ಹರಾಜಿನಲ್ಲಿ ಆಯ್ಕೆಯಾಗಿ ಅಲಭ್ಯರಾಗುವ ಆಟಗಾರರಿಗೆ ಖಡಕ್‌ ವಾರ್ನಿಂಗ್‌; ನಿಯಮ ಕಡೆಗಣಿಸಿದ್ರೆ 2 ವರ್ಷ ಬ್ಯಾನ್‌

Public TV
3 Min Read
RCB vs CSK 1

ಬೆಂಗಳೂರು: 2025ರ ಐಪಿಎಲ್‌ (IPL 2025) ಕ್ರಿಕೆಟ್‌ ಹಬ್ಬಕ್ಕೆ ತಯಾರಿ ಆರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಮೆಗಾ ಹರಾಜು (Mega Auction) ನಡೆಯಲಿದ್ದು, ಅದಕ್ಕಾಗಿ ಫ್ರಾಂಚೈಸಿಗಳು ಮತ್ತು ಐಪಿಎಲ್‌ ಆಡಳಿತ ಮಂಡಳಿ ಸಿದ್ಧತೆಯಲ್ಲಿ ತೊಡಗಿದೆ. ಈ ನಡುವೆ ಬಿಸಿಸಿಐ 2025 ರಿಂದ 2027ರ ಐಪಿಎಲ್‌ ಋತುಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು, ಮಹತ್ವದ ಬದಲಾವಣೆ ತಂದಿದೆ.

IPL 2024 8

ಈ ಹಿಂದಿನ ಆವೃತ್ತಿಗಳಲ್ಲಿ ಕೆಲ ಆಟಗಾರರು ಅದರಲ್ಲೂ ವಿದೇಶಿ ಆಟಗಾರರು ಹರಾಜಿನಲ್ಲಿ ಆಯ್ಕೆಯಾದ ಬಳಿಕ ಪಂದ್ಯಗಳಿಗೆ ಅಲಭ್ಯರಾಗುತ್ತಿದ್ದರು. ರಾಷ್ಟ್ರೀಯ ತಂಡಗಳಿಗೆ ಆಡುವ ಕಾರಣ ನೀಡಿ ತಮ್ಮ ತವರು ತಂಡಗಳಿಗೆ ಮರಳುತ್ತಿದ್ದರು. ಇದೀಗ ಅಂತಹ ಆಟಗಾರರಿಗೆ ಬಿಸಿಮುಟ್ಟಿಸಲು ಬಿಸಿಸಿಐ ಹೊಸ ನಿಯಮ ಜಾರಿಗೊಳಿಸಿದೆ.

IPL 2023 RRvsCSK 4

ಹರಾಜಿನಲ್ಲಿ ಆಯ್ಕೆಯಾದ ಯಾವುದೇ ಆಟಗಾರ, ಐಪಿಎಲ್‌ ಆರಂಭಕ್ಕೂ ಮುನ್ನ ತನ್ನನ್ನು ಅಲಭ್ಯಗೊಳಿಸಿದ್ರೆ, ಮುಂದಿನ 2 ಸೀಸನ್‌ಗಳಿಗೆ ನಿಷೇಧಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ. ಇದರಿಂದ ಹರಾಜಿನಲ್ಲಿ ಬಿಕರಿಯಾದ ಆಟಗಾರರು ಆವೃತ್ತಿ ಮುಗಿಯುವವರೆಗೆ ಆಯ್ಕೆಯಾದ ಫ್ರಾಂಚೈಸಿಗಳಿಗೆ ಆಡಬೇಕಾಗುತ್ತದೆ. ಇದನ್ನೂ ಓದಿ: 6 ಆಟಗಾರರ ರಿಟೇನ್‌ಗೆ ಬಿಸಿಸಿಐ ಅವಕಾಶ, ಪರ್ಸ್‌ ಮೊತ್ತ 120 ರಿಂದ 157 ಕೋಟಿ ರೂ.ಗೆ ಹೆಚ್ಚಳ!

IPL 2023 RRvsCSK 1

16.25 ಕೋಟಿ ಪಡೆದು 15 ರನ್‌ ಗಳಿಸಿದ್ದ ಸ್ಟೋಕ್ಸ್‌
2023 ಐಪಿಎಲ್‌ ಆವೃತ್ತಿಗೆ ಬರೋಬ್ಬರಿ 16.25 ಕೋಟಿ ರೂ.ಗೆ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರನ್ನ ಸಿಎಸ್‌ಕೆ ತಂಡವು ಖರೀದಿಸಿತ್ತು. ಆದ್ರೆ 31 ವರ್ಷದ ಆಟಗಾರ ಸ್ಟೋಕ್ಸ್‌ ಕೇವಲ ಮೊದಲ ಎರಡು ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡು ಕ್ರಮವಾಗಿ 7 ಮತ್ತು 8 ರನ್‌ ಗಳಿಸಿದರು. ಹೀಗಾಗಿ ಅವರು ಗಳಿಸಿದ ಒಂದೊಂದು ರನ್‌ ಬೆಲೆ 1.08 ಕೋಟಿ ಮೊತ್ತವನ್ನು ಸಿಎಸ್‌ಕೆ ಫ್ರಾಂಚೈಸಿ ಕೊಟ್ಟಂತಾಗಿತ್ತು. ಒಂದೇ ಒಂದು ಓವರ್‌ ಬೌಲಿಂಗ್‌ ಮಾಡಿ 18 ರನ್‌ ಕೊಟ್ಟರು. ನಂತರ ಗಾಯಗೊಂಡ ಅವರು ಫಿಟ್‌ನೆಸ್‌ ಸಮಸ್ಯೆಗೆ ಒಳಗಾಗಿ ಪ್ಲೇಯಿಂಗ್‌ 11ನಿಂದ ಹೊರಗುಳಿದರು. ಆದ್ರೆ ಐಪಿಎಲ್‌ ಬಳಿಕ ನಡೆದ ಆಶಸ್‌ ಟೂರ್ನಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

IPL 2023 Gujarat Taitans 2

ಅಲ್ಲದೇ ಕಳೆದ ಎರಡು ಆವೃತ್ತಿಗಳಲ್ಲಿ ಆಸೀಸ್‌ ಟಾಪ್‌ ಆಟಗಾರರದ ಡೇವಿಡ್‌ ವಾರ್ನರ್‌, ಮಿಚೆಲ್‌ ಮಾರ್ಷ್‌ ಅವರು ತಮ್ಮ ರಾಷ್ಟ್ರೀಯ ತಂಡಕ್ಕೆ ಅರ್ಧದಲ್ಲೇ ಮರಳಿದ್ದರು. ಇದು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಭಾರೀ ಹೊಡೆತ ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಬಿಸಿಸಿಐ ಹರಾಜಿನಲ್ಲಿ ಆಯ್ಕೆಯಾದ ಬಳಿಕ ಅಲಭ್ಯರಾಗುವ ಆಟಗಾರರಿಗೆ ಬಿಸಿಮುಟ್ಟಿಸಲು ಹೊಸ ನಿಯಮ ಜಾರಿಗೊಳಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾ ಸ್ಟಾರ್‌ ಸರ್ಫರಾಜ್‌ ಖಾನ್‌ ಸಹೋದರನಿಗೆ ಆಕ್ಸಿಡೆಂಟ್

ಸಭೆಯ ಪ್ರಮುಖ ನಿರ್ಣಯಗಳೇನು?
* ಫ್ರಾಂಚೈಸಿಯೊಂದು ಆರ್‌ಟಿಎಂ ಕಾರ್ಡ್‌ನೊಂದಿಗೆ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು.
* ಅಲ್ಲದೇ ಪ್ರತಿ ಫ್ರಾಂಚೈಸಿ 5 ಕ್ಯಾಪ್ಡ್‌ (ಭಾರತೀಯ ಮತ್ತು ಸಾಗರೋತ್ತರ) ಮತ್ತು 2 ಅನ್‌ಕ್ಯಾಪ್ಡ್‌ಪ್ಲೇಯರ್‌ಗಳನ್ನು ಹೊಂದಬಹುದು.
* ಫ್ಯಾಂಚೈಸಿಗಳ ಪರ್ಸ್‌ ಮೊತ್ತವನ್ನು 100 ಕೋಟಿ ರೂ. ನಿಂದ 120 ಕೋಟಿ ರೂ. ಹೆಚ್ಚಿಸಲಾಗಿದೆ. ಹಾಗಾಗಿ 2025ರ ಐಪಿಎಲ್‌ ಋತುವಿನಲ್ಲಿ ಸಂಬಳ ಮಿತಿ ಸೇರಿ ಒಟ್ಟು ಪರ್ಸ್‌ ಮೊತ್ತ 146 ಕೋಟಿ ರೂ., 2026ಕ್ಕೆ 151 ಕೋಟಿ ರೂ., 2027ಕ್ಕೆ 157 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
* ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಂದ್ಯ ಶುಲ್ಕವನ್ನು ಪರಿಚಯಿಸಲಾಗಿದೆ. ಈ ಮೂಲಕ ಪ್ರತಿ ಆಟಗಾರನು ಲೀಗ್‌ ಪಂದ್ಯವೊಂದಕ್ಕೆ 7.5 ಲಕ್ಷ ರೂ. ಹೆಚ್ಚುವರಿ ಪಡೆದುಕೊಳ್ಳಲಿದ್ದಾರೆ.
* ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ವಿದೇಶಿ ಆಟಗಾರರು ಮೆಗಾ ಹರಾಜಿಗೆ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ವರ್ಷ ಅವರು ಹರಾಜಿನಲ್ಲಿ ನೋಂದಾಯಿಸಲು ಅನರ್ಹರಾಗುತ್ತಾರೆ.
* ಹರಾಜಿನಲ್ಲಿ ಆಯ್ಕೆಯಾದ ಯಾವುದೇ ಆಟಗಾರ, ಬಳಿಕ ಐಪಿಎಲ್‌ ಆರಂಭಕ್ಕೂ ಮುನ್ನ ತನ್ನನ್ನು ಅಲಭ್ಯಗೊಳಿಸಿದ್ರೆ, ಮುಂದಿನ 2 ಸೀಸನ್‌ಗಳಿಗೆ ನಿಷೇಧಿಸಲಾಗುತ್ತದೆ.
* ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ 5 ವರ್ಷ ಪೂರೈಸಿದ ಭಾರತೀಯ ಕ್ರಿಕೆಟ್‌ ಆಟಗಾರ ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗುತ್ತಾರೆ. ಇದು ಭಾರತೀಯ ಆಟಗಾರರಿಗೆ ಮಾತ್ರ ಅನ್ವಯಿಸುತ್ತದೆ.
* 2025 ರಿಂದ 2027ರ ಆವೃತ್ತಿಗಳಲ್ಲಿಯೂ ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌ ಮುಂದುವರಿಯುತ್ತದೆ. ಇದನ್ನೂ ಓದಿ: IPL 2025 Auction: ಮೆಗಾ ಹರಾಜಿಗೂ ಮುನ್ನ ಬಿಸಿಸಿಐನಿಂದ ಆಗುತ್ತಾ ಪ್ರಮುಖ ಬದಲಾವಣೆ?

Share This Article