ನವದೆಹಲಿ: ಭಾರತೀಯ ರೈಲ್ವೇಯ 166 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ವರ್ಷ ಯಾವುದೇ ಪ್ರಯಾಣಿಕರು ಸಾವನ್ನಪ್ಪಿಲ್ಲ. ಈ ಹಣಕಾಸು ವರ್ಷದಲ್ಲಿ ಒಬ್ಬ ಪ್ರಯಾಣಿಕರೂ ಸಾವನ್ನಪ್ಪಿಲ್ಲ ಎಂದು ಭಾರತೀಯ ರೈಲ್ವೇ ಹೇಳಿಕೊಂಡಿದೆ.
ಭಾರತೀಯ ರೈಲ್ವೇಯ 166 ವರ್ಷಗಳ ಇತಿಹಾಸದಲ್ಲಿ, 2019-20 ‘ಶೂನ್ಯ ಪ್ರಯಾಣಿಕರ ಸಾವಿಗೆ’ ಸಾಕ್ಷಿಯಾಗಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವಿಟ್ಟರ್ ಖಾತೆಯಲ್ಲಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
Advertisement
ರೈಲ್ವೇ ಸೇವೆಗಳ ಏಕೀಕರಣ, ರೈಲ್ವೇ ಸೌಲಭ್ಯಗಳು, ಇಲಾಖೆ ಕಾರ್ಯ ಶೈಲಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಗಮನಾರ್ಹ ಸುಧಾರಣೆ ಇದಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ವಿಶ್ವ ದರ್ಜೆಯ ರೈಲ್ವೇ ಸೇವೆಗಳನ್ನು ಒದಗಿಸುವ ನಮ್ಮ ಸಂಕಲ್ಪದ ದಿಕ್ಕಿನಲ್ಲಿ ತೆಗೆದುಕೊಂಡ ಹೆಜ್ಜೆಯಾಗಿದೆ. ದೇಶದ ಅಭಿವೃದ್ಧಿಗೆ ಇದು ಹೆಚ್ಚಿನ ಕೊಡುಗೆ ನೀಡಲಿದ್ದು ನಾವು ಹೆಚ್ಚು ಸುರಕ್ಷತೆ ಆದ್ಯತೆ ನೀಡುತ್ತಿದ್ದೇವೆ ಎಂದು ತಮ್ಮ ಎರಡನೇ ಟ್ವೀಟ್ ನಲ್ಲಿ ಗೋಯಲ್ ಹೇಳಿಕೊಂಡಿದ್ದಾರೆ.
Advertisement
Advertisement
ಕಳೆದ ಡಿಸೆಂಬರ್ 6 ರಂದು, ದೆಹಲಿ ಹೈಕೋರ್ಟ್ ದೇಶಾದ್ಯಂತ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲಿ ಸುರಕ್ಷತೆ ಮತ್ತು ಸುರಕ್ಷತಾ ಕ್ರಮಗಳ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಕೋರಿ ಸಲ್ಲಿಸಿದ ಅರ್ಜಿಯ ಮೇಲೆ ಕೇಂದ್ರದಿಂದ ಪ್ರತಿಕ್ರಿಯೆ ನೀಡಲು ಸೂಚಿಸಿತ್ತು.
Advertisement
2018ರ ಹಣಕಾಸು ವರ್ಷದಲ್ಲಿ 73 ರೈಲ್ವೇ ಅಪಘಾತಗಳು ಸಂಭವಿಸಿದ್ದವು. 2019ರಲ್ಲಿ ಈ ಸಂಖ್ಯೆ 59ಕ್ಕೆ ಇಳಿದಿದೆ. 2013ರಿಂದ 2018ರವರೆಗೆ ಪ್ರತಿ ವರ್ಷ ಸರಾಸರಿ 110 ಅಪಘಾತಗಳು ಸಂಭವಿಸಿದ್ದು 990 ಮಂದಿ ಬಲಿಯಾಗಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆ ನವೆಂಬರಿನಲ್ಲಿ ರೈಲ್ವೇ ಹಳಿಗಳನ್ನು ಸುರಕ್ಷತೆ ಸುಧಾರಿಸಲು ಆಧುನೀಕರಿಸಲಾಗುತ್ತಿದೆ ಎಂದು ಹೇಳಿಕೊಂಡಿದೆ. ಹಳಿಗಳಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಲು ಅಲ್ಟ್ರಾಸೋನಿಕ್ ಫ್ಲಾ ಡಿಟೆಕ್ಷನ್(ಯುಎಸ್‍ಎಫ್‍ಡಿ) ತಂತ್ರಜ್ಞಾನ ಬಳಸಿಕೊಂಡಿದ್ದು ಸೆನ್ಸರ್ ಮೂಲಕ ಅಪಘಾತಗಳನ್ನು ತಪ್ಪಿಸಲಾಗಿದೆ. ಇವೆಲ್ಲದರ ಹೊರತಾಗಿ, ಸಿಬ್ಬಂದಿಗಳಿಗೆ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.