ಹಮಾಸ್‌ ಉಗ್ರರಿಗೆ ಬೆಂಬಲ – ಭಾರತದ ಸಂಶೋಧಕ ಅಮೆರಿಕದಲ್ಲಿ ಅರೆಸ್ಟ್‌, ಶೀಘ್ರವೇ ಗಡೀಪಾರು

Public TV
2 Min Read
Indian Researcher Badar Khan Suri In US Faces Deportation For Allegedly Spreading Hamas Propaganda

ವಾಷಿಂಗ್ಟನ್‌: ಹಮಾಸ್‌ (Hamas) ಪರ ಬೆಂಬಲ ವ್ಯಕ್ತಪಡಿಸಿದ್ದ ಭಾರತೀಯ ಸಂಶೋಧಕ (Indian Researcher) ವಿದ್ಯಾರ್ಥಿಯನ್ನು ಅಮೆರಿಕದ ವಲಸೆ ಅಧಿಕಾರಿಗಳು ಬಂಧಿಸಿದ್ದು ಗಡೀಪಾರಾಗುವ ಸಾಧ್ಯತೆಯಿದೆ.

ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ (Georgetown University) ಓದುತ್ತಿರುವ ಬದರ್‌ ಖಾನ್ ಸೂರಿ (Badar Khan Suri) ಅವರನ್ನು ಸೋಮವಾರ ರಾತ್ರಿ ವರ್ಜೀನಿಯಾದಲ್ಲಿ ಬಂಧಿಸಲಾಗಿದೆ.

ಪೋಸ್ಟ್-ಡಾಕ್ಟರಲ್ ಫೆಲೋ ಆಗಿರುವ ಬದರ್ ಅವರನ್ನು ಹೋಮ್‌ಲ್ಯಾಂಡ್‌ ಸೆಕ್ಯೂರಿಟಿ ಬಂಧಿಸಿದೆ. ಈಗಾಲೇ ಬದರ್‌ ಅವರ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಅಮೆರಿಕದಲ್ಲಿ ಹಮಾಸ್‌ ಉಗ್ರರ ಪರ ಪ್ರಚಾರ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಶಂಕಿತ ಉಗ್ರರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಸೂರಿ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿನಿಮಯ ವಿದ್ಯಾರ್ಥಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಮಾಸ್ ಪ್ರಚಾರವನ್ನು ಸಕ್ರಿಯವಾಗಿ ಹರಡುತ್ತಿದ್ದರು ಮತ್ತು ಯೆಹೂದಿ ವಿರೋಧಿ ವಿಚಾರಗಳನ್ನು ಪ್ರಚಾರ ಮಾಡುತ್ತಿದ್ದರು ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಸಹಾಯಕ ಕಾರ್ಯದರ್ಶಿ ಟ್ರಿಸಿಯಾ ಮೆಕ್‌ಲಾಫ್ಲಿನ್ ಎಕ್ಸ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಹಮಾಸ್‌ ಬೆಂಬಲಿಸಿದ್ದ ಭಾರತೀಯ ವಿದ್ಯಾರ್ಥಿನಿಯನ್ನು ಹೊರದಬ್ಬಿದ ಅಮೆರಿಕ

ಡಾ. ಬದರ್ ಖಾನ್ ಸೂರಿ ವಾಷಿಂಗ್ಟನ್ ಡಿಸಿಯ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಎಡ್ಮಂಡ್ ಎ. ವಾಲ್ಷ್ ಸ್ಕೂಲ್ ಆಫ್ ಫಾರಿನ್ ಸರ್ವಿಸ್‌ನಲ್ಲಿರುವ ಅಲ್ವಲೀದ್ ಬಿನ್ ತಲಾಲ್ ಸೆಂಟರ್ ಫಾರ್ ಮುಸ್ಲಿಂ-ಕ್ರಿಶ್ಚಿಯನ್ ಅಂಡರ್‌ಸ್ಟಾಂಡಿಂಗ್‌ನಲ್ಲಿ ಪೋಸ್ಟ್‌ಡಾಕ್ಟರಲ್ ಫೆಲೋ ಆಗಿದ್ದಾರೆ.

2020 ರಲ್ಲಿ ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ನೆಲ್ಸನ್ ಮಂಡೇಲಾ ಸೆಂಟರ್ ಫಾರ್ ಪೀಸ್ ಅಂಡ್ ಕಾನ್ಫ್ಲಿಕ್ಟ್ ರೆಸಲ್ಯೂಷನ್‌ನಿಂದ ಶಾಂತಿ ಮತ್ತು ಸಂಘರ್ಷ ಅಧ್ಯಯನ ವಿಚಾರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

 

Share This Article