ಜೈಪುರ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಆಡಿದ್ದ ಪಂಜಾಬ್ ತಂಡದ ವೇಗಿ ಆಂಡ್ರ್ಯೂ ಟೈ ಪ್ರತಿ ವಿಕೆಟ್ ಪಡೆದ ಬಳಿಕ ಕೈಪಟ್ಟಿಗೆ ಮುತ್ತಿಡುತ್ತಿದ್ದರು. ಆದರೆ ಅಭಿಮಾನಿಗಳಿಗೆ ಇದರ ಹಿಂದಿನ ಕಾರಣ ಮಾತ್ರ ಗೊತ್ತಾಗಿರಲಿಲ್ಲ. ಪಂದ್ಯದ ಬಳಿಕ ಐಪಿಎಲ್‍ನಲ್ಲಿ ಗರಿಷ್ಠ ವಿಕೆಟ್ ಪಡೆದವರಿಗೆ ಸಿಗುವ `ಪರ್ಪಲ್’ ಕ್ಯಾಪ್ ಪಡೆದ ಬಳಿಕ ಇದರ ಹಿಂದಿನ ಕಾರಣವನ್ನು ಸ್ವತಃ ಆಂಡ್ರ್ಯೂ ಟೈ ಬಹಿರಂಗಗೊಳಿಸಿದ್ದಾರೆ.
Advertisement
ಪರ್ಪಲ್ ಕ್ಯಾಪ್ ಸ್ವೀಕರಿಸುವ ವೇಳೆ ಭಾವೋದ್ವೇಗಕ್ಕೆ ಒಳಗಾದ ಟೈ, “ಇದೊಂದು ಕಠಿಣ ದಿನವಾಗಿತ್ತು. ಇಂದು ನನ್ನ ಅಜ್ಜಿ ನಮ್ಮನ್ನ ಅಗಲಿದ್ದಾರೆ. ನನ್ನ ಈ ಪ್ರದರ್ಶನವನ್ನು ಅಜ್ಜಿಗೆ ಸಮರ್ಪಿಸುತ್ತೇನೆ. ಇದು ನನ್ನ ಪಾಲಿಗೆ ಭಾವೋದ್ವೇಗದ ಪಂದ್ಯ. ಎಷ್ಟೇ ಕಷ್ಟ ಎದುರಾದರೂ ನನಗೆ ಯಾವಾಗಲೂ ಕ್ರಿಕೆಟ್ ಮೇಲಿನ ಅಭಿಮಾನ ಕಡಿಮೆಯಾಗುವುದಿಲ್ಲ” ಎಂದು ಟೈ ಪ್ರತಿಕ್ರಿಯಿಸಿದರು. ಸಂಕಷ್ಟದ ಸಮಯದಲ್ಲಿಯೂ ತನ್ನ ಬೆಂಬಲಕ್ಕೆ ನಿಂತ ಸಹ ಆಟಗಾರರಿಗೂ ಟೈ ಧನ್ಯವಾದ ಹೇಳಿದರು.
Advertisement
ನಿನ್ನೆ ನಡೆದ ಐಪಿಎಲ್ 40ನೇ ಹಾಗೂ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಆಂಡ್ರ್ಯೂ ಟೈ 34 ರನ್ ಗೆ 4 ವಿಕೆಟ್‍ಗಳನ್ನು ಕಬಳಿಸಿದ್ದರು. ಆ ಮೂಲಕ ಟೂರ್ನಿಯಲ್ಲಿ ತನ್ನ ವಿಕೆಟ್ ಗಳಿಕೆಯನ್ನು 16 ಕ್ಕೇರಿಸಿದ್ದರು. ಪಂದ್ಯದ ವೇಳೆ ಆಂಡ್ರ್ಯೂ ಟೈ `ಗ್ರಾಂಡ್‍ಮಾ’ ಎಂದು ಬರೆದಿದ್ದ ಕೈ ಪಟ್ಟಿಯನ್ನು ಧರಿಸಿ ಆಡಿದ್ದರು. ಪ್ರತಿ ವಿಕೆಟ್ ಪಡೆದ ಬಳಿಕ ಕೈ ಪಟ್ಟಿಗೆ ಮುತ್ತಿಟ್ಟರು. ಟೈ ಸಾಹಸದ ಹೊರತಾಗಿಯೂ ಜೈಪುರದ ಸವಾಯ್ ಮಾನ್‍ಸಿಂಗ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 15 ರನ್‍ಗಳ ಸೋಲನ್ನು ಅನುಭವಿಸಿತ್ತು.