ಮೈಸೂರು: ಸಂಸತ್ ಮೇಲೆ ದಾಳಿ (Parliament Attack) ನಡೆಸಿದ್ದ ಮೈಸೂರು (Mysuru) ಮೂಲದ 35 ವರ್ಷದ ಮನೋರಂಜನ್ (Manoranjan) ಹಣದ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ಪೋಷಕರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ದೆಹಲಿಯ ಸ್ಪೆಷಲ್ ಸೆಲ್ ಪೊಲೀಸರು (Delhi Special Cell Police) ತಂದೆ ದೇವರಾಜೇಗೌಡ, ತಾಯಿ ಶೈಲಜಾ ಪ್ರತ್ಯೇಕ ವಿಚಾರಣೆ ಮಾಡಿದ್ದಾರೆ. ಈ ವೇಳೆ ನಾವು ಆಗಾಗ 1 ಸಾವಿರ ರೂ. 2 ಸಾವಿರ ರೂ. ನೀಡುತ್ತಿದ್ದೆವು ಅಷ್ಟೇ. ಮನೋರಂಜನ್ ಕೂಡ ನಮ್ಮ ಬಳಿ ಹೆಚ್ಚಿನ ಹಣ ಯಾವತ್ತು ಕೇಳಿಲ್ಲ. ನಮಗೆ ಅವನ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಇಲ್ಲ ಎಂದಿರುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ. ಇದನ್ನೂ ಓದಿ: ನನ್ನ ಮಗ ಕ್ರಾಂತಿಕಾರಿ ಪುಸ್ತಕಗಳಿಂದ ಪ್ರಭಾವಿತನಾಗಿದ್ದ, ಸಮಾಜ ಸೇವೆ ಮಾಡುವ ಹಂಬಲವಿತ್ತು – ಮನೋರಂಜನ್ ತಂದೆ ಬೇಸರ
- Advertisement
ನಾವು ನಗದು ರೂಪದಲ್ಲಿ ಅವನ ಕೈಗೆ ಆಗಾಗ ದುಡ್ಡು ಕೊಟ್ಟಿದ್ದೇವೆ. ನಾವು ಕೊಟ್ಟಿರುವ ಹಣದಲ್ಲಿ ಪುಸ್ತಕ ಖರೀದಿ ಮಾಡುತ್ತಾನೆ ಎಂದುಕೊಂಡಿದ್ದೆವು. ಅವನಿಗೆ ಬೇರೆ ಯಾವ ದುಶ್ಚಟಗಳು ಇರಲಿಲ್ಲ. ಹೀಗಾಗಿ ಅವನಿಗೆ ಹೆಚ್ಚಿನ ಖರ್ಚಿನ ಅಗತ್ಯ ಇಲ್ಲ ಎಂದುಕೊಂಡಿದ್ದೆವು. ಅವನು ಯಾವಾಗಲು ನಮ್ಮ ಬಳಿ ಯಾವ ಹಣವನ್ನು ಕೊಟ್ಟಿಲ್ಲ. ಹೆಚ್ಚಿನ ಹಣಕ್ಕೆ ನಮ್ಮ ಬಳಿ ಯಾವತ್ತು ಬೇಡಿಕೆ ಇಟ್ಟಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾಂಬ್ ಸ್ಫೋಟಕ್ಕೆ ಮುಂದಾಗಿದ್ದ ಬಳ್ಳಾರಿ ಐಸಿಸ್ ಟೀಂ – ದಾಳಿಯಲ್ಲಿ ಏನು ಸಿಕ್ಕಿದೆ?
- Advertisement
ನಾವು ಅವನಿಗೆ ಕೆಲಸಕ್ಕೆ ಸೇರು ಎಂದು ಅವನಿಗೆ ಯಾವತ್ತು ಒತ್ತಡ ಹೇರಿರಲಿಲ್ಲ. ಅವನು ಬೆಂಗಳೂರಿಗೆ ಹೋಗುತ್ತಾನೆಂದು ಹೇಳುತ್ತಿದ್ದ ಅಷ್ಟೇ. ಮನೋರಂಜನ್ ಜೊತೆ ಯಾವತ್ತೂ ವೈಯಕ್ತಿಕ ವಿಚಾರ ಚರ್ಚೆ ಮಾಡಿರಲಿಲ್ಲ ಎಂದಿದ್ದಾರೆ.
ಮನೋರಂಜನ್‍ನ ಮೈಸೂರಿನ ನಿವಾಸಕ್ಕೆ ಸೋಮವಾರ ದೆಹಲಿಯ ಪೊಲೀಸರು ಆಗಮಿಸಿ ತಪಾಸಣೆ ಮಾಡಿದ್ದಾರೆ. ಒಂದಷ್ಟು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿರುವ ಪೊಲೀಸರು ಮನೋರಂಜನ್ ರೂಂ ನಲ್ಲಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗ್ಗೆ 11:30ರಿಂದ ಆರಂಭಗೊಂಡ ವಿಚಾರಣೆ ಸಂಜೆ 6:30ರವರೆಗೆ ನಡೆದಿದೆ.
ಬೆಂಗಳೂರಿನ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಅರ್ಧಕ್ಕೆ ಕೈಬಿಟ್ಟ ಮನೋರಂಜನ್ ಕೆಲಸದ ನೆಪದಲ್ಲಿ ಬೆಂಗಳೂರಿನಿಂದ ಮುಂಬೈ, ಬೆಂಗಳೂರಿನಿಂದ ದೆಹಲಿ ಎಂದು ಓಡಾಡಿಕೊಂಡಿದ್ದ ಎಂದು ತಂದೆ ಈ ಹಿಂದೆ ಪ್ರತಿಕ್ರಿಯಿಸಿದ್ದರು. ಯಾವುದೇ ಉದ್ಯೋಗ ಇಲ್ಲದೇ ಇದ್ದರೂ ವಿಮಾನ ಸೇರಿದಂತೆ ಪ್ರಯಾಣದ ಖರ್ಚನ್ನು ಭರಿಸುತ್ತಿದ್ದವರು ಯಾರು ಎಂಬ ಗಂಭೀರ ಪ್ರಶ್ನೆ ಬಂದಿದೆ.