ಬೆಂಗಳೂರು: ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಇದೇ ರೀತಿ ಅನ್ಯಾಯ ಮುಂದುವರಿದರೆ ದೇಶ ವಿಭಜನೆ ಕೂಗು ಮತ್ತೊಮ್ಮೆ ಏಳಬಹುದು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯವನ್ನು ತುಳಿಯಲು, ಆರ್ಥಿಕ ಬೆಳವಣಿಗೆ ಕುಗ್ಗಿಸುವ ಕೆಲಸವನ್ನು ಕೇಂದ್ರ ಸರ್ಕಾರ (Union Government) ಮಾಡುತ್ತಿದೆ. ಉತ್ತರ ಭಾರತ (North India), ಗುಜರಾತ್‌ಗೆ (Gujarat) ಹೆಚ್ಚಿನ ಆದ್ಯತೆ ನೀಡಲಾಗಿದೆ. ನಮ್ಮ ರಾಜ್ಯಕ್ಕೆ ಅರ್ಹತೆ ಇಲ್ವಾ? ರಾಜ್ಯಕ್ಕೆ ಯೋಜನೆ ಆರ್ಥಿಕ ನೆರವು ಕೊಡುವುದು ಕೇಂದ್ರದ ಕರ್ತವ್ಯ. ಆದರೆ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ದಕ್ಷಿಣ ಭಾರತಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆ. ನಾವು ಭಿಕ್ಷೆಕೇಳುತ್ತಿಲ್ಲ. ಬಜೆಟ್‌ನಲ್ಲಿ (Union Budget) ಏನು ಯೋಜನೆ ಕೊಟ್ಟಿದ್ದಾರೆ? ವೋಟ್ ಕೇಳಿದ್ದು ಬಿಟ್ಟರೆ ಏನು ಕೊಟ್ಟಿದ್ದಾರೆ? ನೀರಾವರಿ, ಉದ್ಯೋಗ ಸೃಷ್ಟಿ, ಬೆಂಗಳೂರು ಟ್ರಾಫಿಕ್ ಸಮಸ್ಯೆ ಯಾವುದು ಕೂಡ ಬಜೆಟ್‌ನಲ್ಲಿ ಪ್ರಸ್ತಾಪ ಆಗಿಲ್ಲ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾತ್ರ ಮಾಡುತ್ತಿದ್ದಾರೆ. ಉತ್ತರ ಭಾರತ, ಗುಜರಾತ್ ಋಣ ಮಾತ್ರ ತೀರಿಸಲಾಗುತ್ತಿದೆ. ನಾವೇನು ಕೇಂದ್ರ ಸರ್ಕಾರದ ಜೊತೆ ಸಂಘರ್ಷ ಮಾಡುತ್ತಿಲ್ಲ. ನಮ್ಮ ಹಕ್ಕುಮಾತ್ರ ಕೇಳುತ್ತಿದ್ದೇವೆ ಎಂದರು.
ನಿರ್ಮಲಾ ಸೀತಾರಾಮನ್ (Nirmala Sitharaman) ರಾಜ್ಯದಿಂದ ಎರಡು ಬಾರಿ ಆಯ್ಕೆ ಆಗಿದ್ದಾರೆ. ರಾಜ್ಯಕ್ಕೆ ಕೊಡಬೇಕಾದ ಗೌರವ ಮರೆತು ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂದು ನಾನು ಹಿಂದೆಯೇ ಹೇಳಿದ್ದೆ ಈಗಲೂ ಹೇಳುತ್ತೇನೆ. ಇದೇ ರೀತಿ ಅನ್ಯಾಯ ಮುಂದುವರಿದರೆ ಮುಂದೆ ವಿಭಜನೆ ಕೂಗು ಏಳಬಹುದು.ತಮಿಳುನಾಡಿನಲ್ಲಿ ಈಗಾಗಲೇ ಶುರುವಾಗಿದೆ ಎಂದು ಹೇಳಿದರು.
ಉತ್ತರ ಭಾರತಕ್ಕೆ ಮಾತ್ರ ಈ ಬಜೆಟ್ ಸಿಮೀತವಾಗಿದೆ. ರಾಜಕೀಯ ಕಾರಣಕ್ಕೆ ರಾಜ್ಯದ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಕೈಗಾರಿಕೆ, ಐಟಿ ಬಿಟಿಗೆ ಯೋಜನೆ ಘೋಷಣೆ ಮಾಡಬೇಕು. ಸುಮ್ಮನೆ ಆರೋಪ ಮಾಡುವುದು ಬೇಡ. ಸುಮ್ಮನೆ ನಮ್ಮ ತೆರಿಗೆ ಹಣ ವಸೂಲಿ ಮಾಡುತ್ತಿಲ್ಲ. ಉತ್ತರ ಪ್ರದೇಶ, ಬಿಹಾರಕ್ಕಿಂತ ಕಡಿಮೆ ತೆರಿಗೆ ಕಟ್ಟುತ್ತಿದ್ದೀವಾ? ಹತ್ತು ವರ್ಷಗಳಲ್ಲಿ ರಾಜ್ಯಕ್ಕೆ ಎಷ್ಟು ಯೋಜನೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.