ಧರ್ಮಶಾಲಾ: ಗುಜರಾತ್ ಟೈಟಾನ್ಸ್ (Gujarat Titans)ವಿರುದ್ಧದ ಪಂದ್ಯದಲ್ಲಿ 92 ರನ್‌ಗಳ ಬೃಹತ್ ಅಂತರದ ಗೆಲುವು ದಾಖಲಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ರಜತ್ ಪಾಟಿದರ್(Rajat Patidar) ತಮ್ಮ ತಂತ್ರಗಾರಿಕೆಯ ಬಗ್ಗೆ ಮಾತನಾಡಿದ್ದಾರೆ. ಉತ್ತಮ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ಅವರು, ಪ್ರಶಸ್ತಿ ಸ್ವೀಕರಿಸಿದ ನಂತರ ಮಾಜಿ ಕ್ರಿಕೆಟಿಗ ಮುರಳಿ ಕಾರ್ತಿಕ್ ಅವರೊಂದಿಗೆ ಸಂವಾದ ನಡೆಸಿದರು.
ಪಂದ್ಯದಲ್ಲಿ ವೇಗಿ ಜೇಕಬ್ ಡಫಿ(Jacob Duffy) ಅವರ ಜಾಗದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ವೆಸ್ಟ್ ಇಂಡೀಸ್ ಆಲ್ರೌಂಡರ್ ರೊಮಾರಿಯೊ ಶೆಪಾರ್ಡ್(Romario Shepherd) ಅವರನ್ನು ಕಣಕ್ಕಿಳಿಸಿದ ನಿರ್ಧಾರದ ಬಗ್ಗೆ ಮುರಳಿ ಕಾರ್ತಿಕ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನಾಯಕ ರಜತ್ ಪಾಟಿದರ್, ಮುಂಬರುವ ಫೈನಲ್ ಪಂದ್ಯದ ದೃಷ್ಟಿಯಿಂದ ಈ ಪ್ರಯೋಗ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿದರು.
ನಾವು ಫೈನಲ್ ಪಂದ್ಯದಲ್ಲಿ ಬೌಲಿಂಗ್ ಮಾಡಬೇಕಾಗಿ ಬಂದರೆ, ಮಧ್ಯಮ ಓವರ್‌ಗಳಲ್ಲಿ ರೊಮಾರಿಯೊ ಶೆಪಾರ್ಡ್ ಹೇಗೆ ಬೌಲಿಂಗ್ ಮಾಡಬಹುದು ಮತ್ತು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಪರಿಶೀಲಿಸಲು ಈ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು ಎಂದು ಪಾಟಿದರ್ ತಿಳಿಸಿದರು.
ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಶೆಪಾರ್ಡ್ ಕೇವಲ ಒಂದು ಓವರ್ ಮಾತ್ರ ಬೌಲಿಂಗ್ ಮಾಡುವ ಅವಕಾಶ ಪಡೆದರು. ಆ ಒಂದು ಓವರ್‌ನಲ್ಲಿ ಅವರು 15 ರನ್‌ಗಳನ್ನು ಬಿಟ್ಟುಕೊಟ್ಟರಾದರೂ, ಫೈನಲ್‌ನಂತಹ ಮಹತ್ವದ ಪಂದ್ಯಕ್ಕೂ ಮುನ್ನ ತಂಡದ ಬೌಲಿಂಗ್ ಆಯ್ಕೆಗಳನ್ನು ಪರೀಕ್ಷಿಸಲು ಈ ಪಂದ್ಯ ಸಹಕಾರಿಯಾಯಿತು. ಸದ್ಯ ಬೃಹತ್ ಜಯದೊಂದಿಗೆ ಆರ್‌ಸಿಬಿ ತಂಡದ ಆತ್ಮವಿಶ್ವಾಸ ದುಪ್ಪಟ್ಟಾಗಿದೆ.
ಗುಜರಾತ್ ಇನ್ನಿಂಗ್ಸ್‌ನ 11 ಓವರ್ ಪೂರ್ಣಗೊಂಡ ಬಳಿಕ ಜೇಕಬ್ ಡಫಿ ಜಾಗದಲ್ಲಿ ಶೆಪಾರ್ಡ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನ ಪ್ರವೇಶಿಸಿದರು. ಶೆಪಾರ್ಡ್ ಪ್ರವೇಶಿಸುವ ಮೊದಲೇ ಡಫಿ ತಮ್ಮ 4 ಒವರ್‌ಗಳ ಕೋಟಾವನ್ನು ಪೂರ್ಣಗೊಳಿಸಿ 39 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಇದನ್ನೂ ಓದಿ: ಗುಜರಾತ್ ಬಗ್ಗುಬಡಿದು ಫೈನಲ್‌ಗೆ RCB ‘ರಾಯಲ್’ ಎಂಟ್ರಿ – ಈ ಸಲನೂ ಕಪ್ ನಮ್ದೆ?

ನಿಯಮ ಏನು ಹೇಳುತ್ತೆ?
ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಎನ್ನುವುದು ಪಂದ್ಯದ ಮಧ್ಯದಲ್ಲಿ ಒಬ್ಬ ಆಟಗಾರನ ಬದಲಿಗೆ ಮತ್ತೊಬ್ಬ ಆಟಗಾರನನ್ನು ತಂದು ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಿಸುವ ಒಂದು ವಿಶೇಷ ತಾಂತ್ರಿಕ ನಿಯಮವಾಗಿದೆ. ಟಾಸ್ ಮುಗಿದ ತಕ್ಷಣ ಕ್ಯಾಪ್ಟನ್ ತನ್ನ ಪ್ಲೇಯಿಂಗ್ XI ಜೊತೆಗೆ 5 ಬದಲಿ ಆಟಗಾರರ ಹೆಸರನ್ನು ನೀಡಬೇಕು.
ಈ 5 ಜನರಲ್ಲಿ ಕೇವಲ ಒಬ್ಬನನ್ನು ಮಾತ್ರ ಪಂದ್ಯದ ಮಧ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನಕ್ಕೆ ಇಳಿಸಬಹುದು. ಮೈದಾನದಿಂದ ಹೊರಹೋಗುವ ಆಟಗಾರ ಮತ್ತೆ ಆ ಪಂದ್ಯದಲ್ಲಿ ಫೀಲ್ಡಿಂಗ್ ಮಾಡಲು ಕೂಡ ವಾಪಸ್ ಬರುವಂತಿಲ್ಲ.
ಹೊರಹೋದ ಬೌಲರ್ ಈಗಾಗಲೇ ಓವರ್‌ಗಳನ್ನು ಬೌಲಿಂಗ್ ಮಾಡಿದ್ದರೂ ಹೊಸದಾಗಿ ಬರುವ ಇಂಪ್ಯಾಕ್ಟ್ ಪ್ಲೇಯರ್ ತನಗೆ ಸಿಗುವ ಪೂರ್ತಿ 4 ಓವರ್‌ಗಳನ್ನು ಬೌಲಿಂಗ್ ಮಾಡಬಹುದು.
ಪ್ಲೇಯಿಂಗ್ XI ನಲ್ಲಿ 4 ವಿದೇಶಿ ಆಟಗಾರರಿದ್ದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕೇವಲ ಭಾರತೀಯ ಆಟಗಾರನನ್ನು ಮಾತ್ರ ತರಬೇಕು. ಪ್ಲೇಯಿಂಗ್ XI ನಲ್ಲಿ 3 ಅಥವಾ ಅದಕ್ಕಿಂತ ಕಡಿಮೆ ವಿದೇಶಿ ಆಟಗಾರರಿದ್ದರೆ ಆಗ ಮಾತ್ರ ವಿದೇಶಿ ಆಟಗಾರನನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬಹುದು.
ಜೋಶ್ ಹ್ಯಾಜಲ್‌ವುಡ್, ಟಿಮ್ ಡೇವಿಡ್, ಜೇಕಬ್ ಡಫಿ ಅವರಿಗೆ ಪ್ಲೇಯಿಂಗ್ XI ನಲ್ಲಿ ಜಾಗ ನೀಡಿದ್ದರಿಂದ ರೊಮಾರಿಯೊ ಶೆಪಾರ್ಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆರ್‌ಸಿಬಿ ಆಡಿಸಿತ್ತು.
