6 ಆಟಗಾರರ ರಿಟೇನ್‌ಗೆ ಬಿಸಿಸಿಐ ಅವಕಾಶ, ಪರ್ಸ್‌ ಮೊತ್ತ 120 ರಿಂದ 157 ಕೋಟಿ ರೂ.ಗೆ ಹೆಚ್ಚಳ!

Public TV
2 Min Read
IPL 2024 8

-2025 ರಿಂದ 2027ರ ಆವೃತ್ತಿಗಳಲ್ಲಿಯೂ ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌ಗೆ ಅಸ್ತು

ಬೆಂಗಳೂರು: 2025ರ ಐಪಿಎಲ್‌ (IPL 2025) ಕೂಟಕ್ಕೆ ತಯಾರಿ ಆರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಮೆಗಾ ಹರಾಜು (Mega Auction) ನಡೆಯಲಿದ್ದು, ಅದಕ್ಕಾಗಿ ಫ್ರಾಂಚೈಸಿಗಳು ಮತ್ತು ಐಪಿಎಲ್‌ ಆಡಳಿತ ಮಂಡಳಿ ಸಿದ್ದತೆ ನಡೆಸುತ್ತಿದೆ. ಕಳೆದ ಕೆಲವು ವಾರಗಳಿಂದ ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಬಗೆಗಿನ ನಿಯಮಗಳ ಬಗ್ಗೆ ಚರ್ಚೆ ನಡೆದಿದೆ.

ಶನಿವಾರ ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಮಂಡಳಿ ಸಭೆಯಲ್ಲಿ 2025-27ರ ವರೆಗಿನ ಐಪಿಎಲ್‌ ನಿಯಮಾವಳಿಗಳ ಕುರಿತು ಬಿಸಿಸಿಐ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದೆ.

IPL RCB

ಸಭೆಯ ಪ್ರಮುಖ ನಿರ್ಣಯಗಳೇನು?
* ಫ್ರಾಂಚೈಸಿಯೊಂದು ಆರ್‌ಟಿಎಂ ಕಾರ್ಡ್‌ನೊಂದಿಗೆ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು.
* ಅಲ್ಲದೇ ಪ್ರತಿ ಫ್ರಾಂಚೈಸಿ 5 ಕ್ಯಾಪ್ಡ್‌ (ಭಾರತೀಯ ಮತ್ತು ಸಾಗರೋತ್ತರ) ಮತ್ತು 2 ಅನ್‌ಕ್ಯಾಪ್ಡ್‌ಪ್ಲೇಯರ್‌ಗಳನ್ನು ಹೊಂದಬಹುದು.
* ಫ್ಯಾಂಚೈಸಿಗಳ ಪರ್ಸ್‌ ಮೊತ್ತವನ್ನು 100 ಕೋಟಿ ರೂ. ನಿಂದ 120 ಕೋಟಿ ರೂ. ಹೆಚ್ಚಿಸಲಾಗಿದೆ. ಈ ಹಿಂದೆ 2024ರ ಐಪಿಎಲ್‌ನಲ್ಲಿ, ಸಂಬಳದ ಮಿತಿ (ಹರಾಜು ಪರ್ಸ್ + ಹೆಚ್ಚುತ್ತಿರುವ ಕಾರ್ಯಕ್ಷಮತೆಯ ವೇತನ) 110 ಕೋಟಿ ರೂ. ಇತ್ತು. 2025ರ ಐಪಿಎಲ್‌ಗೆ ಸಂಬಳದ ಮಿತಿ ಸೇರಿ ಒಟ್ಟು ಪರ್ಸ್‌ ಮೊತ್ತ 146 ಕೋಟಿ ರೂ., 2026ಕ್ಕೆ 151 ಕೋಟಿ ರೂ., 2027ಕ್ಕೆ 157 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
* ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಂದ್ಯ ಶುಲ್ಕವನ್ನು ಪರಿಚಯಿಸಲಾಗಿದೆ. ಈ ಮೂಲಕ ಪ್ರತಿ ಆಟಗಾರನು ಲೀಗ್‌ ಪಂದ್ಯವೊಂದಕ್ಕೆ 7.5 ಲಕ್ಷ ರೂ. ಹೆಚ್ಚುವರಿ ಪಡೆದುಕೊಳ್ಳಲಿದ್ದಾರೆ.
* ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ವಿದೇಶಿ ಆಟಗಾರರು ಮೆಗಾ ಹರಾಜಿಗೆ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ವರ್ಷ ಅವರು ಹರಾಜಿನಲ್ಲಿ ನೋಂದಾಯಿಸಲು ಅನರ್ಹರಾಗುತ್ತಾರೆ.
* ಹರಾಜಿನಲ್ಲಿ ಆಯ್ಕೆಯಾದ ಯಾವುದೇ ಆಟಗಾರ, ಬಳಿಕ ಐಪಿಎಲ್‌ ಆರಂಭಕ್ಕೂ ಮುನ್ನ ತನ್ನನ್ನು ಅಲಭ್ಯಗೊಳಿಸಿದ್ರೆ, ಮುಂದಿನ 2 ಸೀಸನ್‌ಗಳಿಗೆ ನಿಷೇಧಿಸಲಾಗುತ್ತದೆ.
* ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ 5 ವರ್ಷ ಪೂರೈಸಿದ ಭಾರತೀಯ ಕ್ರಿಕೆಟ್‌ ಆಟಗಾರ ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗುತ್ತಾರೆ. ಇದು ಭಾರತೀಯ ಆಟಗಾರರಿಗೆ ಮಾತ್ರ ಅನ್ವಯಿಸುತ್ತದೆ.
* 2025 ರಿಂದ 2027ರ ಆವೃತ್ತಿಗಳಲ್ಲಿಯೂ ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌ ಮುಂದುವರಿಯುತ್ತದೆ.

Share This Article