– ಪಾಯಿಂಟ್ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ ಗಿಲ್ ಪಡೆ
ಅಹಮದಾಬಾದ್: ಸಾಯಿ ಸುದರ್ಶನ್ ಆಕರ್ಷಕ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ಪ್ರದರ್ಶನದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 58 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗೆ 6 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. 218 ರನ್ ಗುರಿ ಬೆನ್ನತ್ತಿದ ರಾಜಸ್ಥಾನ್ 19.2 ಓವರ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಶಕ್ತವಾಯಿತು.
ಗುಜರಾತ್ ಪರ ಬ್ಯಾಟಿಂಗ್‌ನಲ್ಲಿ ಸಾಯಿ ಸುದರ್ಶನ್ ಮಿಂಚಿದರು. 53 ಬಾಲ್‌ಗೆ 8 ಫೋರ್, 3 ಸಿಕ್ಸರ್‌ನೊಂದಿಗೆ 82 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಜೋಸ್ ಬಟ್ಲರ್ (36), ಎಂ.ಶಾರುಖ್ ಖಾನ್ (36), ರಾಹುಲ್ ತೆವಾಟಿಯಾ (24) ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವು ಸವಾಲಿನ ಮೊತ್ತ ಪೇರಿಸಲು ನೆರವಾದರು.
ಗಿಲ್ ಪಡೆ ನೀಡಿ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ರಾಜಸ್ಥಾನ್ ಹೀನಾಯ ಸೋಲನುಭವಿಸಿತು. 159 ರನ್‌ಗಳಿಗೆ ಆಲೌಟ್ ಆಗಿ ಸೋತಿತು. ಪ್ರಮುಖ ಬ್ಯಾಟರ್‌ಗಳ ನೀರಸ ಪ್ರದರ್ಶನವು ತಂಡದ ಸೋಲಿಗೆ ಕಾರಣವಾಯಿತು. ಯಶಸ್ವಿ ಜೈಸ್ವಾಲ್ 6, ನಿತಿಶ್ ರಾಣಾ 1, ಧ್ರುವ ಜುರೇಲ್ 5, ಶುಭಮ್ ದುಬೆ ಕೇವಲ 1 ರನ್‌ಗೆ ಔಟಾಗಿದ್ದು, ತಂಡಕ್ಕೆ ದೊಡ್ಡ ಆಘಾತ ನೀಡಿತು.
ಈ ಮಧ್ಯೆಯೂ ಶಿಮ್ರಾನ್ ಹೆಟ್ಮೆಯರ್ ಅರ್ಧಶತಕ (52) ಗಳಿಸಿ ಗಮನ ಸೆಳೆದರು. ಸಂಜು ಸ್ಯಾಮ್ಸನ್ 41 ಹಾಗೂ ರಿಯಾನ್ ಪರಾಗ್ 26 ರನ್ ಗಳಿಸಿದರು. ರಾಜಸ್ಥಾನ್ ಪರ ಗುಜರಾತ್ ಬೌಲರ್‌ಗಳು ಮಿಂಚಿದರು. ಕನ್ನಡಿಗ ಪ್ರಸಿದ್ಧ್ ಕೃಷ್ಣ 3 ವಿಕೆಟ್ ಕಿತ್ತು ಗಮನ ಸೆಳೆದರು. ರಶೀದ್ ಖಾನ್, ಸಾಯ್ ಕಿಶೋರ್ ತಲಾ 2 ಹಾಗೂ ಮಹಮ್ಮದ್ ಸಿರಾಜ್, ಅರ್ಷದ್ ಖಾನ್, ಕುಲ್ವಂತ್ ಖೇಜ್ರೋಲಿಯಾ ತಲಾ 1 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.