ಕರ್ತವ್ಯ ಪಥದಲ್ಲಿ ಮಿಂಚಿದ ʻರಾಕೆಟ್‌ ಗರ್ಲ್‌ʼ – ಚಂದ್ರಯಾನ-3 ಸಕ್ಸಸ್‌ನಲ್ಲಿ ಮಹಿಳಾ ವಿಜ್ಞಾನಿಗಳ ಕೊಡುಗೆ ನೆನಪಿಸಿದ ಟ್ಯಾಬ್ಲೊ

Public TV
2 Min Read
ISRO 3

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಚಂದ್ರಯಾನ-3 ಕಳೆದ ವರ್ಷ ಸಕ್ಸಸ್‌ ಕಂಡಿತು. ಇಸ್ರೋ ವಿಜ್ಞಾನಿಗಳ ಪರಿಶ್ರಮ, ಭಾರತೀಯರ ಪ್ರಾರ್ಥನೆ ಫಲವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ (Moon SouthPole) ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಚಂದ್ರಯಾನ-3 (Chandrayaan-3) ವಿಕ್ರಮ್‌ ಲ್ಯಾಂಡರ್‌ (Vikram Lander) ಯಶಸ್ವಿಯಾಗಿ ಕಾಲಿಟ್ಟಿತು.

ಇಸ್ರೋದ ಈ ಸಾಧನೆಯನ್ನು ಇಡೀ ದೇಶವೇ ಕೊಂಡಾಡಿತು. ವಿಶ್ವದ ಘಟಾನುಘಟಿ ದೇಶಗಳು ಭಾರತದ ತಾಂತ್ರಿಕತೆಗೆ ಹಾಗೂ ವಿಜ್ಞಾನಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದವು. ಇದೀಗ 2024ರ ಗಣರಾಜ್ಯೋತ್ಸವದಲ್ಲಿಯೂ ಇಸ್ರೋ ಸಾಧನೆಯನ್ನು ನೆನಪಿಸುವ ಕೆಲಸ ಮಾಡಲಾಯಿತು. ವಿಶೇಷವೆಂದರೆ ಈ ಬಾರಿ ʻನಾರಿ ಶಕ್ತಿʼಯನ್ನೇ ಕೇಂದ್ರೀಕರಿಸಿದ್ದರಿಂದ, ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಮಹಿಳಾ ವಿಜ್ಞಾನಿಗಳ ಸಾಧನೆಯನ್ನು ನೆನಪಿಸಿರುವುದು ವಿಶೇಷವಾಗಿತ್ತು. ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ – ಮೇಳೈಸಿದ ಸಾಂಸ್ಕೃತಿಕ ವೈಭವ, ಸೇನಾ ಶಕ್ತಿಪ್ರದರ್ಶನವೇ ರೋಚಕ!

ISRO 2

ʻರಾಕೆಟ್‌ ಗರ್ಲ್‌ʼಎಂಬ ಪರಿಕಲ್ಪನೆಯೊಂದಿಗೆ ಇಸ್ರೋ ಸಂಸ್ಥೆ ನಿರ್ಮಿಸಲಾಗಿದ್ದ‌ ಸ್ತಬ್ಧಚಿತ್ರದಲ್ಲಿ ಚಂದ್ರಯಾನ-3ರ ಸಂಪೂರ್ಣ ಚಿತ್ರಣ ನಿರ್ಮಿಸಲಾಗಿತ್ತು. ಪ್ರಧಾನಿ ಅವರಿಂದ ನಾಮಾಂಕಿತವಾದ ʻಶಿವ ಶಕ್ತಿʼಕೇಂದ್ರಬಿಂದುವಿನ (ವಿಕ್ರಮ್‌ ಲ್ಯಾಂಡರ್‌ ಲ್ಯಾಂಡ್‌ ಆಗಿದ್ದ ಚಂದ್ರನ ಮೇಲ್ಮೈ ಸ್ಥಳ) ಮೇಲೆ ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌ ಕಾಲಿಟ್ಟ ಆ ಕ್ಷಣವನ್ನು ಮರುಸೃಷ್ಟಿಸಲಾಗಿತ್ತು. ಈ ಮೂಲಕ ಚಂದ್ರಯಾನ-3 ಸಕ್ಸಸ್‌ನಲ್ಲಿ ಮಹಿಳೆಯರ ಪಾತ್ರವೂ ಅಪಾರವಾಗಿದೆ ಎಂಬುದನ್ನು ಸಾಬೀತುಪಡಿಸಲಾಯಿತು.

ಆದಿತ್ಯ ಎಲ್‌-1 ಸಾಧನೆ ಸ್ಮರಣೆ:
110 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಇಸ್ರೋ ಆದಿತ್ಯ ಎಲ್1 ನೌಕೆಯು ಭೂಮಿಯಿಂದ 15 ಲಕ್ಷ ಕಿಮೀ ಕ್ರಮಿಸಿ ಇದೇ ತಿಂಗಳಲ್ಲಿ ಅಂತಿಮ ಕಕ್ಷೆ ತಲುಪಿತು. ಇದರೊಂದಿಗೆ ಸೂರ್ಯನ ಅಧ್ಯಯನಕ್ಕೆ ಮುಂದಾಗಿರುವ ಇಸ್ರೋದ ಮತ್ತೊಂದು ಸಾಧನೆಯನ್ನು ಸ್ತಬ್ಧಚಿತ್ರದಲ್ಲಿ ನೆನಪಿಸಲಾಯಿತು. ಇದನ್ನೂ ಓದಿ: Republic Day: ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಗೌರವ

ಮಿಂಚಿದ ಬಾಲಕರಾಮ, ವಂದೇ ಭಾರತ್‌:
ವಿಶ್ವದ ಗಮನ ಸೆಳೆದಿದ್ದ ಅಯೋಧ್ಯೆ ಬಾಲಕರಾಮ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಡೆದ ಸ್ತಬ್ಧಚಿತ್ರಗಳ ಮೆರವಣಿಗೆ ವೇಳೆಯೂ ಮಿಂಚಿದ್ದಾನೆ. ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಪ್ರದರ್ಶನದ ವೇಳೆ ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ಕಲ್ಪನೆಯಲ್ಲಿ ಚಿತ್ರಿಸಿದ ಸ್ತಬ್ಧಚಿತ್ರ ಮೆರವಣಿಗೆಯು ಗಮನ ಸೆಳೆಯಿತು. ಹಾಗೆಯೇ, ತಮಿಳುನಾಡು, ಆಂಧ್ರಪ್ರದೇಶ ಸೇರಿ ದೇಶದ ಹಲವು ರಾಜ್ಯಗಳ ಸ್ತಬ್ಧಚಿತ್ರಗಳು ದೇಶದ ವೈವಿಧ್ಯತೆಯನ್ನು, ನಾರಿಶಕ್ತಿ, ದೇಶದ ರಕ್ಷಣಾ ಬಲ, ಕಲೆ, ಸಂಸ್ಕೃತಿಯನ್ನು ಸಾರಿದವು. ಇದನ್ನೂ ಓದಿ: 75ನೇ ಗಣರಾಜ್ಯೋತ್ಸವದ ಸಂಭ್ರಮ – ಕರ್ತವ್ಯ ಪಥದಲ್ಲಿ ಗಮನ ಸೆಳೆಯಲಿದೆ ʻನಾರಿ ಶಕ್ತಿʼ 

Share This Article