ಅಭಿಷೇಕ್‌ ಶರ್ಮಾ, ಕ್ಲಾಸೆನ್‌ ಕ್ಲಾಸಿಕ್‌ ಆಟ – ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 9 ರನ್‌ ಜಯ

Public TV
2 Min Read
Sunrisers Hyderabad

ನವದೆಹಲಿ: ಆರಂಭದಲ್ಲಿ ಬ್ಯಾಟರ್‌ಗಳ ಅಬ್ಬರದ ಬ್ಯಾಟಿಂಗ್‌ ನಂತರ ಬೌಲರ್‌ಗಳ ಬಿಗಿ ದಾಳಿಯಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) 9 ರನ್‌ಗಳ ಜಯ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 6 ವಿಕೆಟ್‌ ನಷ್ಟಕ್ಕೆ 197 ರನ್‌ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 188 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

Delhi Capitals 1

ಡೆಲ್ಲಿ ನಾಯಕ ಡೇವಿಡ್‌ ವಾರ್ನರ್‌ (David Warner) ಶೂನ್ಯಕ್ಕೆ ಔಟಾದರೂ 2ನೇ ವಿಕೆಟಿಗೆ ಫಿಲ್‌ ಸಾಲ್ಟ್‌ ಮತ್ತು ಮಿಚೆಲ್‌ ಮಾರ್ಷ್‌ 68 ಎಸೆತಗಳಿಗೆ 112 ರನ್‌ ಜೊತೆಯಾಟವಾಟವಾಡಿದರು. ಆದರೆ ಫಿಲ್‌ ಸಾಲ್ಟ್‌ ಔಟಾದ ಬೆನ್ನಲ್ಲೇ ಡೆಲ್ಲಿ ಕುಸಿತ ಆರಂಭವಾಯಿತು. ಮಧ್ಯಮ ಕ್ರಮಾಂಕದ ಅಕ್ಷರ್‌ ಪಟೇಲ್‌ ಹೊರತು ಪಡಿಸಿ ಉಳಿದ ಬ್ಯಾಟರ್‌ಗಳಿಂದ ಯಾವುದೇ ಪ್ರತಿರೋಧ ಬಾರದ ಕಾರಣ ಡೆಲ್ಲಿ ಈ ಪಂದ್ಯದಲ್ಲೂ ಸೋಲನ್ನು ಅನುಭವಿಸಿದೆ.  ಇದನ್ನೂ ಓದಿ: IPLನಲ್ಲಿ ನಂ.1 ಪಟ್ಟ ಕಳೆದುಕೊಳ್ಳದ RCB – ರನ್‌ ಹೊಳೆಯಲ್ಲಿ ತೇಲಾಡಿ 2ನೇ ಸ್ಥಾನಕ್ಕೇರಿದ ಲಕ್ನೋ

Axar Patel 1 1

ಡೆಲ್ಲಿ ಪರ ಫಿಲ್‌ ಸಾಲ್ಟ್‌ 59 ರನ್‌(35 ಎಸೆತ, 9 ಬೌಂಡರಿ) ಮಿಚೆಲ್‌ ಮಾರ್ಷ್‌ 63 ರನ್‌(39 ಎಸೆತ, 1 ಬೌಂಡರಿ, 6 ಸಿಕ್ಸರ್‌) ಹೊಡೆದು ಔಟಾದರು. ಕೊನೆಯಲ್ಲಿ ಅಕ್ಷರ್‌ ಪಟೇಲ್‌ ಔಟಾಗದೇ 29 ರನ್‌ (14 ಎಸೆತ, 1 ಬೌಂಡರಿ, 2 ಸಿಕ್ಸರ್‌) ಬಾರಿಸಿ ಗೆಲುವಿನದ ದಡದತ್ತ ತಂದರು.

ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಐಪಿಎಲ್‌ (IPL) ಅಂಕಪಟ್ಟಿಯಲ್ಲಿ ಹೈದರಾಬಾದ್‌ 6 ಅಂಕದೊಂದಿಗೆ 8ನೇ ಸ್ಥಾನಕ್ಕೆ ಜಿಗಿದರೆ ಡೆಲ್ಲಿ 4 ಅಂಕಗಳೊಂದಿಗೆ 10ನೇ ಸ್ಥಾನದಲ್ಲೇ ಮುಂದುವರಿದಿದೆ.

ಹೈದರಾಬಾದ್‌ ಪರ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ 67 ರನ್‌(36 ಎಸೆತ, 12 ಬೌಂಡರಿ, 1 ಸಿಕ್ಸರ್‌) ಹೊಡೆದರೆ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್‌ ಕ್ಲಾಸೆನ್‌ ಔಟಾಗದೇ 53 ರನ್‌(27 ಎಸೆತ, 2 ಬೌಂಡರಿ, 4 ಸಿಕ್ಸರ್‌), ಅಬ್ದುಲ್‌ ಸಮದ್‌ 28 ರನ್‌(21 ಎಸೆತ, 1 ಬೌಂಡರಿ, 1 ಸಿಕ್ಸರ್)‌ ಹೊಡೆದ ಪರಿಣಮಾಮ ತಂಡದ ಮೊತ್ತ 190 ರನ್‌ ಗಡಿ ದಾಟಿತು.

Share This Article