ವಾಷಿಂಗ್ಟನ್: ಅಮೆರಿಕ ಪೊಲೀಸರು ಭಾರತೀಯ ಮೂಲದ ಟೆಕ್ಕಿಯೋರ್ವನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಕ್ಯಾಲಿಫೋರ್ನಿಯಾದ (California) ಸಾಂತಾ ಕ್ಲಾರಾದಲ್ಲಿ (Santa Clara) ನಡೆದಿದೆ.
ಮೃತ ಭಾರತೀಯ ಮೂಲದ ಟೆಕ್ಕಿಯನ್ನು ತೆಲಂಗಾಣದ ಮೆಹಬೂಬ್‌ನಗರದ ಮೊಹಮ್ಮದ್ ನಿಜಾಮುದ್ದೀನ್ ಎಂದು ಗುರುತಿಸಲಾಗಿದೆ. 2016ರ ಬಳಿಕ ತಮ್ಮ ಉನ್ನತ ಶಿಕ್ಷಣಕ್ಕಾಗಿ ಯುಎಸ್‌ಗೆ ತೆರಳಿದ್ದರು. ಫ್ಲೋರಿಡಾ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಮುಗಿಸಿ, ಬಳಿಕ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು.ಇದನ್ನೂ ಓದಿ: iPhone 17 ಖರೀದಿಗೆ ನೂಕುನುಗ್ಗಲು – ಆ್ಯಪಲ್ ಸ್ಟೋರ್ ಮುಂದೆ ಹೊಡೆದಾಡಿಕೊಂಡ ಗ್ರಾಹಕರು
ಸಾಂತಾ ಕ್ಲಾರಾ ಪೊಲೀಸರ ಮಾಹಿತಿ ಪ್ರಕಾರ, ಸೆ.3ರಂದು ಬೆಳಗ್ಗೆ 6:30ರ ಸುಮಾರಿಗೆ 911 ಸಂಖ್ಯೆಗೆ ಕರೆಯೊಂದು ಬಂದಿತ್ತು. ಸಾಂತಾ ಕ್ಲಾರಾದ ನಿವಾಸವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಹತ್ಯೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಮೃತ ನಿಜಾಮುದ್ದೀನ್ ಚಾಕು ಹಿಡಿದು ಆತನ ರೂಮ್‌ಮೇಟ್‌ಗೆ ಬೆದರಿಕೆ ಹಾಕುತ್ತಿದ್ದ. ಇದನ್ನು ಗಮನಿಸಿದ ಪೊಲೀಸರು ಗುಂಡಿನ ದಾಳಿ ನಡೆಸಿದರು. ಕೂಡಲೇ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇನ್ನೂ ಮೃತನ ರೂಮ್‌ಮೇಟ್‌ಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಸದ್ಯ ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ನಿಜಾಮುದ್ದೀನ್ ಸಾವನ್ನಪ್ಪಿದ ಎರಡು ವಾರಗಳ ಬಳಿಕ ಆತನ ಕುಟುಂಬಸ್ಥರಿಗೆ ಮಾಹಿತಿ ತಿಳಿದಿದ್ದು, ನಾನು ನನ್ನ ಮಗನಿಗೆ ಕರೆ ಮಾಡಿದೆ. ಆದರೆ ಮೊಬೈಲ್ ಸ್ವಿಚ್ಢ್ ಆಫ್ ಬಂತು. ಬಳಿಕ ಆತನ ಸ್ನೇಹಿತ ನಿಜಾಮುದ್ದೀನ್ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾನೆ ಎಂದು ಮೃತನ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ನಿಜಾಮುದ್ದೀನ್ ಸ್ನೇಹಿತರು ಮಾಹಿತಿ ನೀಡಿದ್ದು, ನಿಜಾಮುದ್ದೀನ್‌ಗೆ ಆತನ ಕಂಪನಿಯಲ್ಲಿ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಕಳೆದ 6 ತಿಂಗಳ ಹಿಂದೆಯೇ ನಿಜಾಮುದ್ದೀನ್ ಅನ್ನು ಕೆಲಸದಿಂದ ತೆಗೆದಿದ್ದರು. ಜೊತೆಗೆ ಆತನ ಓರ್ವ ರೂಮ್‌ಮೇಟ್ ಕೂಡ ತುಂಬಾ ಪೀಡಿಸುತ್ತಿದ್ದ ಎಂದು ಹೇಳಿಕೊಂಡಿದ್ದಾರೆ.
ಸದ್ಯ ನಿಜಾಮುದ್ದೀನ್ ಮೃತದೇಹವನ್ನು ಭಾರತಕ್ಕೆ ತರಲು ಸಹಾಯ ಕೋರಿ ಸಾಮಾಜಿಕ ಕಾರ್ಯಕರ್ತ ಮತ್ತು ಮಜ್ಲಿಸ್ ಬಚಾವೋ ತೆಹ್ರೀಕ್ ಮುಖ್ಯಸ್ಥರು ಅಮ್ಜೇದ್ ಉಲ್ಲಾ ಖಾನ್ ಅವರು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.ಇದನ್ನೂ ಓದಿ: 15 ತಿಂಗಳ ಗೃಹಲಕ್ಷ್ಮಿ ಹಣ ಕೂಡಿಟ್ಟು ಸಿಎಂ ಭಾವಚಿತ್ರದ ಬಾಗಿಲು ಕೆತ್ತಿಸಿದ ಮಹಿಳೆ