ಮಡಿಕೇರಿ: 1965ರಲ್ಲಿ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಿ ಬರುವಾಗ ತಾವಿದ್ದ ವಿಮಾನಕ್ಕೆ ಪಾಕ್ ಅಟ್ಯಾಕ್ ಮಾಡಿತ್ತು. ಈ ದಾಳಿಯಲ್ಲಿ ತಮ್ಮ ಜೆಟ್‍ಗೆ ಬೆಂಕಿ ಹೊತ್ತಿಕೊಂಡಾಗ ಪಾಕ್ ನೆಲಕ್ಕೆ ಜಿಗಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪುತ್ರ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಯುದ್ಧ ಕೈದಿಯಾಗಿದ್ದರು. ಅಂದು ಅಲ್ಲಿನ ಪರಿಸ್ಥಿತಿ ಹೇಗಿತ್ತು? ಪಾಕ್ ಅವರನ್ನು ಹೇಗೆ ನಡೆಸಿಕೊಂಡಿತ್ತು ಅನ್ನೋದ್ರ ಬಗ್ಗೆ ಖುದ್ದು ಏರ್ ಮಾರ್ಷಲ್ ಕಾರ್ಯಪ್ಪನವರು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ
1965ರ ಇಂಡೋ-ಪಾಕ್ ಕದನ. ಆಗ ಪಾಕಿಸ್ತಾನದಲ್ಲಿ ಯುದ್ಧ ಕೈದಿಯಾಗಿ ನಾಲ್ಕು ತಿಂಗಳು ಸೆರೆವಾಸದಲ್ಲಿದ್ದವರಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಕೂಡ ಒಬ್ಬರು. ಮಡಿಕೇರಿ ನಗರದಿಂದ ಸ್ವಲ್ಪ ದೂರದಲ್ಲಿರುವ ಅವರ ನಿವಾಸಕ್ಕೆ ಪಬ್ಲಿಕ್ ಟಿವಿ ಭೇಟಿ ನೀಡಿದಾಗ ಅಂದಿನ ಅನುಭವ ಹಂಚಿಕೊಂಡರು. ಯುದ್ಧ ಕೈದಿಗಳಿಗೆ ಭಯವೆಂಬುದೇ ತಿಳಿದಿರುವುದಿಲ್ಲ ಎಂಬುವುದು ನಿವೃತ್ತ ಏರ್ ಮಾರ್ಷಲ್ ಕಾರ್ಯಪ್ಪರ ಮೊದಲ ಮಾತು. 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಂದರ್ಭದಲ್ಲಿ ಶತ್ರು ಶಿಬಿರಗಳ ಮೇಲೆ ದಾಳಿ ನಡೆಸಿ ವಾಪಸ್ಸಾಗುವಾಗ ಪಾಕ್‍ನ ಯುದ್ಧ ವಿಮಾನಗಳ ದಾಳಿಗೆ ಅವರು ಚಾಲನೆ ಮಾಡುತ್ತಿದ್ದ ಹಾಕರ್ ಹಂಟರ್ ಏರ್ ಕ್ರಾಫ್ಟ್ ಧರೆಗುರುಳಿತ್ತು.
ಕಾರ್ಯಪ್ಪ ಹೇಳಿದ್ದು ಹೀಗೆ:
ನನಗೆ ಇನ್ನೂ ಅಂದಿನ ದಿನಗಳು ಚೆನ್ನಾಗಿ ನೆನಪಿದೆ. 1965ರ ಸೆಪ್ಟೆಂಬರ್ 22 ನನಗೆ ಶತ್ರು ಶಿಬಿರಗಳ ಮೇಲೆ ದಾಳಿ ನಡೆಸುವ ಹೊಣೆ ವಹಿಸಲಾಗಿತ್ತು. ಅದರಂತೆ ಹಲ್ವಾರಾ ವಾಯುಕೇಂದ್ರದಿಂದ ನನ್ನ ಗುರಿಯತ್ತ ಹೊರಟೆ. ಕೆಲವೇ ಸಮಯದಲ್ಲಿ ನಿಯೋಜಿತ ಕಾರ್ಯ ಮುಗಿಸಿ ನಮ್ಮ ಏರ್ ಬೇಸ್‍ಗೆ ವಾಪಸ್ ಹೊರಟೆ. ಅಷ್ಟರಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ನನ್ನತ್ತ ನಿರಂತರ ದಾಳಿ ನಡೆಸಿದವು. ಅದರ ಪರಿಣಾಮ ನಾನು ಚಾಲನೆ ಮಾಡುತ್ತಿದ್ದ ವಿಮಾನ ಧರೆಗೆ ಉರುಳಿತು. 100ಕ್ಕೂ ಹೆಚ್ಚು ಅಡಿ ಎತ್ತರದಿಂದ ಕೆಳಗಡೆಬಿದ್ದೆ. ನನ್ನ ಸೊಂಟ ಮತ್ತು ಕೈಗೆ ಹಾನಿಯಾಯಿತು. ಅಷ್ಟರಲ್ಲಿ ನನ್ನನ್ನು ಪಾಕಿಸ್ತಾನದ ಸೈನಿಕರು ಸುತ್ತುವರಿದರು. ನನ್ನ ಕೈ ಮತ್ತು ಸೊಂಟಕ್ಕೆ ಹಾನಿಯಾಗಿದ್ದರಿಂದ ಕೂಡಲೇ ಸ್ಟ್ರೆಚರ್ ಮೂಲಕ ಲಾಹೋರ್‍ನ ಸೇನಾ ಆಸ್ಪತ್ರೆಗೆ ಕರೆದೊಯ್ದರು. 3 ವಾರಗಳ ಚಿಕಿತ್ಸೆ ಬಳಿಕ ಯುದ್ಧ ಕೈದಿಗಳ ಶಿಬಿರಕ್ಕೆ ವರ್ಗಾಯಿಸಿದರು. ಪ್ರತಿದಿನ ಸಸ್ಯಾಹಾರ ನೀಡುತ್ತಿದ್ದರು. ಬೆಳಗ್ಗೆ 7 ಗಂಟೆಗೆ ಪೂರಿ, ಚಹಾ, 11.30ಕ್ಕೆ ಚಪಾತಿ ಊಟ, ಸಂಜೆ 6 ಗಂಟೆಗೆ ರಾತ್ರಿಯ ಊಟ ವಿತರಣೆಯಾಗುತ್ತಿತ್ತು ಎಂದು ತಿಳಿಸಿದರು.
ಅಂದು ಪಾಕಿಸ್ತಾನದ ಸೇನಾಧಿಕಾರಿ ಅಯೂಬ್ ಖಾನ್ ಎಂಬವರು ಕೆ.ಸಿ. ಕಾರ್ಯಪ್ಪನವರನ್ನು ಗುರುತಿಸಿ, ರೇಡಿಯೋದ ಮೂಲಕ ‘ಜೂನಿಯರ್ ಕಾರ್ಯಪ್ಪ’ನವರನ್ನು ಬಂಧಿಸಿರುವುದಾಗಿ ಸುದ್ದಿ ಬಿತ್ತರಿಸಿದರು. ವಾಸ್ತವವಾಗಿ ಕೆ.ಎಂ.ಕಾರ್ಯಪ್ಪನವರು ಆಗಿನ ಪಾಕಿಸ್ತಾನದ ಸೇನಾಧಿಕಾರಿ ಅಯೂಬ್ ಖಾನ್ ಜೊತೆ ಕೆಲಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆ.ಎಂ. ಕಾರ್ಯಪ್ಪನವರನ್ನು ಸಂಪರ್ಕಿಸಿದ ಅಯೂಬ್‍ಖಾನ್, ನಿಮ್ಮ ಮಗನನ್ನು ಸೆರೆ ಹಿಡಿದಿದ್ದೇನೆ. ಸುರಕ್ಷಿತವಾಗಿದ್ದಾರೆ. ಬೇಕಾದ್ರೆ ಬಿಡುಗಡೆ ಮಾಡುತ್ತೇವೆ ಎಂದು ಪರೋಕ್ಷವಾಗಿ ಹೇಳಿದ್ದರಂತೆ.
ಅಂದು ನನ್ನ ತಂದೆ, ನನ್ನ ಮಗನೆಂದು ವಿಶೇಷ ಆದರಾತಿಥ್ಯಗಳನ್ನು ಕೊಡಬೇಕಿಲ್ಲ, ಎಲ್ಲರಂತೆ ನಡೆಸಿಕೊಳ್ಳಿ. ಕರೆ ಮಾಡಿ ತೋರಿದ ಕಾಳಜಿಗೆ ಧನ್ಯವಾದ ಎಂದಿದ್ದರು. ಜೊತೆಗೆ ಎಲ್ಲರನ್ನೂ ಬಿಡುವುದಾದರೆ ಬಿಡಿ. ನನ್ನ ಮಗನೊಬ್ಬನೇ ಅಲ್ಲ ಎಂದು ಸ್ಪಷ್ಟಪಡಿಸಿದ್ದರು ಎಂದು ತಂದೆಯನ್ನು ನೆನೆಯುತ್ತಾರೆ.
ಅಭಿನಂದನ್ ವರ್ಧಮಾನ್ ಅವರು ಸೆರೆ ಸಿಕ್ಕಿದ ಸಂದರ್ಭ ಸ್ವಲ್ಪ ಭಿನ್ನ. ಬಿಡುಗಡೆಯ ಪ್ರಕ್ರಿಯೆ ಬಹಳ ಭಿನ್ನವಾಗಿರುವುದಿಲ್ಲ. ಕೊನೆಗೆ ಎರಡು ಸರ್ಕಾರಗಳು ಮಾತುಕತೆ ನಡೆಸಿದವು. ಅದರಂತೆ ನಂದ ಕಾರ್ಯಪ್ಪನವರ ಬಿಡುಗಡೆಗೆ ವೇದಿಕೆ ಸಿದ್ಧವಾಯಿತು. ವಿಶೇಷ ವಿಮಾನದಲ್ಲಿ ಸೇನಾಧಿಕಾರಿ ಮೂಸಾ ಜತೆಗೆ ಇನ್ನೂ ಕೆಲವು ಅಧಿಕಾರಿಗಳು ಭಾರತಕ್ಕೆ ಬಂದಿಳಿದರು. ಬಳಿಕೆ ತಮಗೂ ವೈದ್ಯಕೀಯ ತಪಾಸಣೆ ಮಾಡಿದರು ನಂತರ ಒಂದು ತಿಂಗಳು ರಜೆ ನೀಡಿ ಕಳುಹಿಸಲಾಗಿತ್ತು ಎಂದು ತಮ್ಮ ಅನುಭವಗಳನ್ನು ವಿವರಿಸಿದರು.
ಅಭಿನಂದನ್ ವರ್ಧಮಾನ್ ಅವರಿಗೂ ಸಣ್ಣಪುಟ್ಟ ವೈದ್ಯಕೀಯ ತಪಾಸಣೆಗಳು ಇರುತ್ತದೆ. ನಂತರ ಒಂದು ಅಷ್ಟು ದಿನ ರಜೆಯ ಮೇಲೆ ಕಳುಹಿಸಿ ನಂತರ ಅವರು ಮಾನಸಿಕ ಹಾಗೂ ದೈಹಿಕವಾಗಿ ರೆಡಿ ಇದ್ದಾರೆ ಅವರನ್ನು ಮತ್ತೆ ಕೆಲಸದಲ್ಲಿ ಮುಂದುವರೆಸಬಹುದು ಅಥಾವ ಇಲ್ಲದೇ ಇರಬಹುದು ಎಂದು ತಿಳಿಸಿದರು.
https://youtu.be/MzgcKiat50M
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv