ತಿರುವನಂತಪುರಂ: ಕೇರಳದ ಬೀಚ್‍ನಲ್ಲಿ ಆಡಲು ಹೋಗಿ, ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯೋರ್ವನನ್ನು ನೌಕಾಪಡೆ ಅಧಿಕಾರಿಯೊಬ್ಬರು ಕಾಪಾಡಿದ್ದು, ಅಧಿಕಾರಿಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಹೌದು, ಏಪ್ರಿಲ್ 5ರ ಸಂಜೆ ಔರಂಗಬಾದ್ ಮೂಲದ ದಿಲೀಪ್ ಕುಮಾರ್ ಸಮುದ್ರದಲ್ಲಿ ಆಡುತ್ತಿರುವಾಗ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದನು. ಆಗ ದಿಲೀಪ್ ಜತೆಯಲ್ಲಿದ್ದವರು, ಆತ ಸಮುದ್ರದಲ್ಲಿ ಕೊಚ್ಚಿಕೊಂಡು ಹೋದ ಬಗ್ಗೆ ಅಳಲು ತೋಡಿಕೊಂಡು ಕಾಪಾಡುವಂತೆ ಸ್ಥಳದಲ್ಲಿದ್ದವರ ಬಳಿ ಮನವಿ ಮಾಡಿದ್ದಾರೆ. ಇದೇ ವೇಳೆಯಲ್ಲಿ ಪತ್ನಿ ಹಾಗೂ ಪುತ್ರಿಯೊಂದಿಗೆ ಲೆಫ್ಟಿನೆಂಟ್ ರಾಹುಲ್ ದಲಾಲ್ ಬೀಚ್‍ಗೆ ಆಗಮಿಸಿದ್ದು, ಗೆಳೆಯರ ಗೋಳು ಗಮನಿಸಿ ಸಮುದ್ರಕ್ಕೆ ಹಾರಿ ವ್ಯಕ್ತಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಬಗ್ಗೆ ನೌಕಾಪಡೆಯು ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಅಧಿಕಾರಿಯ ಶೌರ್ಯದ ಬಗ್ಗೆ ಪೋಸ್ಟ್ ಮಾಡಿತ್ತು. ನಮ್ಮ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ರಾಹುಲ್ ದಲಾಲ್ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು, ತಮ್ಮ ಜೀವವನ್ನು ಪಣಕ್ಕಿಟ್ಟು ಸಮುದ್ರಕ್ಕೆ ಹಾರಿ, ವ್ಯಕ್ತಿಯನ್ನು ಕಾಪಾಡಿದ್ದಾರೆ. ಆತನನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ. ಆದರೆ ಸುಮಾರು 20 ನಿಮಿಷಗಳ ಕಾಲ ದಿಲೀಪ್ ಉಸಿರಾಡದೇ, ಪ್ರಜ್ಞೆ ತಪ್ಪಿದ್ದರು. ಆಗ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸಿದ್ದಾರೆ ಎಂದು ಬರೆದು ಫೋಟೋ ಹಾಕಿ ಪೋಸ್ಟ್ ಮಾಡಿದೆ.
https://www.facebook.com/IndianNavy/posts/872951193059742
ನೌಕಾ ಸಿಬ್ಬಂದಿಯ ಈ ಶೌರ್ಯ, ಮಾನವೀಯತೆ ಗುಣ ಹಾಗೂ ಜನಪರ ಕಾಳಜಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ಲೆಫ್ಟಿನೆಂಟ್ ರಾಹುಲ್ ದಲಾಲ್‍ಗೆ ನೆಟ್ಟಿಗರು ಸಲಾಂ ಹೊಡೆದು ಪೋಸ್ಟಿಗೆ ಮೆಚ್ಚುಗೆ ಸೂಚಿಸಿದ್ದಾರೆ.