ದುಬೈ: ಅರಬ್ ನಾಡಲ್ಲಿ ಇಂದು ನಡೆಯಲಿರುವ 40ನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಒಂದು ಕಡೆ ಸ್ಟಾರ್ ಆಟಗಾರರ ಕಳಪೆ ಪ್ರದರ್ಶನದಿಂದಾಗಿ ಈಗಾಗಲೇ ಪ್ಲೇ ಆಫ್‍ನಿಂದ ಬಹುತೇಕ ಹೊರ ಬಿದ್ದಿರುವ ಹೈದರಾಬಾದ್‍ಗೆ ಇನ್ನುಳಿದ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೇಲೆರುವ ತವಕವೊಂದಿದ್ದರೆ, ಇತ್ತ ರಾಜಸ್ಥಾನ ತಂಡ ಮಿಶ್ರ ಫಲಿತಾಂಶದೊಂದಿಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದ್ದು, ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ 10K ಕಿಂಗ್
ತಂಡಗಳ ಬಲಾಬಲ:
ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನ ಮೊದಲ ಪಂದ್ಯದಲ್ಲಿ ರೋಚಕವಾಗಿ ಗೆದ್ದಿದ್ದ ರಾಜಸ್ಥಾನ ತಂಡ, 2ನೇ ಪಂದ್ಯದಲ್ಲಿ ನೀರಾಸ ಪ್ರದರ್ಶನದೊಂದಿಗೆ ಸೋಲು ಕಂಡಿತ್ತು. ರಾಜಸ್ಥಾನ ತಂಡದಲ್ಲಿ ಬೌಲರ್‌ಗಳು ಕಮಾಲ್ ಮಾಡುತ್ತಿದ್ದರು ಕೂಡ ಬ್ಯಾಟಿಂಗ್‍ನಲ್ಲಿ, ಯಶಸ್ವಿ ಜೈಸ್ವಾಲ್, ಮನಿಪಾಲ್ ಲೋಮ್ರರ್, ಸಂಜು ಸ್ಯಾಮ್ಸನ್ ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮ್ಯಾನ್‌ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ. ಪ್ರಮುಖವಾಗಿ ವಿದೇಶಿ ಆಟಗಾರರಾದ ಲಿಯಾಮ್ ಲಿವಿಂಗ್‍ಸ್ಟೋನ್ ಮತ್ತು ಡೇವಿಡ್ ಮಿಲ್ಲರ್ ನಿರಾಸೆ ಮೂಡಿಸುತ್ತಿದ್ದಾರೆ. ಪ್ರಮುಖವಾಗಿ ಆಲ್‍ರೌಂಡರ್ ಗಳಾದ ರಿಯಾನ್ ಪರಾಗ್, ರಾಹುಲ್ ತೇವಾಟಿಯ ಮತ್ತು ಕ್ರಿಸ್ ಮೋರಿಸ್ ಲಯದಲ್ಲಿರುವಂತೆ ಕಂಡು ಬರುತ್ತಿಲ್ಲ.
ತಂಡಕ್ಕೆ ಬೌಲರ್‌ಗಳು ಶಕ್ತಿ ತುಂಬುತ್ತಿದ್ದು ಕಾರ್ತೀಕ್ ತ್ಯಾಗಿ, ಮುಸ್ತಫಿಜುರ್ ರಹಮಾನ್ ಚೇತನ್ ಸಕಾರಿಯಾ ಮಿಂಚುತ್ತಿದ್ದಾರೆ. ರಾ ಜಸ್ಥಾನ ತಂಡ ಈವರೆಗೆ ಆಡಿರುವ 9 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 5ರಲ್ಲಿ ಸೋತು ಒಟ್ಟು 8 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಆರ್‌ಸಿಬಿ ಕ್ಯಾಪ್ಟನ್ ರೇಸ್‍ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್
ಮಹತ್ವದ ಬದಲಾವಣೆಗೆ ಮುಂದಾದ ಹೈದರಾಬಾದ್:
ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಕೇದಾರ್ ಜಾಧವ್, ರಶೀದ್ ಖಾನ್, ಜೇಸನ್ ಹೋಲ್ಡರ್‌ರಂತಹ ಬಲಿಷ್ಠ ಆಟಗಾರರ ದಂಡೆ ಇದ್ದರೂ ಕೂಡ ಸೋಲಿನತ್ತ ತಂಡ ಮುಖಮಾಡಿದೆ. ಹಾಗಾಗಿ ಇಂದು ವಾರ್ನರ್, ಮನೀಶ್ ಪಾಂಡೆ, ಕೇದಾರ್ ಜಾಧವ್‍ರನ್ನು ಹೊರಗಿಟ್ಟು ಜೇಸನ್ ರಾಯ್ ಹಾಗೂ ಇನ್ನಿತರ ಆಟಗಾರರು ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ತಂಡ ಈಗಾಗಲೇ ಪ್ಲೇ ಆಫ್‍ನಿಂದ ಹೊರ ಬಿದ್ದಿದ್ದು, ಆಡಿರುವ 9 ಪಂದ್ಯಗಳಲ್ಲಿ 1ಜಯ 8 ಸೋಲಿನೊಂದಿಗೆ 2 ಅಂಕ ಪಡೆದುಕೊಂಡಿದೆ.