ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು (Sugar Price) ನಿಯಂತ್ರಿಸಲು ಮತ್ತು ದೇಶದೊಳಗೆ ಸಾಕಷ್ಟು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸಕ್ಕರೆ ರಫ್ತಿನ (Sugar Export) ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಸೆಪ್ಟೆಂಬರ್ 30ರವರೆಗೆ ಸಂಪೂರ್ಣ ನಿಷೇಧ ಹೇರಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಈ ಆದೇಶ ಪ್ರಕಟಿಸಿದೆ. ಸಕ್ಕರೆ ರಫ್ತು ನೀತಿಯನ್ನು ಈ ಹಿಂದೆ ಇದ್ದ ‘ನಿರ್ಬಂಧಿತ’ (Restricted) ವರ್ಗದಿಂದ ‘ನಿಷೇಧಿತ’ (Prohibited) ವರ್ಗಕ್ಕೆ ಬದಲಾಯಿಸಲಾಗಿದೆ.
ಈ ನಿಷೇಧವು ಕಚ್ಚಾ ಸಕ್ಕರೆ (Raw Sugar), ಬಿಳಿ ಸಕ್ಕರೆ (White Sugar), ಮತ್ತು ಸಂಸ್ಕರಿಸಿದ ಸಕ್ಕರೆ (Refined Sugar) ಸೇರಿದಂತೆ ಎಲ್ಲಾ ರೀತಿಯ ಸಕ್ಕರೆ ರಫ್ತುಗಳಿಗೂ ಅನ್ವಯಿಸುತ್ತದೆ.
ಈ ಕಠಿಣ ನಿಷೇಧದ ನಡುವೆಯೂ ಕೆಲವು ಪ್ರಮುಖ ವಿನಾಯಿತಿಗಳನ್ನು ನೀಡಲಾಗಿದೆ. ನಿಗದಿತ ಕೋಟಾದಡಿ ಯುರೋಪಿಯನ್ ಯೂನಿಯನ್ (EU) ಮತ್ತು ಅಮೆರಿಕ (USA) ದೇಶಗಳಿಗೆ ಮಾಡುವ ಸಕ್ಕರೆ ರಫ್ತುಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ.
ಭಾರತ ಸರ್ಕಾರದಿಂದ ವಿಶೇಷವಾಗಿ ಅನುಮೋದಿಸಲ್ಪಟ್ಟ ರಫ್ತು ಸರಕುಗಳು ಮತ್ತು ಈಗಾಗಲೇ ಸಾಗಣೆಯಲ್ಲಿರುವ (In Transit) ಆರ್ಡರ್‌ಗಳಿಗೆ ವಿನಾಯಿತಿ ಇರಲಿದೆ.

ನಿಷೇಧಿಸಿದ್ದು ಯಾಕೆ?
ಹವಾಮಾನ ವೈಪರೀತ್ಯ ಹಾಗೂ ಎಲ್ ನಿನೋ ಪ್ರಭಾವದಿಂದಾಗಿ ಕಬ್ಬಿನ ಉತ್ಪಾದನೆ ಕುಂಠಿತಗೊಳ್ಳುವ ಆತಂಕ ಎದುರಾಗಿದೆ. ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘವು ಪ್ರಸಕ್ತ ಹಂಗಾಮಿನ ಒಟ್ಟು ಸಕ್ಕರೆ ಉತ್ಪಾದನಾ ಅಂದಾಜನ್ನು 32 ಮಿಲಿಯನ್ ಟನ್‌ಗಳಿಗೆ ಇಳಿಸಿದೆ. ಉತ್ಪಾದನೆ ಕುಂಠಿತಗೊಂಡಿರುವ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಚಿಲ್ಲರೆ ದರಗಳು ಹೆಚ್ಚಾಗದಂತೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದರ ಜೊತೆ ಹಬ್ಬದ ಸೀಸನ್‌ಗಳಲ್ಲಿ ದೇಶದೊಳಗೆ ಸಕ್ಕರೆ ಕೊರತೆಯಾಗದಂತೆ ಬಫರ್ ಸ್ಟಾಕ್ ಕಾಯ್ದುಕೊಳ್ಳಲು ಮತ್ತು ಪಶ್ಚಿಮ ಏಷ್ಯಾ ಪ್ರಾಂತ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಿಕ್ಕಟ್ಟಿನಿಂದಾಗಿ ಎದುರಾಗಬಹುದಾದ ಆಹಾರ ಹಣದುಬ್ಬರದ ಅಪಾಯದಿಂದ ದೇಶದ ಜನರನ್ನು ರಕ್ಷಿಸಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ದರ ಏರಿಕೆ ಎಫೆಕ್ಟ್, ಚಿನ್ನ ಖರೀದಿ ಭಾರೀ ಇಳಿಕೆ – ಆತಂಕದಲ್ಲಿ ಚಿನ್ನದಂಗಡಿ ಮಾಲೀಕರು
ಪರಿಣಾಮ ಏನು?
ಬ್ರೆಜಿಲ್ ಬಿಟ್ಟರೆ ಭಾರತವೇ ವಿಶ್ವದ ಅತಿ ದೊಡ್ಡ ಸಕ್ಕರೆ ಉತ್ಪಾದಕ ದೇಶವಾಗಿರುವುದರಿಂದ ಈ ನಿರ್ಧಾರವು ಜಾಗತಿಕ ಆಹಾರ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಭಾರತದ ನಿಷೇಧ ಪ್ರಕಟವಾದ ಬೆನ್ನಲ್ಲೇ ನ್ಯೂಯಾರ್ಕ್ ಕಚ್ಚಾ ಸಕ್ಕರೆ ಮಾರುಕಟ್ಟೆ (New York Raw Sugar Futures) ಶೇ. 2 ಕ್ಕಿಂತ ಹೆಚ್ಚು ಮತ್ತು ಲಂಡನ್ ಬಿಳಿ ಸಕ್ಕರೆ ಮಾರುಕಟ್ಟೆ (London White Sugar Futures) ಶೇ.3 ರಷ್ಟು ದುಬಾರಿಯಾಗಿದೆ. ಸಕ್ಕರೆ ಬೆಲೆ ಏರಿಕೆಯಿಂದಾಗಿ ಜಾಗತಿಕವಾಗಿ ಸಿಹಿತಿಂಡಿ, ಸಾಫ್ಟ್ ಡ್ರಿಂಕ್ಸ್ ಮತ್ತು ಬೇಕರಿ ಉತ್ಪನ್ನಗಳ ಬೆಲೆ ಹೆಚ್ಚಾಗಲಿದೆ.
ಭಾರತವು ಮಾರುಕಟ್ಟೆಯಿಂದ ಹಿಂದೆ ಸರಿದಿರುವುದರಿಂದ ಬ್ರೆಜಿಲ್ ಮತ್ತು ಥೈಲ್ಯಾಂಡ್‌ನಂತಹ ಪ್ರತಿಸ್ಪರ್ಧಿ ದೇಶಗಳು ಏಷ್ಯಾ ಮತ್ತು ಆಫ್ರಿಕಾದ ದೇಶಗಳಿಗೆ ಹೆಚ್ಚಿನ ರಫ್ತು ಮಾಡಲು ದಾರಿ ಸುಗಮವಾಗಿದೆ.

