ಹೈದರಾಬಾದ್: ಎಟಿಎಂಗಳಲ್ಲಿ ಹಣ ಡ್ರಾ ಮಾಡಿದ್ದೀರಾ. ಆದರೆ ಚಿನ್ನವನ್ನು ಡ್ರಾ ಮಾಡುವುದನ್ನು ನೋಡಿದ್ದೀರಾ? ಹೌದು, ಹೈದರಾಬಾದ್‌ನ (Hyderabad) ಬೇಗಂಪೇಟೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಚಿನ್ನದ ಎಟಿಎಂ (Gold ATM) ಉದ್ಘಾಟಿಸಲಾಗಿದೆ.
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ನೀವು ಬಯಸಿದ ಚಿನ್ನವನ್ನು ಡ್ರಾ ಮಾಡಬಹುದು. ಹೈದರಾಬಾದ್‌ನ ಬೇಗಂಪೇಟೆಯಲ್ಲಿರುವ ಗೋಲ್ಡ್ ಸಿಕ್ಕಾ ಕಂಪನಿಯ ಕಚೇರಿಯಲ್ಲಿ ತೆಲಂಗಾಣ ಮಹಿಳಾ ಆಯೋಗದ ಅಧ್ಯಕ್ಷೆ ಸುನಿತಾ ಲಕ್ಷ್ಮಾ ರೆಡ್ಡಿ ಅವರು ನೂತನ ಚಿನ್ನದ ಎಟಿಎಂ ಅನ್ನು ಉದ್ಘಾಟಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್‌ಗೆ ಕಪಾಳಮೋಕ್ಷ – ಬಿಜೆಪಿ ಮಾಜಿ ಸಂಸದೆ ವಿರುದ್ಧ ಎಫ್‌ಐಆರ್
ಶೇ.99.99ರಷ್ಟು ಶುದ್ಧತೆಯ 0.5, 1, 2, 5, 10, 20, 50 ಮತ್ತು 100 ಗ್ರಾಂ ತೂಕದ ಚಿನ್ನದ ನಾಣ್ಯಗಳನ್ನು ಡ್ರಾ ಮಾಡಬಹುದು. ಚಿನ್ನದ ಜೊತೆಗೆ ಅದರ ಗುಣಮಟ್ಟ ಖಾತರಿಪಡಿಸಲು ದಾಖಲೆಗಳನ್ನು ಸಹ ನೀಡಲಾಗುತ್ತದೆ ಎಂದು ಗೋಲ್ಡ್ ಸಿಕ್ಕಾ ಲಿಮಿಟೆಡ್‌ನ ಸಿಇಒ ಸೈಯದ್ ತರುಜ್ ತಿಳಿಸಿದ್ದಾರೆ.
ಗೋಲ್ಡ್ ಸಿಕ್ಕಾ ದೇಶಾದ್ಯಂತ ಸುಮಾರು 3,000 ಎಟಿಎಂಗಳನ್ನು ಸ್ಥಾಪಿಸಲು ಯೋಜಿಸಿದೆ. ಇದರಲ್ಲಿ ಶೇ.60-70ರಷ್ಟು ಭಾಗ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಲು ಚಿಂತಿಸಿದೆ. ಎಟಿಎಂಗಳು ಪ್ರಾಯೋಗಿಕವಾಗಿ ಹೈದರಾಬಾದ್‌ನಲ್ಲಿ ಆರಂಭವಾಗಿದೆ. ನಗರದ ಗುಲ್ಜಾರ್‌ಹೌಸ್, ಸಿಕಂದರಾಬಾದ್, ಅಬಿಡ್ಸ್, ಪೆದ್ದಪಲ್ಲಿ, ವಾರಂಗಲ್ ಮತ್ತು ಕರೀಂನಗರದಲ್ಲಿ ಶೀಘ್ರದಲ್ಲೇ ಚಿನ್ನದ ಎಟಿಎಂಗಳನ್ನು ತೆರೆಯಲಾಗುವುದು ಎಂದು ತರುಜ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮದುವೆಗೆಂದು ವಿಮಾನವನ್ನೇ ಬುಕ್ ಮಾಡಿದ ಜೋಡಿ