ಲಕ್ನೋ: ಕೊನೆಯಲ್ಲಿ ಶಾರೂಖ್ ಖಾನ್ (M Shahrukh Khan) ಸಿಕ್ಸರ್, ಬೌಂಡರಿ ಆಟ ಹಾಗೂ ಸಿಕಂದರ್ ರಾಜಾ (Sikandar Raza) ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ (Punjab Kings), ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. 160 ರನ್‌ಗಳ ಗುರಿ ಬೆನ್ನತ್ತಿದ್ದ ಪಂಜಾಬ್ ಕಿಂಗ್ಸ್ 19.3 ಓವರ್‌ಗಳಲ್ಲೇ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ರೋಚಕ ಜಯ ಸಾಧಿಸಿತು.
Advertisement
Advertisement
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪಂಜಾಬ್ ಕಿಂಗ್ಸ್ 159 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಶಿಖರ್ ಧವನ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಸ್ಯಾಮ್ ಕರ್ರನ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು.
Advertisement
ಚೇಸಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್ ತಂಡವು ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಉತ್ತಮ ಆರಂಭ ಪಡೆಯುವಲ್ಲಿ ವೀಫಲವಾಯಿತು. ಆರಂಭಿಕರಾದ ಅಥರ್ವ ತೈದೆ ಶೂನ್ಯ ಸುತ್ತಿದರೆ, ಪ್ರಭ್‌ಸಿಮ್ರಾನ್ ಸಿಂಗ್ ಕೇವಲ 4 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. 5ನೇ ವಿಕೆಟ್‌ಗೆ ಜೊತೆಯಾಟವಾಡಿದ ಮ್ಯಾಥಿವ್ ಶಾರ್ಟ್ 34 ರನ್ (22 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಹರ್ಪ್ರೀತ್ ಸಿಂಗ್ 22 ರನ್ (22 ಎಸೆತ, 3 ಬೌಂಡರಿ) ಗಳಿಸುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಹರ್ಪ್ರೀತ್ ಸಿಂಗ್ ವಿಕೆಟ್ ಪತನವಾಗುತ್ತಿದ್ದಂತೆ ಕಣಕ್ಕಿಳಿದ ಸಿಕಂದರ್ ರಾಜಾ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಲಕ್ನೋ ಬೌಲರ್‌ಗಳನ್ನ ಬೆಂಡೆತ್ತಿದರು.
Advertisement
ಬೌಲಿಂಗ್‌ನಲ್ಲಿ ಒಂದು ವಿಕೆಟ್ ಕಿತ್ತ ಸಿಕಂದರ್ ರಾಜಾ ಬ್ಯಾಟಿಂಗ್‌ನಲ್ಲಿ 57 ರನ್ (41 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ ಮಿಂಚಿದರು. ಇದರಿಂದ ತಂಡದಲ್ಲಿ ಗೆಲುವಿನ ಭರವಸೆ ಚಿಗುರಿತ್ತು. ಈ ಬೆನ್ನಲ್ಲೇ ನಾಯಕ ಸ್ಯಾಮ್ ಕರ್ರನ್ 6 ರನ್, ಜಿತೇಶ್ ಶರ್ಮಾ 2 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಆದ್ರೆ ಕೊನೆಯಲ್ಲಿ ಎಂ. ಶಾರೂಖ್ ಖಾನ್ ಕೇವಲ 10 ಎಸೆತಗಳಲ್ಲಿ ಭರ್ಜರಿ ಸಿಕ್ಸರ್, ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಹರ್ಪ್ರೀತ್ ಬ್ರಾರ್ ಕೊನೆಯಲ್ಲಿ 6 ರನ್ ಗಳಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಆರಂಭ ಪಡೆಯಿತು. ನಾಯಕ ಕೆ.ಎಲ್ ರಾಹುಲ್ ಮತ್ತು ಕೇಲ್ ಮೇಯರ್ಸ್ ಮೊದಲ ವಿಕೆಟ್ ಪತನಕ್ಕೆ 7.4 ಓವರ್‌ಗಳಲ್ಲಿ 53 ರನ್ ಕಲೆಹಾಕಿದ್ದರು. ಈ ವೇಳೆ ಕೇಲ್ ಮೇಯರ್ಸ್ 23 ಎಸೆತಗಳಲ್ಲಿ 29 ರನ್ ಗಳಿಸಿ ಔಟಾಗುತ್ತಿದ್ದಂತೆ, ಕ್ರೀಸ್‌ಗೆ ಬಂದ ದೀಪಕ್ ಹೂಡಾ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಕಣಕ್ಕಿಳಿದ ಕೃನಾಲ್ ಪಾಂಡ್ಯ 17 ಎಸೆತಗಳಲ್ಲಿ 18 ರನ್ ಗಳಿಸುವ ಮೂಲಕ ನಾಯಕ ರಾಹುಲ್‌ಗೆ ಸಾಥ್ ನೀಡಿದರು. ಈ ಜೋಡಿ 35 ಎಸೆತಗಳಲ್ಲಿ 48 ರನ್‌ಗಳನ್ನು ಕಲೆಹಾಕಿತು. ಇನ್ನೂ ಕಳೆದ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಸ್ಫೋಟಕ 50 ರನ್ ಚಚ್ಚಿದ್ದ ನಿಕೋಲಸ್ ಪೂರನ್ ಈ ಬಾರಿ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಲು ಪ್ರಯತ್ನಿಸಿ ಔಟಾದರು.
ನಂತರ ಕ್ರೀಸ್‌ಗೆ ಬಂದ ಮಾರ್ಕಸ್ ಸ್ಟೋಯ್ನಿಸ್ 15 ರನ್ ಗಳಿಸಿ ಔಟಾದ ನಂತರ ಕೃಷ್ಣಪ್ಪ ಗೌತಮ್ (1 ರನ್), ಯದ್ವೀರ್ ಸಿಂಗ್ (ಶೂನ್ಯ) ಬಹುಬೇಗನೆ ಕ್ರೀಸ್‌ನಿಂದ ನಿರ್ಗಮಿಸಿದರು. ಕೊನೆಯಲ್ಲಿ ಆಯುಷ್ ಬದೋನಿ 5 ರನ್, ರವಿ ಬಿಷ್ಣೋಯಿ 3 ರನ್ ಗಳಿಸಿ ಅಜೇಯರಾಗುಳಿದರು.
ರಾಹುಲ್ ತಾಳ್ಮೆಯ ಆಟ:
ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಲಕ್ನೋ ತಂಡದ ನಾಯಕ ಕೆ.ಎಲ್ ರಾಹುಲ್ ಇಂದು ತಾಳ್ಮೆಯ ಆಟವಾಡಿದರು. ಮೊದಲ ವಿಕೆಟ್ ಪತನಗೊಳ್ಳುತ್ತಿದ್ದಂತೆ ಜವಾಬ್ದಾರಿ ಆಟಕ್ಕೆ ಮುಂದಾದ ರಾಹುಲ್ 56 ಎಸೆತಗಳಲ್ಲಿ 74 ರನ್ (8 ಬೌಂಡರಿ, 1 ಸಿಕ್ಸರ್) ಗಳಿಸಿ ಕೊನೆಯ ಕ್ಷಣದಲ್ಲಿ ವಿಕೆಟ್ ಒಪ್ಪಿಸಿದರು. ಈ ಮೂಲಕ ರಾಹುಲ್ 2023ರ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಗಳಿಸಿದರು.
ಸ್ಯಾಮ್ ಬೌಲಿಂಗ್ ಮಿಂಚು:
ಪಂಜಾಬ್ ಕಿಂಗ್ಸ್ ಪರ ನಾಯಕ ಸ್ಯಾಮ್ ಕರ್ರನ್ 3 ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ ಕಗಿಸೊ ರಬಾಡ 2 ವಿಕೆಟ್ ಕಿತ್ತರೆ, ಅರ್ಷ್‌ದೀಪ್ ಸಿಂಗ್, ಹಪ್ರೀತ್ ಬ್ರಾರ್ ಮತ್ತು ಸಿಕಂದರ್ ರಾಜಾ ತಲಾ ಒಂದೊಂದು ವಿಕೆಟ್ ಕಿತ್ತರು.