ಸೂರ್ಯ ಸ್ಫೋಟಕ ಆಟಕ್ಕೆ ಆರ್‌ಸಿಬಿ ಬರ್ನ್‌ – ಮುಂಬೈಗೆ 6 ವಿಕೆಟ್‌ಗಳ ಭರ್ಜರಿ ಜಯ

Public TV
2 Min Read
Suryakumar Yadav

ಮುಂಬೈ: ಸೂರ್ಯಕುಮಾರ್‌ ಸ್ಫೋಟಕ ಅರ್ಧಶತಕದ ಆಟದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ವಿರುದ್ಧ ಮುಂಬೈ ಇಂಡಿಯನ್ಸ್‌ (Mumbai Indians) 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ.

ಆರ್‌ಸಿಬಿ ನೀಡಿದ 200 ರನ್‌ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 16.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 200 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿತು. ಆರ್‌ಸಿಬಿ 11 ಪಂದ್ಯಗಳಿಂದ 12 ಅಂಕ ಗಳಿಸಿದರೆ ಬೆಂಗಳೂರು 11 ಪಂದ್ಯಗಳಿಂದ 10 ಅಂಕಗಳಿಸಿ 7ನೇ ಸ್ಥಾನಕ್ಕೆ ಜಾರಿತು.

IShan Kishan

ನಾಯಕ ರೋಹಿತ್‌ ಶರ್ಮಾ ಮತ್ತು ಇಶನ್‌ ಕಿಶನ್‌ ಮೊದಲ ವಿಕೆಟಿಗೆ 4.4 ಓವರಿಗೆ 51 ರನ್‌ ಜೊತೆಯಾಟವಾಡಿದರು. ಇದರಲ್ಲಿ ಇಶನ್‌ ಕಿಶನ್‌ ಪಾಲು 42 ರನ್‌(21 ಎಸೆತ, 4 ಬೌಂಡರಿ, 4 ಸಿಕ್ಸರ್)‌. ರೋಹಿತ್‌ ಶರ್ಮಾ 7 ರನ್‌ ಗಳಿಸಿ ಔಟಾದರು.

ಮೂರನೇ ವಿಕೆಟಿಗೆ ಸೂರ್ಯಕುಮಾರ್‌ ಯಾದವ್‌ (Suryakumar Yadav) ಮತ್ತು ನೆಹಾಲ್ ವಧೇರಾ 66 ಎಸೆತಗಳಿಗೆ 140 ರನ್‌ ಜೊತೆಯಾಡಿದರು. ಸೂರ್ಯಕುಮಾರ್‌ ಯಾದವ್‌ ತಮ್ಮ ಹಳೆಯ ಲಯಕ್ಕೆ ಮರಳಿದ್ದು 6 ಸಿಕ್ಸ್‌ ಸಿಡಿಸಿದರು. ಅಂತಿಮವಾಗಿ ಸೂರ್ಯ 83 ರನ್‌ (35 ಎಸೆತ, 7 ಬೌಂಡರಿ) ಸಿಡಿಸಿ ಔಟಾದರು. ನೆಹಾಲ್ ವಧೇರಾ ಔಟಾಗದೇ 52 ರನ್‌ (34 ಎಸೆತ, 4 ಬೌಂಡರಿ, 3 ಸಿಕ್ಸರ್‌) ಸಿಡಿಸಿದರು. ಹರ್ಷಲ್‌ ಪಟೇಲ್‌ 3.3 ಓವರ್‌ ಎಸೆದು 41 ರನ್‌ ನೀಡಿದರೆ ವನಿಂದು ಹಸರಂಗ 4 ಓವರ್‌ ಎಸೆದು 53 ರನ್‌ ನೀಡಿ 2 ವಿಕೆಟ್‌ ಪಡೆದರು.

RCB

26 ಎಸೆತಗಳಲ್ಲಿ ಸೂರ್ಯ ಅರ್ಧತಕ ಸಿಡಿಸಿದ್ದರು. ಸೂರ್ಯ ಸ್ಫೋಟಕ ಆಟದಿಂದಾಗಿ 10.1 ಓವರಿಗೆ ಮುಂಬೈ 100 ರನ್‌ ಗಳಿಸಿದ್ದರೆ 15.4 ಓವರ್‌ಗಳಲ್ಲಿ 192 ರನ್‌ ಗಳಿಸಿತ್ತು.

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಬೆಂಗಳೂರು ಮೊದಲ ಓವರ್‌ನಲ್ಲೇ 1 ರನ್‌ ಗಳಿಸಿ ಕೊಹ್ಲಿ ಔಟಾದರೆ ತಂಡದ ಮೊತ್ತ 16 ರನ್‌ ಆಗುವಷ್ಟರಲ್ಲಿ ಅನುಜ್‌ ರಾವತ್‌ ಔಟಾದರು.

F du Plessis GJ

ಮೂರನೇ ವಿಕೆಟಿಗೆ ಫಾಫ್‌ ಡುಪ್ಲೆಸಿಸ್‌ ಮತ್ತು ಗ್ಲೇನ್‌ ಮ್ಯಾಕ್ಸಿವೆಲ್‌ 62 ಎಸೆತಗಳಲ್ಲಿ 120 ರನ್‌ ಜೊತೆಯಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

ಡುಪ್ಲೆಸಿಸ್‌ 65 ರನ್‌ (41 ಎಸೆತ, 5 ಬೌಂಡರಿ, 3 ಸಿಕ್ಸರ್‌), ಗ್ಲೇನ್‌ ಮ್ಯಾಕ್ಸ್‌ವೆಲ್‌ 68 ರನ್‌ (33 ಎಸೆತ, 8 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದರು. ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ 30 ರನ್‌(18 ಎಸೆತ, 4 ಬೌಂಡರಿ, 1 ಸಿಕ್ಸರ್‌) ಚಚ್ಚಿದರು. ಕೇದಾರ್‌ ಜಾದವ್ ಮತ್ತು ವನಿಂದು ಹಸರಂಗ ಔಟಾಗದೇ 12 ರನ್‌ ಹೊಡೆದ ಪರಿಣಾಮ ಆರ್‌ಸಿಬಿ 6 ವಿಕೆಟ್‌ ನಷ್ಟಕ್ಕೆ 199 ರನ್‌ ಹೊಡೆಯಿತು.

Share This Article