ಕೆಲವೇ ದಿನಗಳಲ್ಲೇ ಸಿನಿಮಾ ರಿಲೀಸ್ ಆಗಿ 50 ದಿನಗಳು ಕಳೆಯುತ್ತಿರುವ ಸಂದರ್ಭದಲ್ಲಿ ಕಾಂತಾರ ಸಿನಿಮಾದ ಬಗ್ಗೆ ಆರೋಪವೊಂದು ಕೇಳಿ ಬಂದಿದೆ. ಈ ಸಿನಿಮಾದಲ್ಲಿ ದಲಿತ ಸಮುದಾಯ ಮತ್ತು ಮಹಿಳೆಯರನ್ನು ಅವಹೇಳನ ಮಾಡಲಾಗಿದೆ ಎಂದು ಸಮತಾ ಸೈನಿಕ ದಳ ಮಂಗಳೂರು, ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಮನವಿ ಮಾಡಿಕೊಂಡಿದೆ. ಮಹಿಳೆ ಮತ್ತು ದಲಿತರನ್ನು ಅವಹೇಳನ ಮಾಡಿರುವ ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದು ಅದು ಒತ್ತಾಯಿಸಿದೆ.
ಈ ಕುರಿತು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಸಮತಾ ಸೈನಿಕ ದಳ, ‘ಇದೊಂದು ಉತ್ತಮ ಸಿನಿಮಾ ಮತ್ತು ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಕೆಲವು ತಪ್ಪುಗಳು ಆಗಿವೆ. ಅವುಗಳನ್ನು ಸರಿಪಡಿಸಿಕೊಳ್ಳಬೇಕು. ಮಹಿಳೆಯರನ್ನು ಅವಮಾನಿಸಲಾಗಿದೆ, ಯುವಕರನ್ನು ಪೋಲಿಗಳು ಎನ್ನುವಂತೆ ತೋರಿಸಲಾಗಿದೆ. ದಲಿತ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ. ದೈವರಾಧಾನೆ ಹೆಸರಿನಲ್ಲಿ ಹಿಂಸೆಯನ್ನೂ ಪ್ರಚೋದಿಸಲಾಗಿದೆ’ ಎಂದು ಆರೋಪ ಮಾಡಿದರು. ಇದನ್ನೂ ಓದಿ:ಗಡಿನಾಡ ಕನ್ನಡಿಗ ಎಂದ ರೂಪೇಶ್ ಶೆಟ್ಟಿಗೆ ಬೆದರಿಕೆ, ದೂರು ದಾಖಲಿಸಿದ ಕುಟುಂಬದವರು
ಸೆನ್ಸಾರ್ ಮಂಡಳಿಯ ವಿರುದ್ಧವೂ ಆರೋಪ ಮಾಡಿರುವ ಸಮತಾ ಸೈನಿಕದಳ, ಸೆನ್ಸಾರ್ ಮಂಡಳಿಯು ಬೇಕಾಬಿಟ್ಟಿ ಕೆಲಸ ಮಾಡಿದಂತೆ ತೋರಿತ್ತಿದೆ. ಇತರರ ಭಾವನೆಗಳಿಗೆ ಘಾಸಿಗೊಳಿಸುವಂತ ದೃಶ್ಯಗಳನ್ನು ಸೆನ್ಸಾರ್ ಮಂಡಳಿಯು ತಗೆದು ಹಾಕುವಂತೆ ಸೂಚಿಸಬೇಕಿತ್ತು. ಆದರೆ ಇದ್ಯಾವ ಕೆಲಸವನ್ನೂ ಅದು ಮಾಡಿಲ್ಲ. ಹಾಗಾಗಿಯೇ ಅಪಮಾನ ಮಾಡಿದ ದೃಶ್ಯಗಳನ್ನು ಜಗತ್ತು ನೋಡುವಂತಾಯಿತು ಎಂದಿದ್ದಾರೆ.