– ಉಪ ಚುನಾವಣೆಯಲ್ಲಿ ಒಕ್ಕಲಿಗರ ಮತಕ್ಕಾಗಿ ಗಿಮಿಕ್
ಬೆಂಗಳೂರು: ಇಂದಿರಾ ಕ್ಯಾಂಟೀನ್‍ಗೆ ಕೆಂಪೇಗೌಡ ಹೆಸರಿಡಲು ಮುಂದಾಗಿರುವ ಬಿಜೆಪಿ ಉಪ ಚುನಾವಣೆಯಲ್ಲಿ ಒಕ್ಕಲಿಗರ ಮತ ಸೆಳೆಯಲು ಹೊಸ ಪ್ಲ್ಯಾನ್ ರೂಪಿಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು 2017ರಲ್ಲಿ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‍ಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬದಲಾಗಿ ನಾಡಪ್ರಭು ಕೆಂಪೇಗೌಡ ಹೆಸರಿಡಲು ಬಿಜೆಪಿ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಕ್ಯಾಂಟೀನ್ ನಿರ್ವಹಣೆಗೆ ಶೇ.25 ರಷ್ಟು ಅನುದಾನ ಮಾತ್ರ ಕೊಡಲು ಒಪ್ಪಿದೆ. ಹೀಗಾಗಿ ಹೆಚ್ಚಿನ ಅನುದಾನ ಪಡೆಯುವ ಉದ್ದೇಶದಿಂದ ಉಪ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಕ್ಯಾಂಟೀನ್ ಹೆಸರು ಬದಲಾಯಿಸಲು ಸರ್ಕಾರದ ಮುಂದೆ ಪ್ರಸ್ತಾವನೆ ಇಡಲು ಚಿಂತನೆ ನಡೆದಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
Advertisement
Advertisement
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಈ ಹಿಂದೆ ಇಂದಿರಾ ಕ್ಯಾಂಟೀನ್‍ಗಳಿಗೆ ಅನ್ನಪೂರ್ಣ ಕ್ಯಾಂಟೀನ್ ಎಂದು ಹೆಸರು ಬದಲಾಯಿಸುವ ನಿರ್ಧಾರದ ಸುಳಿವನ್ನು ಕೊಟ್ಟಿದ್ದರು. ಜುಲೈನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಮಾತನಾಡಿದ್ದ ಸಚಿವರು, ಮೈತ್ರಿ ಅವಧಿಯಲ್ಲಿ ಕೆಲವು ರಾಜಕೀಯ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ನಾವು ಕೂಡ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಕ್ಯಾಬಿನೆಟ್ ಸಭೆಯಲ್ಲಿ ಕೆಲವೊಂದು ವಿಷಯಗಳ ಬಗ್ಗೆ ನಿರ್ಧಾರ ತಗೆದುಕೊಳ್ಳಲಾಗುತ್ತದೆ. ಮೈತ್ರಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಕೈಬಿಡಲು ಬರಲ್ಲ. ಹಾಗೇ ಎಲ್ಲಾ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ. ಈ ಸಂಬಂಧ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು.
Advertisement
Advertisement
ಅನುದಾನ ನೀಡಲು ಬಿಜೆಪಿ ನಕಾರ:
ಸೆಪ್ಟೆಂಬರ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಅನುದಾನ ನೀಡುವಂತೆ ಬಿಬಿಎಂಪಿ ಸಲ್ಲಿಸಿದ್ದ ಮನವಿಗೆ ರಾಜ್ಯ ಸರ್ಕಾರ ನಕಾರ ಎಂದಿದೆ. ಕೇವಲ ಶೇ. 25ರಷ್ಟು ಅನುದಾನ ಕೊಡುವುದಕ್ಕೆ ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಶೇ. 100ರ ಬದಲು ಐವತ್ತು ಪರ್ಸೆಂಟ್ ಆದರೂ ಅನುದಾನ ಕೊಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದರು.
ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಅವಧಿಯು ಆಗಸ್ಟ್ ತಿಂಗಳಿಗೆ ಮುಗಿದಿದ್ದು, ಹೊಸ ಟೆಂಡರ್ ಕರೆಯುವವರೆಗೂ ಹಳೆಯ ಗುತ್ತಿಗೆದಾರರನ್ನೇ ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಈ ಮಧ್ಯೆ ಇಂದಿರಾ ಕ್ಯಾಂಟೀನ್‍ನ ಅವ್ಯವಹಾರ ಆರೋಪದ ಹಿನ್ನಲೆ ಸರ್ಕಾರ ತನಿಖೆಗೂ ಆದೇಶ ನೀಡಿದೆ. ಆದರೆ 150 ಕೋಟಿ ರೂ. ಇಂದಿರಾ ಕ್ಯಾಂಟೀನ್ ನಿರ್ವಹಣಾ ವೆಚ್ಚ ಬಿಬಿಎಂಪಿಗೆ ಹೊರೆಯಾಗಿದೆ ಎಂದು ಹೇಳಿದ್ದರು.
ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರು, ಇಂದಿರಾ ಕ್ಯಾಂಟೀನ್ ನಡೆಸಲು ದುಡ್ಡಿಲ್ಲ, ಮುಚ್ಚುವ ಹಂತ ತಲುಪಿವೆ ಎಂದು ಹೇಳಿದ್ದರು.
ಆಗಸ್ಟ್ 28ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಉತ್ತರಿಸಿದ್ದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 173 ಇಂದಿರಾ ಕ್ಯಾಂಟೀನ್, 18 ಮೊಬೈಲ್ ಕ್ಯಾಂಟೀನ್‍ಗಳಿವೆ. 14.40 ಕೋಟಿ ಜನ ಈವರೆಗೆ ಊಟ ಮಾಡಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿ ಹಣ ಬಿಡುಗಡೆ ಮಾಡಿತ್ತು. ವಿವಿಧ ಕಾಮಗಾರಿಗೆ ಹೆಚ್ಚುವರಿಯಾಗಿ 24.37 ಕೋಟಿ ರೂ. ಖರ್ಚಾಗಿದೆ. ರಾಜ್ಯ ಸರ್ಕಾರ 15 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿತು ಎಂದು ಮಾಹಿತಿ ನೀಡಿದ್ದರು.
2019-20ರ ಸಾಲಿನ ಬಜೆಟ್‍ನಲ್ಲಿ 210 ಕೋಟಿ ರೂ. ಅನುದಾನ ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‍ಗೆ ಯಾವುದೇ ಹಣ ಮೀಸಲಿಡಲಿಲ್ಲ. ಎರಡು ಮತ್ತು ಮೂರನೇ ಪತ್ರವನ್ನು ಕೂಡ ಬರೆದಿದ್ದೆ. ಇವತ್ತಿಗೂ ಸರ್ಕಾರವಾಗಲಿ, ಪಾಲಿಕೆಯಲ್ಲಾಗಲಿ ಹಣ ಮೀಸಲಿಟ್ಟಿಲ್ಲ. ಇದೀಗ ಮುಚ್ಚುವ ಪರಿಸ್ಥಿತಿ ಬಂದಿದ್ದು, ನೀವು ಚರ್ಚಿಸಿ ನಿರ್ಧಾರ ಮಾಡಿ ಎಂದು ಬಿಬಿಎಂಪಿ ಸದಸ್ಯರ ಮುಂದೆ ವಿವರಿಸಿದ್ದರು.