಡ್ ಮೊದಲ 2 ಓವರ್‌ಗಳಲ್ಲಿ 22 ರನ್ ಬಿಟ್ಟುಕೊಟ್ಟಿದ್ದರು. ಆದ್ರೆ ಡೆತ್ ಓವರ್‌ನಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದ್ರು. 17ನೇ ಓವರ್‌ನ ಮೊದಲ ಎಸೆತದಲ್ಲೇ ಸ್ಟೋಯ್ನಿಸ್ ವಿಕೆಟ್ ಪಡೆದ ಜೋಶ್ ಕೇವಲ 7 ರನ್ ಬಿಟ್ಟುಕೊಟ್ಟರು. ಜೊತೆಗೆ 19ನೇ ಓವರ್‌ನಲ್ಲೂ 7 ರನ್‌ಗಳಿಗೆ ಪಂಜಾಬ್ ಬ್ಯಾಟರ್‌ಗಳನ್ನ ಕಟ್ಟಿಹಾಕುವ ಮೂಲಕ ಪಂದ್ಯದ ಗೇಮ್ ಚೇಂಜರ್ ಎನಿಸಿಕೊಂಡರು.
ಫೈನಲ್ ಪಂದ್ಯದ ʻಲಕ್ಕಿ ಪ್ಲೇಯರ್ʼ
ಜೋಶ್ ಹೇಜಲ್‌ವುಡ್ ಇದುವರೆಗೂ ಆಡಿರುವ ಯಾವುದೇ ತಂಡಗಳು ಫೈನಲ್ ಪಂದ್ಯದಲ್ಲಿ ಸೋಲಿನ ಮುಖವನ್ನೇ ನೋಡಿಲ್ಲ. 18ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ ರೋಚಕ ಗೆಲುವು ಸಾಧಿಸಿತ್ತು. ಆಗಲೂ ಜೋಶ್ ಹೆಜಲ್ವುಡ್ ನಿರ್ಣಾಯಕ ಪಾತ್ರ ವಹಿಸಿದ್ದರು.

ಆರ್‌ಸಿಬಿ ತಂಡದ ಪರವಾಗಿ ಫೈನಲ್ ಪಂದ್ಯದಲ್ಲಿ ಆಡುವುದಕ್ಕೂ ಮೊದಲು ಹೇಜಲ್ವುಡ್ 6 ಫೈನಲ್ ಪಂದ್ಯದಲ್ಲಿ ಆಡಿದ್ದರು. ಆ 6 ಪಂದ್ಯಗಳಲ್ಲಿಯೂ ಆಸ್ಟ್ರೇಲಿಯಾ ತಂಡ ಕಪ್ ಗೆದ್ದಿತ್ತು. 2012 ರಲ್ಲಿ ಜೋಶ್ ಹೇಜಲ್‌ವುಡ್ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಟೂರ್ನಿಯ ಫೈನಲ್ ಪಂದ್ಯ ಆಡಿದ್ದರು. ಸಿಡ್ನಿ ಸಿಕ್ಸರ್ ಪರ ಆಡಿದ್ದ ಜೋಶ್ ಹೇಜಲ್‌ವುಡ್ ಟ್ರೋಫಿ ಗೆದ್ದು ಸಂಭ್ರಮಿಸಿದ್ದರು.
2015ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಪ್ರಮುಖ ಬೌಲರ್ ಆಗಿದ್ದ ಜೋಶ್ ಹೇಜಲ್‌ವುಡ್ ಟ್ರೋಫಿ ಗೆದ್ದು ಬೀಗಿದ್ದರು. 2021ರ ಐಪಿಎಲ್ ಟೂರ್ನಿಯಲ್ಲಿ ಜೋಶ್ ಹೇಜಲ್‌ವುಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. 2021ರಲ್ಲಿ ಸಿಎಸ್‌ಕೆ ಟ್ರೋಫಿ ಗೆದ್ದಿತ್ತು. 2021ರಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜೋಶ್ ಹೇಜಲ್‌ವುಡ್ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು. ಆ ಬಾರಿಯೂ ಆಸ್ಟ್ರೇಲಿಯಾ ಟ್ರೋಫಿ ಗೆದ್ದಿತ್ತು. 2023ರಲ್ಲಿ ಜೋಶ್ ಹೇಜಲ್‌ವುಡ್ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯ ಆಡಿದ್ದು, ಆಸ್ಟ್ರೇಲಿಯಾ ಟ್ರೋಫಿ ಗೆದ್ದಿತ್ತು. ಅದೇ ರೀತಿ ಜೋಶ್ ಆಡಿದ ಆರ್‌ಸಿಬಿ ತಂಡ 2025 ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಆರ್‌ಸಿಬಿ ಗೆಲುವಿಗೆ ಟರ್ನಿಂಗ್ ಸಿಕ್ಕಿದ್ದೆಲ್ಲಿ?
ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಂಜಾಬ್ ಕಿಂಗ್ಸ್‌ಗೆ ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್ ಆಧಾರವಾಗಿದ್ದರು. 32 ಎಸೆತಗಳಲ್ಲಿ 67 ರನ್ ಸಿಡಿಸಿದ್ದ ಈ ಜೋಡಿ ತಂಡಕ್ಕೆ ಗೆಲುವು ತಂದುಕೊಡುವ ನಿರೀಕ್ಷೆಯಲ್ಲಿದ್ದರು. ಆದ್ರೆ ಮಾರಕ ವೇಗಿ ಜೋಶ್ ಹೇಜಲ್ವುಡ್ ಈ ಜೋಡಿ ಆಟಕ್ಕೆ ಬ್ರೇಕ್ ಹಾಕಿದರು. 16 ಓವರ್‌ಗಳಲ್ಲಿ 160 ರನ್ ಗಳಿಸಿದ್ದ ಪಂಜಾಬ್‌ಗೆ ಇನ್ನೂ 24 ಎಸೆತಗಳಲ್ಲಿ 63 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಜೋಶ್ (Josh Hazlewood) ಮೊದಲ ಎಸೆತದಲ್ಲೇ ಸ್ಟೋಯ್ನಿಸ್ ಅವರ ವಿಕೆಟ್ ಉರುಳಿಸಿ ಪೆವಿಲಿಯನ್‌ಗಟ್ಟಿದರು. ಅಲ್ಲದೇ ಆ ಓವರ್‌ನಲ್ಲಿ ಕೇವಲ 7 ರನ್ ಬಿಟ್ಟುಕೊಟ್ಟರು. ಅಷ್ಟೇ ಅಲ್ಲ, 19ನೇ ಓವರ್‌ನಲ್ಲೂ ಕೇವಲ 7 ರನ್ ಬಿಟ್ಟುಕೊಟ್ಟ ಜೋಶ್ ಬಿಗಿ ಹಿಡಿತ ಸಾಧಿಸಿದ್ರು. ಇದು ಪಂದ್ಯದ ಗತಿಯನ್ನೇ ಬದಲಿಸಿತು.

200 ರನ್ ಗಡಿ ದಾಟದ ಪಂಜಾಬ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಪಂಜಾಬ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸದ್ಯ 4ನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್‌ಗೆ ಪ್ಲೇ ಆಫ್ ಹಾದಿ ಇನ್ನೂ ಕಠಿಣವಾಗಿದೆ.

