ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಆರಂಭಗೊಂಡು ಫೆಬ್ರವರಿ 13ರ ವರೆಗೆ ನಡೆಯಲಿದ್ದು, ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡನೆಯಾಗುವ ಸಾಧ್ಯತೆಯಿದೆ.
ಏಪ್ರಿಲ್-ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಪಿಎ) ಸಭೆಯಲ್ಲಿ ಬಜೆಟ್ ಅಧಿವೇಶನದ ಬಗ್ಗೆ ದಿನಾಂಕ ನಿಗದಿ ಸಂಬಂಧ ಚರ್ಚೆ ನಡೆಸಲಾಯಿತು.
ಪಂಚರಾಜ್ಯಗಳ ಚುನಾವಣೆಯಲ್ಲಿ ಪ್ರಮುಖ ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಹೀಗಾಗಿ ಜನರನ್ನು ಸೆಳೆದು ಎರಡನೇ ಬಾರಿ ಅಧಿಕಾರಕ್ಕೆ ಏರುವ ಕನಸು ಕಾಣುತ್ತಿರುವ ಮೋದಿ ಸರ್ಕಾರಕ್ಕೆ ಸಿಗುವ ಕೊನೆಯ ಅವಕಾಶ ಇದಾಗಿದ್ದು, ಎಲ್ಲರ ಕಣ್ಣು ಈಗ ಮಧ್ಯಂತರ ಬಜೆಟ್ ಮೇಲೆ ಬಿದ್ದಿದೆ.
ಯಾಕೆ ಮಧ್ಯಂತರ ಬಜೆಟ್?
ಹಾಲಿ ಇರುವ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಕಾಲಾವಕಾಶದ ಕೊರತೆ ಇದ್ದರೆ ಅಥವಾ ಸಾರ್ವತ್ರಿಕ ಚುನಾವಣೆ ಹತ್ತಿರ ಬಂದಾಗ ಮಧ್ಯಂತರ ಬಜೆಟ್ ಮಂಡಿಸಲಾಗುತ್ತದೆ. ಹೊಸದಾಗಿ ಚುನಾಯಿತಗೊಂಡ ಸರ್ಕಾರ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತದೆ. ಇದನ್ನೂ ಓದಿ: ಬಜೆಟ್ ಮಂಡನೆ ಆಗುವುದು ಹೇಗೆ? ಅಧಿಕಾರಿಗಳು ರಹಸ್ಯ ಹೇಗೆ ಕಾಪಾಡುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಲೇಖಾನುದಾನ ಎಂದರೇನು?
ಭಾರತದಲ್ಲಿ ಏಪ್ರಿಲ್ 1 ರಂದು ಆರ್ಥಿಕ ವರ್ಷ ಆರಂಭಗೊಂಡರೆ ಮಾರ್ಚ್ 31ರಂದು ಕೊನೆಯಾಗುತ್ತದೆ. ಆರ್ಥಿಕ ವರ್ಷದ ಕೊನೆ ದಿನವಾದ ಮಾರ್ಚ್ 31ರ ಅವಧಿಗೆ ಅನ್ವಯವಾಗುವಂತೆ ಪ್ರತಿ ವರ್ಷ ಆಯವ್ಯಯಕ್ಕೆ ಸಂಸತ್ತು ಅನುಮೋದನೆ ನೀಡುತ್ತದೆ. ಒಂದು ವೇಳೆ ಆರ್ಥಿಕ ವರ್ಷ ಮುಕ್ತಾಯವಾಗುವುದರೊಳಗೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸರ್ಕಾರಕ್ಕೆ ಸಾಧ್ಯ ಆಗದೇ ಇದ್ದರೆ ಹೊಸ ಸರ್ಕಾರ ಬಜೆಟ್ ಮಂಡಿಸುವ ತನಕದ ಅವಧಿಯ ವೆಚ್ಚಗಳಿಗೆ ಸಂಸತ್ತಿನ ಅನುಮೋದನೆ ಪಡೆಯಬೇಕಾಗುತ್ತದೆ. ಈ ಕಾರಣಕ್ಕಾಗಿ ಮಧ್ಯಂತರ ಬಜೆಟ್ ಮಂಡಿಸಿ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯಲಾಗುತ್ತದೆ.
ಪೂರ್ಣ ಪ್ರಮಾಣದ ಬಜೆಟ್ ಮಂಡನೆಯ ತನಕದ ಆಡಳಿತಾತ್ಮಕ ಖರ್ಚು ವೆಚ್ಚಗಳಿಗೆ ಲೇಖಾನುದಾನದಿಂದ ಅನುಕೂಲವಾಗುತ್ತದೆ. ಮೂರರಿಂದ ನಾಲ್ಕು ತಿಂಗಳಿಗೆ ಎಷ್ಟು ಖರ್ಚಾಗುತ್ತದೋ ಅಷ್ಟು ವೆಚ್ಚವನ್ನು ಮಾತ್ರ ಸರ್ಕಾರ ಪರಿಗಣಿಸಿ ಲೇಖಾನುದಾನಕ್ಕೆ ಅನುಮತಿ ಪಡೆಯುತ್ತದೆ. 2014ರ ಫೆಬ್ರವರಿಯಲ್ಲಿ ಪಿ. ಚಿದಂಬರಂ ಮಧ್ಯಂತರ ಬಜೆಟ್ ಮಂಡಿಸಿದ್ದರೆ, 2014ರ ಜುಲೈನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದರು.