ಕೇಪ್ ಟೌನ್: ದಕ್ಷಿಣ ಆಫ್ರಿಕಾದ (South Africa) ಕ್ವಾಜುಲು-ನಟಾಲ್ ಪ್ರಾಂತ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಹಿಂದೂ ದೇವಾಲಯ ಕುಸಿದು (Temple Collapse) ನಾಲ್ವರು ಸಾವನ್ನಪ್ಪಿದ್ದಾರೆ. ಮೃತಪಟ್ಟ ನಾಲ್ವರಲ್ಲಿ 52 ವರ್ಷದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಥೆಕ್ವಿನಿಯ ಉತ್ತರದಲ್ಲಿರುವ ರೆಡ್‌ಕ್ಲಿಫ್‌ನಲ್ಲಿರುವ ಕಡಿದಾದ ಬೆಟ್ಟದ ಮೇಲಿರುವ ನ್ಯೂ ಅಹೋಬಿಲಂ ಟೆಂಪಲ್ ಆಫ್ ಪ್ರೊಟೆಕ್ಷನ್ ದೇವಾಲಯದ (New Ahobilam Temple of Protection) ಕಟ್ಟಡದ ಕಾಮಗಾರಿ ನಡೆಯುತ್ತಿದ್ದಾಗ ಒಂದು ಭಾಗ ಕುಸಿದು ಬಿದ್ದಿದೆ. ಭಾರೀ ಪ್ರಮಾಣದ ಅವಶೇಷಗಳ ಅಡಿಯಲ್ಲಿ ಕಾರ್ಮಿಕರು ಸಿಲುಕಿದ್ದಾರೆ. ಅವಶೇಷಗಳ ಅಡಿ ಎಷ್ಟು ಜನ ಸಿಲುಕಿದ್ದಾರೆ ಎಂದು ನಿಖರ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ.
ಶುಕ್ರವಾರ (ಡಿ.12) ಇಬ್ಬರು ಕಟ್ಟಡ ಕಾರ್ಮಿಕರು ಮತ್ತು ಓರ್ವ ಭಕ್ತ ಸಾವನ್ನಪ್ಪಿದ್ದಾನೆ ಎನ್ನಲಾಗಿತ್ತು. ರಕ್ಷಣಾ ತಂಡಗಳು ಶನಿವಾರ (ಡಿ.13) ಮತ್ತೊಬ್ಬರ ಶವವನ್ನು ಹೊರತೆಗೆದಿದ್ದು ಸಾವಿನ ಸಂಖ್ಯೆ 4ಕ್ಕೆ ಏರಿದೆ. ಮೃತ ನಾಲ್ವರಲ್ಲಿ ಒಬ್ಬರನ್ನು ದೇವಾಲಯ ಟ್ರಸ್ಟ್‌ನ ಕಾರ್ಯನಿರ್ವಾಹಕ ಸದಸ್ಯ ಮತ್ತು ನಿರ್ಮಾಣ ಯೋಜನೆಯ ವ್ಯವಸ್ಥಾಪಕ ವಿಕಿ ಜೈರಾಜ್ ಪಾಂಡೆ ಎಂದು ಗುರುತಿಸಲಾಗಿದೆ.
ಪಾಂಡೆ ಸುಮಾರು ಎರಡು ವರ್ಷಗಳ ಹಿಂದೆ ದೇವಾಲಯದ ಅಭಿವೃದ್ಧಿಯಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ದೇವಾಲಯಕ್ಕೆ ಸಂಬಂಧಿಸಿದ ದತ್ತಿ ಸಂಸ್ಥೆಯಾದ ಫುಡ್ ಫಾರ್ ಲವ್‌ನ ನಿರ್ದೇಶಕ ಸನ್ವೀರ್ ಮಹಾರಾಜ್ ಕೂಡ ಪಾಂಡೆಯವರ ಸಾವನ್ನು ದೃಢಪಡಿಸಿದ್ದಾರೆ.
ಪ್ರತಿಕೂಲ ಹವಾಮಾನದಿಂದಾಗಿ ಶನಿವಾರ ಮಧ್ಯಾಹ್ನ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಹಂತದಲ್ಲಿ, ಅವಶೇಷಗಳ ಅಡಿಯಲ್ಲಿ ಹೆಚ್ಚುವರಿ ವ್ಯಕ್ತಿಗಳು ಸಿಲುಕಿಕೊಂಡಿದ್ದಾರೆಯೇ ಎಂಬ ಬಗ್ಗೆ ದೃಢಪಡಿಸಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವಾಲಯವನ್ನು ಗುಹೆಯನ್ನು ಹೋಲುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ದೇವಾಲಯ ನಿರ್ಮಾಣದ ಹೊಣೆ ಹೊತ್ತವರು ಭಗವಾನ್ ನರಸಿಂಹದೇವನ ವಿಶ್ವದ ಅತಿದೊಡ್ಡ ವಿಗ್ರಹವನ್ನು ಪ್ರತಿಷ್ಠಾಪಿಸುವುದಾಗಿ ಹೇಳಿದ್ದರು.

