ಕೋಲ್ಕತ್ತಾ: ಸಿಎಂ ಮಮತಾ ಬ್ಯಾನರ್ಜಿಯ (Mamata Banergee) ಟಿಎಂಸಿಯಲ್ಲಿ ನಾಯಕರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ನಾಯಕರ ಮಾತಿನ ಚಕಮಕಿಯ ವಾಟ್ಸಪ್ ಚಾಟ್‌ನ್ನು ಬಿಜೆಪಿಯ ಅಮಿತ್ ಮಾಳವೀಯ ಬಹಿರಂಗಪಡಿಸಿದ್ದಾರೆ.
ಟಿಎಂಸಿ ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ಕೀರ್ತಿ ಆಜಾದ್ ನಡುವಿನ ಮೆಸೇಜ್ ವೈರಲ್ ಆಗಿದೆ. ಮಹುವಾ ಮೊಯಿತ್ರಾ ಉಲ್ಲೇಖಿಸಿ ಕಲ್ಯಾಣ್ ಬ್ಯಾನರ್ಜಿ ಮೆಸೇಜ್ ಮಾಡಿದ್ದಾರೆ. ಇಬ್ಬರು ನಾಯಕರ ಕದನದಲ್ಲಿ ಮಮತಾ ಬ್ಯಾನರ್ಜಿ ಮಧ್ಯಪ್ರವೇಶ ಮಾಡಿದ್ದಾರೆ. ಮಾಧ್ಯಮಗಳಿಗೆ ಸಂದರ್ಶನ ನೀಡದಂತೆ ಸೂಚನೆ ನೀಡಿದ್ದಾರೆ. ಆದರೆ, ಟಿಎಂಸಿ ನಾಯಕರ ನಡುವಿನ ತಿಕ್ಕಾಟವನ್ನು ಹಿರಿಯ ಸಂಸದ ಸೌಗತಾ ರಾಯ್ ಖಚಿತಪಡಿಸಿದ್ದಾರೆ.
ನಾನು ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಈ ಮಹಿಳಾ ಸಂಸದೆ ಚುನಾವಣಾ ಆಯೋಗದ ಕಚೇರಿಯ ಹೊರಗೆ ಭದ್ರತಾ ಸಿಬ್ಬಂದಿಯನ್ನು ಸಂಪರ್ಕಿಸಿ ನನ್ನನ್ನು ಬಂಧಿಸುವಂತೆ ಕೇಳುತ್ತಿದ್ದರು. ನನ್ನನ್ನು ಜೈಲಿಗೆ ಕಳುಹಿಸಲು ಅವರು ಯಾರು? ಅವರು ನನ್ನ ಮೇಲೆ ನಿಂದನೆ ಮಾಡಿದ್ದಾರೆ. ಸಂಸತ್ತಿನಲ್ಲಿ ಹೋರಾಡುವುದು ನಾನೇ. ನಾನು ನಿರ್ದಿಷ್ಟ ಕೈಗಾರಿಕಾ ಸಂಸ್ಥೆಯ ಬಗ್ಗೆ ಮಾತ್ರ ಗೀಳು ಹೊಂದಿರುವ ವ್ಯಕ್ತಿಯಲ್ಲ ಎಂದು ಕಲ್ಯಾಣ್ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.
ಮಹಿಳಾ ಸಂಸದೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ ಎಂದ ಮಾತ್ರಕ್ಕೆ ಅವರು ಯಾರನ್ನಾದರೂ ಅವಮಾನಿಸಬಹುದು ಎಂದರ್ಥವಲ್ಲ ಎಂದು ಬ್ಯಾನರ್ಜಿ ಅಸಮಾಧಾನ ಹೊರಹಾಕಿದ್ದಾರೆ.