ಅಹಮದಾಬಾದ್: ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್ ಸಿಡಿಸಿದ 5 ಭರ್ಜರಿ ಸಿಕ್ಸರ್ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್, ಹಾಲಿ ಚಾಂಪಿಯನ್ಸ್ ಗುಜರಾತ್ ಜೈಂಟ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಕೆಕೆಆರ್ ಗೆಲುವಿಗೆ ಕೊನೆಯ ಓವರ್‌ನಲ್ಲಿ 29 ರನ್‌ಗಳ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಉಮೇಶ್ ಯಾದವ್ ಮೊದಲ ಎಸೆತದಲ್ಲಿ 1 ರನ್ ತೆಗೆದುಕೊಂಡರು. ನಂತರ ಕ್ರೀಸ್‌ಗೆ ಬಂದ ರಿಂಕು ಸಿಂಗ್ ಸತತ 5 ಎಸೆತಗಳನ್ನೂ ಭರ್ಜರಿ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ದರು. ಈ ಮೂಲಕ ಗೆಲುವಿನ ಹಾದಿಯಲ್ಲಿದ್ದ ಹಾಲಿ ಚಾಂಪಿಯನ್ಸ್ ಪಡೆಗೆ ಸೋಲುಣಿಸಿ ಕೆಕೆಆರ್ ತಂಡ ಸತತ 2ನೇ ಗೆಲುವು ದಾಖಲಿಸಿತು.
Advertisement
Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡ ಸಾಯಿ ಸುದರ್ಶನ್ ಹಾಗೂ ವಿಜಯ್ ಶಂಕರ್ ಅಮೋಘ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. 205 ರನ್ ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ ರೋಚಕ ಜಯ ಸಾಧಿಸಿತು. ಇದನ್ನೂ ಓದಿ: RCB ಅಭಿಮಾನಿಗಳೇ ಎಚ್ಚರ – ಬ್ಲ್ಯಾಕ್‌ನಲ್ಲಿ ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿ ಮೋಸ ಹೋಗದಿರಿ
Advertisement
Advertisement
ಚೇಸಿಂಗ್ ಆರಂಭಿಸಿದ ಕೆಕೆಆರ್ ಉತ್ತಮ ಶುಭಾರಂಭ ಪಡೆಯುವಲ್ಲಿ ವಿಫಲವಾಯಿತು. ಆದರೂ 3ನೇ ವಿಕೆಟ್‌ಗೆ ಜೊತೆಯಾದ ವೆಂಕಟೇಶ್ ಅಯ್ಯರ್, ನಾಯಕ ನಿತೀಶ್ ರಾಣ ಭರ್ಜರಿ ಬ್ಯಾಟಿಂಗ್ ನಡೆಸಿದರು. 3ನೇ ವಿಕೆಟ್ ಪತನಕ್ಕೆ ಈ ಜೋಡಿ 55 ಎಸೆತಗಳಲ್ಲಿ 100 ರನ್ ಕಲೆಹಾಕಿತ್ತು. ಇದರಿಂದ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಅಷ್ಟರಲ್ಲೇ ನಿತೀಶ್ ರಾಣ 29 ಎಸೆತಗಳಲ್ಲಿ ಭರ್ಜರಿ 45 ರನ್ (4 ಬೌಂಡರಿ, 3 ಸಿಕ್ಸರ್) ಗಳಿಸಿ ಔಟಾದರು. ಇನ್ನೂ 207.50 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ ಏಕಾಂಗಿ ಹೋರಾಟ ನಡೆಸಿದ ವೆಂಕಟೇಶ್ ಅಯ್ಯರ್ 40 ಎಸೆತಗಳಲ್ಲಿ ಬರೋಬ್ಬರಿ 83 ರನ್ (5 ಸಿಕ್ಸರ್, 8 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿದರು.
ಈ ಬೆನ್ನಲ್ಲೇ ಆಂಡ್ರೆ ರಸ್ಸೆಲ್, ಸುನೀಲ್ ನರೇನ್, ಶಾರ್ದೂಲ್ ಠಾಕೂರ್ ರಶೀದ್ ಖಾನ್ ಸ್ಪಿನ್ ದಾಳಿಗೆ ಮಕಾಡೆ ಮಲಗಿದರು. ಇದರಿಂದ ತಂಡ ಗೆಲುವಿನ ಭರವಸೆ ಕೈಚೆಲ್ಲಿತು. ಆದರೆ ಕ್ರೀಸ್‌ನಲ್ಲಿದ್ದ ರಿಂಕು ಸಿಂಗ್ ಕೊನೆಯ ಓವರ್‌ನಲ್ಲಿ ಭರ್ಜರಿ 5 ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. 228.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ರಿಂಕು ಸಿಂಗ್ 21 ಎಸೆತಗಳಲ್ಲಿ 48 ರನ್ (6 ಸಿಕ್ಸರ್, 1 ಬೌಂಡರಿ) ಬಾರಿಸಿದರೆ, ಉಮೇಶ್ ಯಾದವ್ 5 ರನ್ ಗಳಿಸಿ ಅಜೇಯರಾಗುಳಿದರು.
ಗುಜರಾತ್ ಜೈಂಟ್ಸ್ ಪರ ರಶೀದ್ ಖಾನ್ 4 ಓವರ್‌ಗಳಲ್ಲಿ 37 ರನ್ ನೀಡಿ 3 ಪ್ರಮುಖ ವಿಕೆಟ್ ಕಿತ್ತರೆ, ಅಲ್ಝರಿ ಜೋಸೆಫ್ 2 ವಿಕೆಟ್ ಹಾಗೂ, ಮೊಹಮ್ಮದ್ ಶಮಿ, ಜಾಸ್ ಲಿಟಲ್ ತಲಾ ಒಂದು ವಿಕೆಟ್ ಕಬಳಿಸಿ ಮಿಂಚಿದರು. ಇದನ್ನೂ ಓದಿ: ಒಂದೇ ಕೈಯಲ್ಲಿ ಜಡೇಜಾ ಕ್ಯಾಚ್ – 10 ವರ್ಷದ ಹಿಂದೆ ʼಸರ್ ಜಡೇಜಾʼ ಎಂದಿದ್ದ ಧೋನಿ ಟ್ವೀಟ್ ವೈರಲ್
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ಪರ ಆರಂಭಿಕ ವೃದ್ಧಿಮಾನ್ ಸಹಾ 17 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್‌ಗಿಳಿದ ಸಾಯಿ ಸುದರ್ಶನ್ ಮತ್ತೊಮ್ಮೆ ಜವಾಬ್ದಾರಿಯುತ ಪ್ರದರ್ಶನ ನೀಡಿ ಗಮನಸೆಳೆದರು. ಸತತ 2ನೇ ಅರ್ಧ ಶತಕ ಸಿಡಿಸಿ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು. ಸುದರ್ಶನ್ 38 ಎಸೆತಗಳಲ್ಲಿ 53 ರನ್ (2 ಸಿಕ್ಸರ್, 3 ಬೌಂಡರಿ) ಗಳಿಸಿ ಮಿಂಚಿದರು. ಸುದರ್ಶನ್‌ಗೆ ಉತ್ತಮ ಸಾಥ್ ನೀಡಿದ ಶುಭಮನ್ ಗಿಲ್ 39 ರನ್ (31 ಎಸೆತ, 5 ಬೌಂಡರಿ) ಗಳಿಸಿ ಔಟಾದರು. ಈ ಬೆನ್ನಲ್ಲೇ ಅಭಿನಮ್ ಮನೋಹರ್ 14 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಜೊತೆಯಾದ ವಿಜಯ್ ಶಂಕರ್ ಹಾಗೂ ಡೇವಿಡ್ ಮಿಲ್ಲರ್ ಜೋಡಿ ಭರ್ಜರಿ ರನ್ ಕಲೆಹಾಕಿತು. ಮುರಿಯದ 5ನೇ ವಿಕೆಟ್‌ಗೆ ಈ ಜೋಡಿ ಕೇವಲ 16 ಎಸೆತಗಳಲ್ಲಿ ಭರ್ಜರಿ 51 ರನ್ ಸಿಡಿಸಿತ್ತು. ಈ ವೇಳೆ ವಿಜಯ್ ಶಂಕರ್ 13 ಎಸೆತಗಳಲ್ಲಿ 46 ರನ್ ಚಚ್ಚಿದರೆ, ಮಿಲ್ಲರ್ 3 ಎಸೆತಗಳಲ್ಲಿ 2 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. 262 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ವಿಜಯ್ ಶಂಕರ್ 24 ಎಸೆತಗಳಲ್ಲಿ ಸ್ಫೋಟಕ 63 ರನ್ (4 ಬೌಂಡರಿ, 5 ಸಿಕ್ಸರ್) ಚಚ್ಚಿ ತಂಡದ ಮೊತ್ತ 200ರ ಗಡಿ ದಾಟಿಸಿದರು.
ಕೊಲ್ಕತ್ತಾ ನೈಟ್ ರೈಡರ್ಸ್ ಪರ ಸುನಿಲ್ ನರೇನ್ 3 ವಿಕೆಟ್ ಕಿತ್ತರೆ, ಸುಯಶ್ ಶರ್ಮಾ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.