ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ!

Public TV
1 Min Read
nirav modi 1

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದು, ಯಾವುದೇ ದೇಶದಲ್ಲಿ ಅಡಗಿದ್ದರೂ ಬಂಧನಕ್ಕೆ ಆದೇಶ ಸಿಕ್ಕಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ನೀರವ್ ಮೋದಿ ದೂರು ದಾಖಲಾಗುತ್ತಿದ್ದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ನೀರವ್ ಮೋದಿ ಹಾಗೂ ಅವರ ಅಂಕಲ್ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್ ಗೆ ಮನವಿ ಮಾಡಿಕೊಂಡಿತ್ತು.

ಈ ಸಂಬಂಧ ಸಿಬಿಐ ನೀರವ್ ಮೋದಿಗೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್‍ಗೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ನೀರವ್ ಮೋದಿ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ನೀಡಿದ್ದು ಯಾವುದೇ ದೇಶದಲ್ಲಿದ್ದರೂ ಬಂಧಿಸುವ ಸಾಧ್ಯತೆ ಇದೆ.

ಸಿಬಿಐ ನೀರವ್ ಸೇರಿ ಇನ್ನಿತರೆ ಆರೋಪಿಗಳ ಭಾರತೀಯ ಪಾಸ್‍ಪೋರ್ಟ್‍ಗಳನ್ನು ರದ್ದುಪಡಿಸಿ, ಅವರ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಿತ್ತು. ಅಲ್ಲದೇ ನೀರವ್ ಮೋದಿ ವಾಸದ ಖಚಿತಪಡಿಸುವ ಬಗ್ಗೆ ಲಂಡನ್‍ಗೂ ಮಾಹಿತಿ ರವಾನಿಸಿ ಕ್ರಮ ಕೈಗೊಂಡಿತ್ತು. ಆದರೆ ನೀರವ್ ಮೋದಿ ಪಾಸ್ ಪೋರ್ಟ್ ರದ್ದಾದ ಬಳಿಕವೂ ಬೇರೆ ದೇಶದ ಪಾಸ್‍ಪೋರ್ಟ್ ಬಳಸಿ ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸಿದ್ದ ಮಾಹಿತಿಯನ್ನು ಇಂಟರ್‍ಪೋಲ್ ಅಧಿಕಾರಿಗಳಿಗೆ ಒದಗಿಸಲಾಗಿದೆ.

ಏನಿದು ರೆಡ್ ಕಾರ್ನರ್ ನೋಟಿಸ್?
ಸ್ವದೇಶದಲ್ಲಿ ಯಾವುದೇ ಒಬ್ಬ ವ್ಯಕ್ತ ಅಪರಾಧಿ ಹಿನ್ನೆಲೆಯಲ್ಲಿ ದೇಶವನ್ನು ತೊರೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೆ, ಅಂತಹ ವ್ಯಕ್ತಿಯನ್ನು ಹುಡುಕಿ ಬಂಧಿಸಿ ಅವನನ್ನು ಮರಳಿ ಆ ದೇಶಕ್ಕೆ ಹಸ್ತಾಂತರಿಸುವಂತೆ ಇಂಟರ್ ಪೋಲ್ ಹೊರಡಿಸುವ ನೋಟಿಸಿಗೆ ರೆಡ್ ಕಾರ್ನರ್ ನೋಟಿಸ್ ಎಂದು ಕರೆಯಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *