– ಬೈಕ್ ಕಳ್ಳರ ಗುಂಡಿನ ದಾಳಿ ಸುತ್ತ ಅನುಮಾನದ ಹುತ್ತ
ಚಿಕ್ಕಬಳ್ಳಾಪುರ: ಬೈಕ್ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಹಿಡಿಯಲು ಹೋದ ಗ್ರಾಮಸ್ಥರ ಮೇಲೆ ನಿನ್ನೆ ರಾತ್ರಿ ಗುಂಡು ಹೊಡೆದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮರವೇನಹಳ್ಳಿ ಗ್ರಾಮದ ಬಳಿ ರಾತ್ರಿ ಈ ಘಟನೆ ನಡೆದಿತ್ತು. ಘಟನೆಯಲ್ಲಿ ಗ್ರಾಮದ ಗಂಗರಾಜುಗೆ ಗುಂಡು ತಗುಲಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡು ಹೊಡೆದು ಪರಾರಿಯಾಗಿರುವ ಕಳ್ಳರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಇಬ್ಬರ ಜಗಳದಲ್ಲಿ ಬೀದಿಯಲ್ಲಿ ನಿಂತ ದೇವರ ಬಸವ
ಹಳೆ ಬೈಕ್ ಕಳ್ಳತನ ಮಾಡಲು ಗನ್ ಎಲ್ಲಿಂದ ತಂದಿದ್ದರು? ಏಕೆ ತಂದಿದ್ದರು? ಯಾವ ರೀತಿಯ ಗನ್ ಬಳಸಿದ್ದಾರೆ? ಎನ್ನುವ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮತ್ತೊಂದೆಡೆ ಬೆಂಗಳೂರಿನ ಎಫ್‍ಎಸ್‍ಎಲ್ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.
ದಾಳಿ ಮಾಡಿದ ಗನ್ ಯಾವುದು ಎಂದು ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಕಳ್ಳರು ಗುಂಡು ಹಾರಿಸಿದ ನಂತರ ಬಿದ್ದಿರುವ ಖಾಲಿ ಗುಂಡುಗಳು ಸ್ಥಳದಲ್ಲಿ ಸಿಕ್ಕಿದ್ದು, ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾಗಿರುವ ಗುಂಡುಗಳನ್ನು ಪರಿಶೀಲಿಸಿ ಕಳ್ಳರು ಯಾವ ರೀತಿಯ ಗನ್ ಬಳಸಿದ್ದಾರೆ. ಆ ರೀತಿಯ ಗನ್ ಗಳು ಎಲ್ಲಿ ಸಿಗುತ್ತವೆ ಅಥವಾ ಮಾರಾಟವಾಗುತ್ತವೆ ಎನ್ನುವ ಕುರಿತು ಪೊಲೀಸರಿಗೆ ಮಾಹಿತಿ ನೀಡಲಿದ್ದಾರೆ. ಇದನ್ನೂ ಓದಿ: ತಂದೆ ತಾಲಿಬಾನ್ ವಿರೋಧಿಯಾಗಿದ್ದಕ್ಕೆ ಮಗುವನ್ನು ಗಲ್ಲಿಗೇರಿಸಿದ್ರು
ಇನ್ನೊಂದೆಡೆ ಗ್ರಾಮದ ರಾಮಚಂದ್ರರೆಡ್ಡಿ ಎನ್ನುವವರ ಬೈಕ್ ಕಳ್ಳತನ ಮಾಡುವುದಕ್ಕೂ ಮುನ್ನ ಕಳ್ಳರು ಕೆರೆಯ ಬಳಿ ಮದ್ಯಪಾನ ಮಾಡಿದ್ದಾರೆ. ಕಳ್ಳರು ಬಳಸಿದ ಮದ್ಯದ ಬಾಟಲಿಯನ್ನು ವಶಕ್ಕೆ ಪಡೆದು ಪೊಲೀಸರು ಅದರ ಬ್ಯಾಚ್, ಸರಬರಾಜು ಆಗಿದ್ದ ಅಂಗಡಿಯ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆಯ ನಂತರ ಕಳ್ಳರು ತಾವು ತಂದಿದ್ದ ಬೈಕ್ ನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ಕಳ್ಳರ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ ಬಟ್ಟೆಗಳು ಹಾಗೂ ನಕಲಿ ಬೈಕ್ ನಂಬರ್ ಪ್ಲೇಟ್ ಗಳು ಪತ್ತೆಯಾಗಿದೆ. ನಂಬರ್ ಪ್ಲೇಟ್ ಹಾಕುವ ರೇಡಿಯಂ ಸ್ಟಿಕ್ಕರ್ ಕಟಿಂಗ್ ಅಂಗಡಿಗಳಲ್ಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಳ್ಳರು ಹೊಡೆದ ಗುಂಡಿನಿಂದ ಗಾಯಗೊಂಡು ಆಸ್ಪತ್ರೆ ಸೇರಿರುವ ಗಂಗರಾಜು ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಇದನ್ನೂ ಓದಿ: ಕುರ್ಚಿಗಾಗಿ ಹಗಲುಗಸು ಕಾಣ್ತಿದ್ದಾರೆ ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ: ಶ್ರೀರಾಮುಲು