IPL 2024: ಬಿದ್ದು ಎದ್ದು ಗೆದ್ದ ಪಂತ್‌ – ಐಪಿಎಲ್‌ನಲ್ಲಿ ರಿಷಭ್‌ ವಿಶೇಷ ಸಾಧನೆ

Public TV
2 Min Read
Rishab Pant 2

ಲಕ್ನೋ: ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿ ಸತತ 14 ತಿಂಗಳು ವೃತ್ತಿಪರ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡದ ನಾಯಕ ರಿಷಭ್‌ ಪಂತ್‌ (Rishab Pant) ಐಪಿಎಲ್‌ನಲ್ಲಿ ವಿಶೇಷ ಸಾಧನೆ ಮಾಡಿ ಕೊಹ್ಲಿ, ಶುಭಮನ್‌ ಗಿಲ್‌ ಅವರ ಎಲೈಟ್‌ ಪಟ್ಟಿ ಸೇರಿದ್ದಾರೆ.

ಶುಕ್ರವಾರ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಭ್‌ ಪಂತ್‌ 9 ರನ್‌ ಗಳಿಸುವ ಮೂಲಕ ಐಪಿಎಲ್‌ನಲ್ಲಿ 3,000 ರನ್‌ ಪೂರೈಸಿದರು. ಅಲ್ಲದೇ ಐಪಿಎಲ್‌ನಲ್ಲಿ (IPL 2024) ಈ ವಿಶೇಷ ಸಾಧನೆ ಮಾಡಿದ 25ನೇ ಆಟಗಾರ ಸಹ ಎನಿಸಿಕೊಂಡರು. ಈ ಪಂದ್ಯದಲ್ಲಿ ಪಂತ್‌ ಒಟ್ಟು 41 ರನ್‌ (24 ಎಸೆತ, 4 ಬೌಂಡರಿ, 2 ಸಿಕ್ಸ್‌) ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಇದನ್ನೂ ಓದಿ: ಡೆಲ್ಲಿಗೆ 6 ವಿಕೆಟ್‌ಗಳ ಭರ್ಜರಿ ಜಯ – ಕೊನೆಯ ಸ್ಥಾನಕ್ಕೆ ಜಾರಿದ ಆರ್‌ಸಿಬಿ

Rishab Pant

ಎಲೈಟ್‌ ಪಟ್ಟಿಗೆ ಪಂತ್‌:
ಐಪಿಎಲ್‌ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 3 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಎನಿಸಿಕೊಂಡಿರುವ ರಿಷಭ್ ಪಂತ್, ಈ ಸಾಧನೆ ಮಾಡಿದ 25ನೇ ಆಟಗಾರನಾಗಿದ್ದಾರೆ. ಅಲ್ಲದೇ ರಿಷಬ್ ಪಂತ್ 26 ವರ್ಷ, 191 ದಿನಗಳಿದ್ದಾಗ 3 ಸಾವಿರ ರನ್‌ ಪೂರೈಸಿದ್ದು, ಈ ಸಾಧನೆ ಮಾಡಿದ ಭಾರತದ 3ನೇ ಕಿರಿಯ ಬ್ಯಾಟರ್ ಆಗಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ 26 ವರ್ಷ, 186 ದಿನಗಳಿದ್ದಾಗ, ನಂತರ ಶುಭಮಾನ್ ಗಿಲ್ 24 ವರ್ಷ, 215 ದಿನಗಳಿದ್ದಾಗ ಈ ಸಾಧನೆ ಮಾಡಿದ್ದರು.

Rishab pant

ಐಪಿಎಲ್‌ನಲ್ಲಿ ಪಂತ್‌ ಸಾಧನೆ ಏನು?
ತಾವಾಡಿದ 104 ಪಂದ್ಯ, 103 ಇನ್ನಿಂಗ್ಸ್‌ಗಳಲ್ಲಿ ಪಂತ್‌ 3,032 ರನ್‌ ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 17 ಅರ್ಧಶತಕಗಳೂ ಸೇರಿದ್ದು, ವೈಯಕ್ತಿಕ ಗರಿಷ್ಠ ಸ್ಕೋರ್‌ 128 ರನ್‌ ಆಗಿದೆ. ಇದರಲ್ಲಿ ಒಟ್ಟು 276 ಬೌಂಡರಿ ಹಾಗೂ 140 ಸಿಕ್ಸರ್‌ಗಳೂ ಸೇರಿವೆ. ಇದನ್ನೂ ಓದಿ: 4.3 ಕೋಟಿ ರೂ. ವಂಚನೆ – ಹಾರ್ದಿಕ್‌ ಪಾಂಡ್ಯ ಮಲಸಹೋದರ ಅರೆಸ್ಟ್‌!

LSG

ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು 167 ರನ್‌ ಗಳಿಸಿತ್ತು. 168 ರನ್‌ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಇನ್ನೂ 11 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ ನಷ್ಟಕ್ಕೆ 170 ರನ್‌ ಹೊಡೆದು ಟೂರ್ನಿಯಲ್ಲಿ 2ನೇ ಜಯ ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಿಗಿದಿದೆ.

Share This Article