ಲಕ್ನೋ: ದಂಪತಿಯನ್ನು ಕೊಲೆಗೈದು ಚಿನ್ನಾಭರಣ ಹಾಗೂ ಹಣ ದೋಚಿದ್ದ ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶ (Uttar Pradesh) ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತ ಓರ್ವ ಆರೋಪಿ ಅಂತಿಮ ವರ್ಷದ ಎಲ್‍ಎಲ್‍ಬಿ ಪದವಿ ವ್ಯಾಸಾಂಗ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಪ್ರಿಯಾಂಕ್ ಶರ್ಮಾ (25) ಅಲಿಯಾಸ್ ಪರುಷ್ ಮತ್ತು ಆತನ ಸ್ನೇಹಿತ ಯಶ್ ಶರ್ಮಾ ಅಲಿಯಾಸ್ ಯಶು (24) ಎಂದು ಗುರುತಿಸಲಾಗಿದೆ. ಯಶು ಶರ್ಮಾ 8 ನೇ ತರಗತಿಯವರೆಗೆ ಓದಿದ್ದು, ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕೊಲೆ ಸಂಚು ರೂಪಿಸಲು 2020 ರಲ್ಲಿ ಬಿಡುಗಡೆಯಾದ `ಅಸುರ್’ ವೆಬ್ ಸಿರೀಸ್‍ನಿಂದ (Web Series) ಪ್ರೇರಣೆ ಹೊಂದಿರುವುದಾಗಿ ತನಿಖೆ ವೇಳೆ ಆರೋಪಿಗಳು ಹೇಳಿದ್ದಾರೆ. ಇದನ್ನೂ ಓದಿ: ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ – ರೌಡಿಶೀಟರ್ ಕಾಲಿಗೆ ಗುಂಡೇಟು
ವಿಚಾರಣೆಯ ವೇಳೆ ಪ್ರಿಯಾಂಕ್ ವೆಬ್ ಸರಣಿಯಿಂದ ಪೊಲೀಸರಿಂದ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಹುಡುಕಿದ್ದಾಗಿ ಹೇಳಿಕೊಂಡಿದ್ದಾನೆ. ಗುರುತನ್ನು ಮರೆಮಾಚಲು ಕೈಗವಸುಗಳು, ಮುಖವಾಡಗಳು ಮತ್ತು ಹೆಲ್ಮೆಟ್‍ಗಳನ್ನು ಬಳಸಿದ್ದಾರೆ. ಅಪರಾಧ ಮಾಡಿದ ನಂತರ ಬೈಕ್‍ನ ನಂಬರ್ ಪ್ಲೇಟ್ ಬದಲಾಯಿಸಿದ್ದಾರೆ. ಅಲ್ಲದೇ ದರೋಡೆಗೆ ಬರಲು ಸಿಸಿ ಕ್ಯಾಮೆರಾಗಳಿಲ್ಲದ ಮಾರ್ಗಗಳನ್ನು ಹುಡುಕಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳು ಗುರುವಾರ ಬ್ರಹ್ಮಪುರಿ ಪ್ರದೇಶದ ನಿವಾಸಿ ಧನ್ ಕುಮಾರ್ ಜೈನ್ (70) ಅವರ ಪತ್ನಿ ಅಂಜು ಜೈನ್ (65) ಅವರ ಮನೆಗೆ ನುಗ್ಗಿ ಇಬ್ಬರ ಮೇಲೂ ದಾಳಿ ಮಾಡಿ ಲೂಟಿ ಮಾಡಿದ್ದರು. ಈ ವೇಳೆ ಧನ್ ಕುಮಾರ್ ಸ್ಥಳದಲ್ಲೇ ಮೃತ ಪಟ್ಟಿದ್ದರು. ಅಂಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪ್ರಕರಣವನ್ನು ಭೇದಿಸಲು ಎಂಟು ತಂಡಗಳನ್ನು ರಚಿಸಲಾಗಿತ್ತು.
ಘಟನೆಗೆ ಒಂದು ದಿನ ಮೊದಲು ಆರೋಪಿಗಳು ಬಾಡಿಗೆಗೆ ಕೊಠಡಿ ಹುಡುಕುವ ನೆಪದಲ್ಲಿ ಉದ್ಯಮಿಯ ಮನೆಗೆ ಹೋಗಿದ್ದರು. ಬಂಧಿತರಿಂದ ಪಿಸ್ತೂಲ್, ಬೈಕ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಹದೇಶ್ವರ ಬೆಟ್ಟದಲ್ಲಿ ವೃದ್ಧೆಗೆ ಚಿತ್ರಾನ್ನ ತಿನ್ನಿಸಿ 10,000 ನಗದು, ಮೊಬೈಲ್ ದೋಚಿ ಪರಾರಿ!
Web Stories