ಜೈಪುರ: ಕೇಲ್ ಮೇಯರ್ಸ್ (Kyle Mayers) ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡವು ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ 10 ರನ್‌ಗಳ ಜಯ ಸಾಧಿಸಿದೆ. ಆದರೆ ಸತತ ಜಯದ ಹಾದಿಯಲ್ಲಿ ಮುನ್ನುಗ್ಗುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡ ತವರಿನಲ್ಲಿ ಸೋತು ಮುಖಭಂಗ ಅನುಭವಿಸಿದೆ.
ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. 155 ರನ್‌ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 144 ರನ್ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.
Advertisement
Advertisement
ಚೇಸಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ತಂಡ ನಿಧಾನಗತಿಯ ಬ್ಯಾಟಿಂಗ್ ಹೊರತಾಗಿಯೂ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ (Jos Buttler) ಜೋಡಿ ಮೊದಲ ವಿಕೆಟ್ ಪತನಕ್ಕೆ 11.3 ಓವರ್‌ಗಳಲ್ಲಿ 87 ರನ್ ಗಳಿಸಿತ್ತು. ಈ ವೇಳೆ 35 ಎಸೆತಗಳಲ್ಲಿ 44 ರನ್ (4 ಬೌಂಡರಿ, 2 ಸಿಕ್ಸರ್) ಗಳಿಸಿದ್ದ ಜೈಸ್ವಾಲ್ ಔಟಾಗುತ್ತಿದ್ದಂತೆ, ಜೋಸ್ ಬಟ್ಲರ್ ಸಹ 40 ರನ್ (41 ಎಸೆತ, 4 ಬೌಂಡರಿ, 1 ಸಿಕ್ಸರ್) ಗಳಿಸಿ ವಿಕೆಟ್ ಒಪ್ಪಿಸಿದರು.
Advertisement
Advertisement
ಈ ಬೆನ್ನಲ್ಲೇ ನಾಯಕ ಸಂಜು ಸ್ಯಾಮ್ಸನ್ (Sanju Samson) ಬೇಡದ ರನ್ ಕದಿಯಲು ಹೋಗಿ ರನೌಟ್‌ಗೆ ತುತ್ತಾದರೆ, ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಶಿಮ್ರಾನ್ ಹೆಟ್ಮೇಯರ್ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು ಇದು ತಂಡಕ್ಕೆ ಭಾರೀ ಆಘಾತ ನೀಡಿತು. ಇನ್ನೂ ಕೊನೆಯ ಓವರ್‌ವರೆಗೂ ಹೋರಾಡಿ 21 ಎಸೆತಗಳಲ್ಲಿ 26 ರನ್ ಗಳಿಸಿದ್ದ ದೇವದತ್ ಪಡಿಕಲ್ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಇದರಿಂದ ರಾಜಸ್ಥಾನ್ ತಂಡ ಸಂಪೂರ್ಣವಾಗಿ ಗೆಲುವಿನ ಭರವಸೆ ಕೈಚೆಲ್ಲಿತು. ಕೊನೆಯಲ್ಲಿ ರಿಯಾನ್ ಪರಾಗ್ 15 ರನ್, ಅಶ್ವಿನ್ 3 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು.
ಲಕ್ನೋ ಸೂಪರ್ ಜೈಂಟ್ಸ್ ಪರ ಅವೇಶ್ ಖಾನ್ ಪ್ರಮುಖ 3 ವಿಕೆಟ್‌ಗಳನ್ನು ಕಿತ್ತರೆ, ಮಾರ್ಕಸ್ ಸ್ಟೋಯ್ನಿಸ್ 2 ವಿಕೆಟ್ ಪಡೆದು ಮಿಂಚಿದರು.
ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರೂ ಲಕ್ನೋ ಸೂಪರ್ ಜೈಂಟ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಬೃಹತ್ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ಅಂದುಕೊಂಡ ವೇಗದಲ್ಲಿ ರನ್‌ಗಳಿಸಲು ಅವಕಾಶ ನೀಡದ ಕಾರಣ ಲಕ್ನೋ ತಂಡ ಈ ಪಂದ್ಯದಲ್ಲಿ ಸಾಧಾರಣ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಮೊದಲ ವಿಕೆಟ್ ಪತನಕ್ಕೆ 82 ರನ್‌ಗಳ ಆರಂಭಿಕ ಜೊತೆಯಾಟವನ್ನು ಪಡೆದುಕೊಂಡಿತ್ತಾದರೂ ರನ್ ವೇಗ ನಿಧಾನವಾಗಿತ್ತು. ನಾಯಕ ಕೆ.ಎಲ್.ರಾಹುಲ್ ಪವರ್ ಪ್ಲೇನಲ್ಲೂ ಅಬ್ಬರಿಸುವಲ್ಲಿ ವಿಫಲವಾದರು. ಆರಂಭಿಕರಾಗಿ ಕಣಕ್ಕಿಳಿದ ಕೇಲ್ ಮೇಯರ್ಸ್ ಹಾಗೂ ಕೆ.ಎಲ್ ರಾಹುಲಗ್ 10.4 ಓವರ್‌ಗಳಲ್ಲಿ 82 ರನ್ ಗಳಿಸಿತ್ತು.121.87 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಕೆ.ಎಲ್ ರಾಹುಲ್ 32 ಎಸೆತಗಳಲ್ಲಿ ಕೇವಲ 39 ರನ್ ಗಳಿಸಿದರು. ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ ಕೇಲ್ ಮೇಯರ್ಸ್ ಕೂಡ 42 ಎಸೆತಗಳಲ್ಲಿ 51 ರನ್ (3 ಸಿಕ್ಸರ್, 4 ಬೌಂಡರಿ) ಔಟಾದರು.
ಉಳಿದಂತೆ ಆಯುಷ್ ಬದೋನಿ ಹಾಗೂ ದೀಪಕ್ ಹೂಡಾ ಕಳಪೆ ಪ್ರದರ್ಶನ ನೀಡಿದರು. ಇನ್ನು ಮಾರ್ಕಸ್ ಸ್ಟೋಯ್ನಿಸ್ 16 ಎಸೆತದಲ್ಲಿ 21 ರನ್ ಬಾರಿಸಿದರೆ ನಿಕೋಲಸ್ ಪೂರನ್ 20 ಎಸೆತಗಳಲ್ಲಿ 28 ರನ್ ಬಾರಿಸಿದರು. ಅಂತಿಮವಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತ್ತು.
ರಾಜಸ್ಥಾನ್ ಪರ ರವಿಚಂದ್ರನ್ ಅಶ್ವಿನ್ 2 ವಿಕೆಟ್ ಕಿತ್ತರೆ, ಟ್ರೆಂಟ್ ಬೋಲ್ಟ್, ಸಂದೀಪ್ ಶರ್ಮಾ, ಜೇಸನ್ ಹೋಲ್ಡರ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.