ಹೈದರಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದ ಬಗ್ಗೆ ಎಲ್ಲರಿಗೂ ಮೆಚ್ಚುಗೆ ಇದೆ. ಧೋನಿ ನಾಯಕತ್ವದಲ್ಲೇ ಟೀಂ ಇಂಡಿಯಾ ಹಲವು ಟ್ರೋಫಿಗಳನ್ನು ಜಯಿಸಿದೆ. ಇತ್ತ ಐಪಿಎಲ್ ನಲ್ಲೂ ಧೋನಿ ಚೆನ್ನೈ ತಂಡವನ್ನು ಫೈನಲ್ ವರೆಗೆ ತಂದಿದ್ದರು. ಆದರೆ ಫೈನಲ್ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ತಂತ್ರಗಾರಿಕೆಯಿಂದ ಚೆನ್ನೈ ತಂಡವನ್ನು ಸೋಲಿಸಿದ್ದಾರೆ.
2019ರ ಟೂರ್ನಿಯಲ್ಲಿ ಮುಂಬೈ ತಂಡ ಫೈನಲ್‍ಗೂ ಮುನ್ನ 3 ಬಾರಿ ಚೆನ್ನೈ ವಿರುದ್ಧ ಆಡಿತ್ತು. ರೋಹಿತ್ ಬಳಗ ಮೂರು ಪಂದ್ಯಗಳಲ್ಲಿ ಜಯಗಳಿಸಿತ್ತು. ಈ ಆತ್ಮವಿಶ್ವಾಸದಿಂದಲೇ ಫೈನಲ್ ಪಂದ್ಯದಲ್ಲೂ ರೋಹಿತ್, ಚೆನ್ನೈ ತಂಡದ ವಿರುದ್ಧ ತಂತ್ರ ರೂಪಿಸಿ ಯಶಸ್ವಿಯಾಗಿದ್ದಾರೆ.
ಟಿ 20ಯಲ್ಲಿ 150 ರನ್ ಸವಾಲು ಅಲ್ಲವೇ ಅಲ್ಲ. ಆದರಲ್ಲೂ ಬಲಿಷ್ಠ ಬ್ಯಾಟಿಂಗ್ ಹೊಂದಿರುವ ಚೆನ್ನೈ ಸುಲಭವಾಗಿ ಗೆಲ್ಲಬಹುದು ಎನ್ನುವ ನಿರೀಕ್ಷೆ ಆರಂಭದಲ್ಲಿತ್ತು. ಆದರೆ ಈ ನಿರೀಕ್ಷೆಯನ್ನು ರೋಹಿತ್ ಶರ್ಮಾ ತಮ್ಮ ತಂತ್ರದ ಮೂಲಕ ತಲೆಕೆಳಗೆ ಮಾಡಿದ್ದರು.
ಲತಿಸ್ ಮಾಲಿಂಗ ಹಾಗೂ ಬುಮ್ರಾರ ಓವರಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಪಂದ್ಯವನ್ನು ಆತ್ಮವಿಶ್ವಾಸದಿಂದ ಎದುರಿಸಿದ್ದರು. ಧೋನಿ ಬ್ಯಾಟಿಂಗ್ ವೇಳೆ ಬುಮ್ರಾ, ಹಾರ್ದಿಕ್ ಬೌಲಿಂಗ್ ಆಯ್ಕೆ ರೋಹಿತ್ ಮುಂದಿತ್ತು.
ಕೃನಾಲ್ ಪಾಂಡ್ಯ ಎಸೆದ 18ನೇ ಓವರ್ ನಲ್ಲಿ ವಾಟ್ಸನ್ 3 ಸಿಕ್ಸರ್ ಸಿಡಿಸಿದ್ದರು. ಕೊನೆಯ 12 ಎಸೆತಗಳಲ್ಲಿ 18 ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾಗ ಬುಮ್ರಾ ಕೈಗೆ ಬಾಲ್ ಕೊಟ್ಟರು. ಉತ್ತಮವಾಗಿ ದಾಳಿ ಮಾಡಿದ ಬುಮ್ರಾ ಒಂದು ವಿಕೆಟ್ ಪಡೆಯುವುದರ ಜೊತೆ ಕೇವಲ 5 ರನ್ ನೀಡಿದ್ದರು. ಆದರೆ ಕೊನೆಯ ಎಸೆತವನ್ನು ಕೀಪರ್ ಕಾಕ್ ಹಿಡಿಯದ ಪರಿಣಾಮ ಬೈ ಮೂಲಕ 4 ಇತರೇ ರನ್ ಬಂದಿತು.
ಕೊನೆಯ 6 ಎಸೆತಗಳಲ್ಲಿ 9 ರನ್ ಬೇಕಿದ್ದಾಗ ಅನುಭವಿ ಬೌಲರ್, ಹಿರಿಯ ಆಟಗಾರ ಮಾಲಿಂಗ ಕೈಗೆ ರೋಹಿತ್ ಬಾಲ್ ನೀಡಿದರು. ಕೊನೆ ಓವರ್ ಮಾಲಿಂಗ ಕೈಗೆ ಕೊಟ್ಟಾಗ ಕ್ರಿಕೆಟ್ ಅಭಿಮಾನಿಗಳು ಒಮ್ಮೆ ಅಚ್ಚರಿ ವ್ಯಕ್ತಪಡಿಸಿದ್ದರು. ಯಾಕೆಂದರೆ ಇನ್ನಿಂಗ್ಸ್ ನ 16ನೇ ಓವರಿನಲ್ಲಿ ಮಾಲಿಂಗ 20 ರನ್ ನೀಡಿದ್ದರು. ಬ್ರಾವೋ ಒಂದು ಸಿಕ್ಸರ್ ಸಿಡಿಸಿದ್ದರೆ ವಾಟ್ಸನ್ ಹ್ಯಾಟ್ರಿಕ್ ಫೋರ್ ಚಚ್ಚಿದ್ದರು. ಹೀಗಾಗಿ ಕೊನೆಯ ಓವರಿನಲ್ಲಿ ಪಂದ್ಯ ಏನಾಗುತ್ತದೆ ಎನ್ನುವ ಕುತೂಹಲವಿತ್ತು. ಈ ಓವರಿನಲ್ಲಿ ಮಾಲಿಂಗ ಕೇವಲ 7 ರನ್ ನೀಡಿ ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನು ಉಳಿಸಿ ಪಂದ್ಯವನ್ನು ಗೆದ್ದುಕೊಟ್ಟರು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಜಸ್‍ಪ್ರೀತ್ ಬೂಮ್ರಾ. 4 ಓವರ್ ಎಸೆದ ಬುಮ್ರಾ ಕೇವಲ 14 ರನ್ ನೀಡಿ ಚೆನ್ನೈ ತಂಡದ ರನ್ನಿಗೆ ಕಡಿವಾಣ ಹಾಕಿದರು. ವಿಶೇಷ ಏನೆಂದರೆ ರೋಹಿತ್ ಶರ್ಮಾ ಮೆಕ್ಲಾಗನ್, ಕೃನಾಲ್ ಪಾಂಡ್ಯ, ಮಾಲಿಂಗ ಬಳಿಕ ನಾಲ್ಕನೇ ಬೌಲರ್ ಆಗಿ ಬುಮ್ರಾ ಅವರನ್ನು ಇಳಿಸಿದ್ದರು. ಇನ್ನಿಂಗ್ಸಿನ 5, 11, 17, 19ನೇ ಓವರ್ ಎಸೆದ ಬುಮ್ರಾ ರನ್ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ತಂಡದ ಆಯ್ಕೆಯೊಂದಿಗೆ ಸಮರ್ಥವಾಗಿ ಪಂದ್ಯದ ಸಂದರ್ಭವನ್ನು ಆರ್ಥೈಸಿಕೊಂಡು ಗೇಮ್ ಪ್ಲಾನ್ ಬದಲಾಯಿಸಿದ್ದ ರೋಹಿತ್ ನಡೆಗೆ ಸಚಿನ್ ಕೂಡ ಮೆಚ್ಚುಗೆ ನೀಡಿದ್ದಾರೆ. ಅಲ್ಲದೇ ಅಂತರ್ ರಾಷ್ಟ್ರಿಯ ಮಟ್ಟದಲ್ಲಿ ನಾಯಕತ್ವವನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಆಟಗಾರ ಎಂದಿದ್ದಾರೆ. ಧೋನಿ ಕುರಿತು ಪ್ರಸ್ತಾಪ ಮಾಡಿರುವ ಸಚಿನ್, ಇಬ್ಬರು ಆಟಗಾರರು ಪಂದ್ಯ ಸಂದರ್ಭಗಳನ್ನು ಬಹುಬೇಗ ತಿಳಿಯುವ ಗುಣವನ್ನು ಹೊಂದಿದ್ದು, ವಿಶ್ವಕಪ್ ತಂಡದಲ್ಲಿ ಇದು ತಂಡದ ನೆರವಿಗೆ ಬರುತ್ತದೆ ಎಂದು ವಿಶ್ಲೇಷಿಸಿದ್ದಾರೆ.
ಸಾಧಾರಣವಾಗಿ ಟಿ 20 ಪಂದ್ಯದಲ್ಲಿ ಟಾಸ್ ಗೆದ್ದವರು ಫೀಲ್ಡಿಂಗ್ ಆಯ್ಕೆ ಮಾಡುತ್ತಾರೆ. ಆದರೆ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆಯನ್ನು ಮಾಡಿಕೊಂಡಿದ್ದರು. ಮೊದಲು ಬ್ಯಾಟಿಂಗ್ ಆಯ್ಕೆಯ ಹಿಂದೆ ಮುಂಬೈ ಅದೃಷ್ಟ ಇದೆ. ಈ ಕಾರಣಕ್ಕೆ ಆಯ್ಕೆ ಮಾಡಿರಲೂಬಹುದು ಎನ್ನುವ ವಿಶ್ಲೇಷಣೆ ಈಗ ಕೇಳಿ ಬರುತ್ತಿದೆ. ಯಾಕೆಂದರೆ ಈ ಹಿಂದೆ 2013, 2015, 2017ರ ಫೈನಲಿನಲ್ಲೂ ಮುಂಬೈ ತಂಡ ಮೊದಲ ಬ್ಯಾಟಿಂಗ್ ಮಾಡಿ ಕಪ್ ಗೆದ್ದುಕೊಂಡಿತ್ತು. ಹೀಗಾಗಿ ಈ ಬಾರಿಯೂ ಅದೃಷ್ಟ ಪರೀಕ್ಷೆಯಲ್ಲಿ ರೋಹಿತ್ ಶರ್ಮಾ ಅವರ ಈ ತಂತ್ರಗಾರಿಕೆಯೂ ಪಾಸ್ ಆಗಿದೆ.
ಐಪಿಎಲ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಇದುವರೆಗೂ ಶೇ. 63.60 ರಷ್ಟು ಗೆಲುವು ಪಡೆದಿವೆ. ಇದರಂತೆ ಕಡಿಮೆ ಮೊತ್ತ ಗಳಿಸಿದರೂ ಚೆನ್ನೈ ತಂಡದ ಆಟಗಾರರನ್ನು ನಿಯಂತ್ರಿಸಬೇಕು ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಇತ್ತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.