– ಬೆಂಗಳೂರು ಸೇರಿ ರಾಜ್ಯದಲ್ಲಿ ಚಿನ್ನ ಖರೀದಿ ಇಳಿಕೆ
ಬೆಂಗಳೂರು: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ದುನಿಯಾ ಇದೀಗ ದುಬಾರಿ ಆಗಿಬಿಟ್ಟಿದೆ. ಅಡುಗೆ ಅನಿಲ, ಚಿನ್ನ, ಬೆಳ್ಳಿ, ಪೆಟ್ರೋಲ್-ಡಿಸೇಲ್, ಸಿಎನ್‌ಜಿ ದರ ಏರಿಕೆ ಬಳಿಕ ಇದೀಗ ದಿನಸಿ ದರವೂ ಡಬಲ್ ಆಗ್ತಿದೆ. ಅಕ್ಕಿ ದರ ಕೆಜಿಗೆ 2-3 ರೂಪಾಯಿ ಜಂಪ್ ಆಗಿದೆ.
ಸಾಗಾಣೆ ವೆಚ್ಚ ಹೆಚ್ಚಳ ಬೆನ್ನಲ್ಲೆ ಬೆಂಗಳೂರು ಎಪಿಎಂಸಿಯಲ್ಲಿ ಎಲ್ಲಾ ಅಕ್ಕಿ ದರ ಏರಿಕೆ ಮಾಡುವ ಮೂಲಕ ಜನಸಾಮ್ಯಾನರಿಗೆ ಬಿಸಿ ಮುಟ್ಟಿಸಿದ್ದಾರೆ. ಇದಲ್ಲದೆ ಅಕ್ಕಿ ಜೊತೆ ಬೇಳೆ ಕಾಳುಗಳ ದರದಲ್ಲಿಯೂ ಏರಿಕೆಯಾಗಿದೆ. ತೊಗರಿ ಬೇಳೆ, ಉದ್ದಿನಬೇಳೆ, ಕಡ್ಲೆಬೇಳೆ ಸೇರಿದಂತೆ ಎಲ್ಲಾ ದಿನಸಿಗಳ ದರ 1 ರಿಂದ 2 ರೂ. ಏರಿಕೆಯಾಗಿದೆ. ಅಲ್ಲದೇ, ತರಕಾರಿ, ಹಣ್ಣುಗಳ ಬೆಲೆಯೂ ಗಗನಮುಖಿ ಆಗ್ತಿವೆ.

ಈ ನಡುವೆ ಖಾಸಗಿ ಬಸ್ ಟಿಕೆಟ್ ದರ ಶೇ. 10-20 ರಷ್ಟು ಏರಿಕೆ ಮಾಡುವ ಸಾಧ್ಯತೆವಿದೆ. ಅಲ್ಲದೇ, ಓಲಾ ಉಬರ್ ಹಾಗೂ ಸ್ಕೂಲ್ ವ್ಯಾನ್‌ಗಳು ಸಹ ದರ ಏರಿಕೆ ಮಾಡಲು ನಿರ್ಧರಿಸಿವೆ. ಶಾಲಾ ವಾಹನಗಳು ಶೇ 10% ರಷ್ಟು ಏರಿಕೆಗೆ ಮಾಡಲು ನಿರ್ಧಾರ ಮಾಡಿದೆ. ಇದರಿಂದಾಗಿ ಜನಸಾಮ್ಯಾನರ ಪಾಳಿಗೆ ದುನಿಯಾ ದುಬಾರಿಯಾಗಲಿದೆ. ಈ ಮಧ್ಯೆ, ಬೆಳ್ಳಿ ಆಮದನ್ನೂ ಮತ್ತಷ್ಟು ಕಠಿಣಗೊಳಿಸಿದೆ.
ಚಿನ್ನ ಖರೀದಿ ಇಳಿಕೆ
ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ 1 ವರ್ಷದವರೆಗೆ ಚಿನ್ನ ಖರೀದಿ ಮುಂದೂಡುವಂತೆ ಪ್ರಧಾನಿ ಮೋದಿ ಕರೆ ಕೊಟ್ಟ ಬೆನ್ನಲ್ಲೇ ಜನ ಬೆಂಬಲಿಸ್ತಿದ್ದಾರೆ. ಗ್ರಾಹಕರು ಚಿನ್ನ ಖರೀದಿಗೆ ಮುಂದಾಗುತ್ತಿಲ್ಲ. ವರ್ಷದವರೆಗೆ ಮೋದಿ ಚಿನ್ನ ಖರೀದಿಸಬೇಡಿ ಅಂದಿದ್ದಾರೆ. ಹೀಗಾಗಿ ನಾವು ಚಿನ್ನ ಖರೀದಿ ಮಾಡಲ್ಲ ಅಂತಿದ್ದಾರೆ. ಆದರೆ, ಗ್ರಾಹಕರೇ ಬರದೇ ವ್ಯಾಪಾರ ಕುಸಿತವಾಗಿದ್ದು, ಚಿನ್ನದಂಗಡಿ ಮಾಲೀಕರು ಕಂಗಾಲಾಗಿದ್ದಾರೆ.

ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವ 4,000 ರೂ.ಗಿಂತಲೂ ಅಧಿಕ ಹೋಲ್‌ಸೇಲ್, ರೀಟೇಲ್ ಅಂಗಡಿಗಳಿದ್ದು, ವ್ಯಾಪಾರವೇ ಇಲ್ಲದಂತಾಗಿದೆ. ಬಹುತೇಕ ಚಿನ್ನದಂಗಡಿಗಳು ವ್ಯಾಪಾರವಿಲ್ಲದೇ ಬಿಕೋ ಅಂತಿವೆ. ರಾಷ್ಟ್ರದ ಹಿತಸಕ್ತಿಯ ವಿಚಾರ ಬಂದಾಗ ಪ್ರಧಾನಿ ಮೋದಿಯವ್ರಿಗೆ ಬೆಂಬಲಿಸ್ತೇವೆ. ಆದ್ರೆ ಈ ಮಧ್ಯೆ ನಮ್ಮ ಉದ್ಯಮವೂ ನಡೆಯಬೇಕಲ್ವಾ ಅಂತ ಚಿನ್ನದ ವ್ಯಾಪಾರಿಗಳು ಪ್ರಶ್ನೆ ಮಾಡ್ತಿದ್ದಾರೆ.

ಚಿನ್ನದ ಮಾಲೀಕರು ಮಾತ್ರ ಅಲ್ಲ; ಚಿನ್ನ ಕರಗಿಸುವವರು, ಒಡವೆ ಡಿಸೈನ್ ಮಾಡುವವರು, ಪಾಲಿಶ್ ಮಾಡುವವರು, ಹಾಗೂ ಒಡವೆ ಬಾಕ್ಸ್ ಮಾಡೋರು ವ್ಯಾಪಾರವಿಲ್ಲದೇ ಆತಂಕಕ್ಕೆ ಒಳಗಾಗಿದ್ದಾರೆ. ಚಿನ್ನದಂಗಡಿಗಳಲ್ಲಿ ಆಭರಣಗಳನ್ನ ಗ್ರಾಹಕರಿಗೆ ಕೊಡುವಾಗ ಬ್ಯಾಗ್, ಬಾಕ್ಸ್, ಪರ್ಸ್‌ಗಳನ್ನ ಅಂಗಡಿಯವರು ಕೊಡ್ತಾರೆ. ಆದರೆ ಈ ಬಾಕ್ಸ್, ಬ್ಯಾಗ್ ಮಾರಾಟ ಮಾಡುವ ವ್ಯಾಪಾರಿಗಳಿಗೆ ಚಿನ್ನದ ದರ ಏರಿಕೆಯಿಂದ ಟೆನ್ಷನ್ ಶುರುವಾಗಿದೆ. ಚಿನ್ನ ಮಾರಾಟ ಇಲ್ಲದೆ ಬ್ಯಾಗ್, ಬಾಕ್ಸ್ ವ್ಯಾಪಾರವಿಲ್ಲ. ಹೀಗಾಗಿ ಇದನ್ನೇ ಕುಲ ಕಸಬು ಮಾಡಿಕೊಂಡ ಬದುಕುತ್ತಿದ್ದವ್ರಿಗೆ ಮುಂದೇನು ಅನ್ನೋ ಆತಂಕವೂ ಶುರುವಾಗಿದೆ.
ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿನ ಬಹುತೇಕ ಚಿನ್ನದ ಅಂಗಡಿಗಳು ಖಾಲಿಯಾಗಿವೆ. ಹಾಸನದಲ್ಲೂ ಚಿನ್ನ ಖರೀದಿಸುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಈ ಮಧ್ಯೆ, ಶುದ್ಧ ಚಿನ್ನದ 10 ಗ್ರಾಂ ಚಿನ್ನಕ್ಕೆ 980 ರೂ. ಇಳಿಕೆ ಕಂಡಿದ್ದರೆ, ಬೆಳ್ಳಿ ಬೆಲೆಯಲ್ಲೂ 10 ಸಾವಿರ ರೂ. ಕಡಿಮೆಯಾಗಿದೆ.

