– ವಿಲ್ ಜಾಕ್ಸ್‌ಗೆ ಕಿಂಗ್ ಕೊಹ್ಲಿ ಸಾಥ್
– 500 ರನ್ ಪೂರೈಸಿ ವಿಶೇಷ ಸಾಧನೆ ಮಾಡಿದ ವಿರಾಟ್
ಅಹಮದಾಬಾದ್: ವಿಲ್ ಜಾಕ್ಸ್ (Will Jacks) ಸ್ಫೋಟಕ ಶತಕ ಹಾಗೂ ವಿರಾಟ್ ಕೊಹ್ಲಿ (Virat Kohli) ಅವರ ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ (RCB vs GT) ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
Advertisement
Advertisement
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಆರ್‌ಸಿಬಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಗುಜರಾತ್ ತಂಡಕ್ಕೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್, ಸಾಯಿ ಸುದರ್ಶನ್, ಎಂ. ಶಾರುಖ್ ಖಾನ್ (M Shahrukh Khan) ಅವರ ಅರ್ಧಶತಕಗಳ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಬಾರಿಸಿತ್ತು. 201 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಕೇವಲ 16 ಓವರ್‌ಗಳಲ್ಲೇ 206 ರನ್ ಚಚ್ಚಿ ಭರ್ಜರಿ ಗೆಲುವು ಸಾಧಿಸಿತು.
Advertisement
Advertisement
ಚೇಸಿಂಗ್ ಆರಂಭಿಸಿದ್ದ ಆರ್‌ಸಿಬಿ 3.5 ಓವರ್‌ಗಳಲ್ಲಿ 40 ರನ್‌ಗಳಿದ್ದಾಗ ಮೊದಲ ವಿಕೆಟ್ ಕಳೆದುಕೊಂಡಿತ್ತು. ನಂತರ ಜೊತೆಗೂಡಿದ ಕಿಂಗ್ ಕೊಹ್ಲಿ ಹಾಗೂ ವಿಲ್ ಜಾಕ್ಸ್ ಜೋಡಿ ಅಬ್ಬರಕ್ಕೆ ಗುಜರಾತ್ ಭಸ್ಮವಾಯಿತು. 16ನೇ ಓವರ್‌ನಲ್ಲೇ ಬರೋಬ್ಬರಿ 4 ಸಿಕ್ಸರ್, 1 ಬೌಂಡರಿ ಸಿಡಿಸಿದ ವಿಲ್ ಜಾಕ್ಸ್ ಚೊಚ್ಚಲ ಐಪಿಎಲ್ ಶತಕ ಪೂರೈಸುವ ಜೊತೆಗೆ ಪಂದ್ಯವನ್ನೂ ಗೆಲ್ಲಿಸಿದರು. ಕೊನೆವರೆಗೂ ಕ್ರೀಸ್‌ನಲ್ಲಿ ಉಳಿದ ವಿಲ್ ಜಾಕ್ಸ್ 41 ಎಸೆತಗಳಲ್ಲಿ ಸ್ಪೋಟಕ 100 ರನ್ (10 ಸಿಕ್ಸರ್, 5 ಬೌಂಡರಿ) ಚಚ್ಚಿದರೆ, 44 ಎಸೆತ ಎದುರಿಸಿದ ವಿರಾಟ್ ಕೊಹ್ಲಿ 70 ರನ್ (3 ಸಿಕ್ಸರ್, 6 ಬೌಂಡರಿ) ಗಳಿದರು. ಇದರೊಂದಿಗೆ 17ನೇ ಆವೃತ್ತಿಯ ಐಪಿಎಲ್‌ನಲ್ಲಿ 500 ರನ್ ಪೂರೈಸಿದ ಸಾಧನೆಯನ್ನೂ ಕೊಹ್ಲಿ ಮಾಡಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಟೈಟಾನ್ಸ್ 6.4 ಓವರ್‌ಗಳಲ್ಲೇ 45 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಆದ್ರೆ ಮಧ್ಯ ಕ್ರಮಾಂಕದಲ್ಲಿ 45 ಎಸೆತಗಳಲ್ಲಿ 86 ರನ್‌ಗಳ ಜೊತೆಯಾಟ ನೀಡುವ ಮೂಲಕ ಇನ್ನಿಂಗ್ಸ್ ಕಟ್ಟಿದ್ದರು. ಶಾರುಖ್ ಖಾನ್ ಔಟಾದ ಬೆನ್ನಲ್ಲೇ ಡೇವಿಡ್ ಮಿಲ್ಲರ್ ಮತ್ತು ಸುದರ್ಶನ್ ಜೋಡಿ ಮುರಿಯದ 4ನೇ ವಿಕೆಟ್‌ಗೆ 36 ಎಸೆತಗಳಲ್ಲಿ ಸ್ಫೋಟಕ 69 ರನ್ ಜೊತೆಯಾಟ ನೀಡಿತ್ತು. ಇದು ಗುಜರಾತ್ ತಂಡದಲ್ಲಿ ಉತ್ಸಾಹ ಹೆಚ್ಚಿಸಿತ್ತು.
ಗುಜರಾತ್ ಪರ ಸಾಯಿ ಸುದರ್ಶನ್ 84 ರನ್ (49 ಎಸೆತ, 4 ಸಿಕ್ಸರ್, 8 ಬೌಂಡರಿ), ಶಾರುಖ್ ಖಾನ್ 58 ರನ್ (30 ಎಸೆತ, 5 ಸಿಕ್ಸರ್, 3 ಬೌಂಡರಿ), ಡೇವಿಡ್ ಮಿಲ್ಲರ್ 26 ರನ್ (19 ಎಸೆತ, 1 ಸಿಕ್ಸರ್, 2 ಬೌಂಡರಿ), ವೃದ್ಧಿಮಾನ್ ಸಾಹಾ 5 ರನ್, ಶುಭಮನ್ ಗಿಲ್ 16 ರನ್ ಗಳಿಸಿದರು.ಆರ್‌ಸಿಬಿ ಪರ ಗ್ಲೆನ್ ಮ್ಯಾಕ್ಸ್‌ವೆಲ್, ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಕಿತ್ತರು.