ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಈ ವರ್ಷ ಆಗಸ್ಟ್ ತಿಂಗಳಲ್ಲಿ ಭಾರತೀಯ ಸರಕುಗಳ ಮೇಲೆ 25% ಹೆಚ್ಚುವರಿ ಸುಂಕವನ್ನು (Tariffs) ವಿಧಿಸಿದ್ದರು. ಇದು ಕೃಷಿ, ಎಲೆಕ್ಟ್ರಿಕಲ್ ಮತ್ತು ಯಂತ್ರೋಪಕರಣಗಳು ಸೇರಿದಂತೆ ಹಲವು ವಲಯಗಳ ಮೇಲೆ ಪರಿಣಾಮ ಬೀರಿದೆ. ಪ್ರಮುಖ ಕೃಷಿ ಉತ್ಪನ್ನಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿತ್ತು. ಆದರೆ ಸುಂಕದ ಹೊರತಾಗಿಯೂ ಭಾರತದ ಕೃಷಿ ರಫ್ತು (Indian Farm Exports) ಹೆಚ್ಚಿದೆ.
ಭಾರತ (India) -ಅಮೆರಿಕ ಕೃಷಿ ವ್ಯಾಪಾರದಲ್ಲಿ ಒಟ್ಟಾರೆ 49.1% ರಷ್ಟು ಬೆಳವಣಿಗೆಯಾಗಿದೆ. 2025ರ ಮೊದಲಾರ್ಧದಲ್ಲಿ ಅಮೆರಿಕದಿಂದ ಕೃಷಿ ಉತ್ಪನ್ನಗಳ ಆಮದು 1,135.8 ಮಿಲಿಯನ್ ಡಾಲರ್‌ನಿಂದ 1,693.2 ಮಿಲಿಯನ್ ಡಾಲರ್‌ಗೆ ಏರಿದೆ. ಇದೇ ಅವಧಿಯಲ್ಲಿ, ಅಮೆರಿಕಕ್ಕೆ ಭಾರತದ ಕೃಷಿ ರಫ್ತು ಕೂಡ 24.1% ರಷ್ಟು ಏರಿಕೆಯಾಗಿ 3,472.7 ಮಿಲಿಯನ್ ಡಾಲರ್‌ಗೆ ತಲುಪಿದೆ.
ಕೃಷಿ ರಫ್ತು ಹೆಚ್ಚಳಕ್ಕೆ ಕಾರಣಗಳು
ಪ್ರಾದೇಶಿಕ ಸ್ಪರ್ಧಾತ್ಮಕತೆ: ಭಾರತದ ಕೃಷಿ ಉತ್ಪನ್ನಗಳು, ವಿಶೇಷವಾಗಿ ಸಮುದ್ರಾಹಾರ ಮತ್ತು ಅಕ್ಕಿ ಇತರ ದೇಶಗಳ ಹೆಚ್ಚಿನ ಸುಂಕದ ಕಾರಣದಿಂದಾಗಿ ಅಮೆರಿಕದಲ್ಲಿ ಬೇಡಿಕೆ ಉಳಿಸಿಕೊಂಡಿದೆ.

ವ್ಯಾಪಾರ ಒಪ್ಪಂದ: ಸುಂಕದ ಏರಿಕೆಯ ಹೊರತಾಗಿಯೂ, ಭಾರತ ಮತ್ತು ಅಮೆರಿಕದ ನಡುವೆ ಕೃಷಿ ಉತ್ಪನ್ನಗಳ ವ್ಯಾಪಾರವು ಬೆಳೆಯುತ್ತಿದೆ. ಅಮೆರಿಕವು ಭಾರತದ ಕೃಷಿ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆಯಾಗಿ ಮುಂದುವರೆದಿದೆ.
ವೈವಿಧ್ಯಮಯ ಪೂರೈಕೆ: ಭಾರತವು ತನ್ನ ಕೃಷಿ ರಫ್ತುಗಳನ್ನು ಕೇವಲ ಒಂದೆರಡು ಉತ್ಪನ್ನಗಳಿಗೆ ಸೀಮಿತಗೊಳಿಸದೆ, ವೈವಿಧ್ಯಮಯ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಅಲ್ಲದೇ ಅಮೆರಿಕದ ಆಚೆಗಿನ ಮಾರುಕಟ್ಟೆಯಿಂದ ಟ್ರಂಪ್ ಹೇರಿದ ಸುಂಕದ ಪರಿಣಾಮ ಕಡಿಮೆಯಾಗಿದೆ.
ಅಂಕಿ ಅಂಶಗಳು ಹೇಳೋದೇನು?
ಸರ್ಕಾರಿ ದತ್ತಾಂಶಗಳ ಪ್ರಕಾರ ಈ ವರ್ಷದ ಏಪ್ರಿಲ್-ಸೆಪ್ಟೆಂಬರ್ ವರೆಗೆ ಕೃಷಿ ಉತ್ಪನ್ನಗಳ ರಫ್ತಿನ ಮೌಲ್ಯ 25.9 ಬಿಲಿಯನ್ ಡಾಲರ್ ಆಗಿದೆ. 2024 ರ ಆರು ತಿಂಗಳ ಅವಧಿಯಲ್ಲಿ 23.8 ಬಿಲಿಯನ್ ಡಾಲರ್ ಆಗಿತ್ತು. ಅಂದರೆ ಈಗ 8.8% ಹೆಚ್ಚಳವಾಗಿದೆ. ಇದು ದೇಶದ ಒಟ್ಟು ಸರಕು ರಫ್ತಿನ 2.9% ಬೆಳವಣಿಗೆಗಿಂತ ಹೆಚ್ಚಾಗಿದೆ.
ಹೆಚ್ಚು ರಫ್ತಾದ ವಸ್ತುಗಳು
ಈ ಆರ್ಥಿಕ ವರ್ಷದಲ್ಲಿ ರಫ್ತು ಬೆಳವಣಿಗೆಗೆ ಬಾಸ್ಮತಿಯೇತರ ಅಕ್ಕಿ, ಎಮ್ಮೆ ಮಾಂಸ, ಸಮುದ್ರ ಉತ್ಪನ್ನಗಳು, ಕಾಫಿ, ಹಣ್ಣುಗಳು ಮತ್ತು ತರಕಾರಿಗಳು ಕಾರಣವಾಗಿವೆ.

ಬಾಸ್ಮತಿಯೇತರ ಅಕ್ಕಿಯಲ್ಲಿ, ದೇಶೀಯ ಆಹಾರ ಸಮಸ್ಯೆ ನಿಯಂತ್ರಿಸಲು ಸೆಪ್ಟೆಂಬರ್ 2022 ಮತ್ತು ಆಗಸ್ಟ್ 2023 ರ ನಡುವೆ ವಿಧಿಸಲಾದ ಸಾಗಣೆಯ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಇದರಿಂದ ರಫ್ತು ಹೆಚ್ಚಾಗಿದೆ. ಇನ್ನೂ 2024 ರಿಂದ ಸತತವಾಗಿ ಉತ್ತಮ ಮಳೆಯಾದ ಕಾರಣ ಮತ್ತು ಸರ್ಕಾರಿ ಗೋದಾಮುಗಳಲ್ಲಿ ದಾಸ್ತಾನು ತುಂಬಿ ತುಳುಕುತ್ತಿದೆ. ಇದು ಸಹ ರಫ್ತು ಹೆಚ್ಚಳಕ್ಕೆ ಕಾರಣವಾಗಿದೆ.
ಈ ಆರ್ಥಿಕ ವರ್ಷದಲ್ಲಿ ಎಮ್ಮೆ ಮಾಂಸ ರಫ್ತು 2014-15ರಲ್ಲಿ ಹಿಂದಿನ ಗರಿಷ್ಠ 4.8 ಬಿಲಿಯನ್ ಡಾಲರ್‌ನ್ನು ಮೀರಿಸುತ್ತದೆ. ಸಮುದ್ರ ಉತ್ಪನ್ನಗಳು ಸಹ ರಫ್ತಿನಲ್ಲಿ ಅಷ್ಟೇ ಮಹತ್ವದ್ದಾಗಿವೆ. ಇವುಗಳ ರಫ್ತು ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 17.4% ರಷ್ಟು ಹೆಚ್ಚಾಗಿದೆ. 2024-25 ರಲ್ಲಿ ಭಾರತದ 7.4 ಬಿಲಿಯನ್ ಡಾಲರ್ ಸಮುದ್ರ ಉತ್ಪನ್ನಗಳ ರಫ್ತು ಮಾಡಿದೆ. ಸುಮಾರು 2.7 ಬಿಲಿಯನ್ ಡಾಲರ್ ಹೆಚ್ಚುವರಿಯಾಗಿ ರಫ್ತಾಗಿದೆ.
ಡೊನಾಲ್ಡ್ ಟ್ರಂಪ್ ವಿಧಿಸಿದ 58% ಕ್ಕಿಂತ ಹೆಚ್ಚಿನ ಸುಂಕವು ಭಾರತೀಯ ಸಮುದ್ರಾಹಾರ ರಫ್ತಿನ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಭಾರತೀಯ ಸಮುದ್ರಾಹಾರ ರಫ್ತುದಾರ ದೇಶಗಳಾದ ಚೀನಾ, ವಿಯೆಟ್ನಾಂ, ಜಪಾನ್, ಥೈಲ್ಯಾಂಡ್, ಯುರೋಪಿಯನ್ ಯೂನಿಯನ್ ಮತ್ತು ಕೆನಡಾದಂತಹ ಮಾರುಕಟ್ಟೆಗಳಿಗೆ ಸಾಗಣೆಯನ್ನು ಹೆಚ್ಚಿಸುವ ಮೂಲಕ ಟ್ರಂಪ್ ಸುಂಕಾಸ್ತ್ರಕ್ಕೆ ಭಾರತ ಪ್ರತ್ಯಾಸ್ತ್ರ ಹೂಡಿದೆ.

ಭಾರತದಿಂದ ಕಾಫಿ ರಫ್ತು 2019-20ರಲ್ಲಿ 738.9 ಮಿಲಿಯನ್ ಡಾಲರ್‌ನಿಂದ 2024-25ರಲ್ಲಿ 1.8 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು 2 ಬಿಲಿಯನ್ ಡಾಲರ್‌ಗೆ ತಲುಪುವ ಸಾಧ್ಯತೆಯಿದೆ.
ಕೃಷಿ ಉತ್ಪನ್ನಗಳ ಸುಂಕ ಇಳಿಸಿದ ಟ್ರಂಪ್!
ಇದೆಲ್ಲದರ ನಡುವೆ ಅಮೆರಿಕದಲ್ಲಿ ಹೆಚ್ಚುತ್ತಿರುವ ದೇಶೀಯ ಬೆಲೆಗಳಿಂದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ಆಮದು ಮಾಡುವ ಸುಮಾರು 200 ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ.
ಭಾರತದ ಕೃಷಿ ಉತ್ಪನ್ನಗಳಿಗೆ ವಿನಾಯಿತಿ
ಈ ಪಟ್ಟಿಯಲ್ಲಿ ಕರಿ ಮೆಣಸು, ಲವಂಗ, ಜೀರಿಗೆ, ಏಲಕ್ಕಿ, ಅರಿಶಿನ, ಶುಂಠಿ, ವಿವಿಧ ಬಗೆಯ ಚಹಾ, ಮಾವಿನ ಹಣ್ಣಿನ ಉತ್ಪನ್ನಗಳು ಮತ್ತು ಗೋಡಂಬಿ ಸೇರಿದಂತೆ ಕೆಲವು ಬಗೆಯ ಬೀಜಗಳು ಸೇರಿವೆ. ಇವೆಲ್ಲವನ್ನೂ ಭಾರತ ಅಮೆರಿಕಕ್ಕೆ ರಫ್ತು ಮಾಡುತ್ತದೆ. ಟ್ರಂಪ್ ಅವರ ಈ ಸುಂಕ ವಿನಾಯಿತಿಯು ಭಾರತದ ಪ್ರಮುಖ ಕೃಷಿ ರಫ್ತುಗಳಿಗೆ ಪ್ರಮುಖ ಉತ್ತೇಜನ ನೀಡಲಿದೆ.
2024 ರಲ್ಲಿ ಭಾರತದಿಂದ ಅಮೆರಿಕಕ್ಕೆ 500 ದಶಲಕ್ಷ ಡಾಲರ್‌ಗಿಂತ ಹೆಚ್ಚು ಮೌಲ್ಯದ ಮಸಾಲೆ ಪದಾರ್ಥಗಳನ್ನು ರಫ್ತು ಮಾಡಲಾಗಿತ್ತು. ಇದೇ ಅವಧಿಯಲ್ಲಿ ಭಾರತದಿಂದ ಚಹಾ ಮತ್ತು ಕಾಫಿ ಆಮದು ಮೌಲ್ಯ ಸುಮಾರು 83 ದಶಲಕ್ಷ ಡಾಲರ್ ಇತ್ತು. ಅಲ್ಲದೆ, ಅಮೆರಿಕವು ವಿಶ್ವದಾದ್ಯಂತ ಒಟ್ಟು 843 ದಶಲಕ್ಷ ಡಾಲರ್ ಮೌಲ್ಯದ ತಾಜಾ ಅಥವಾ ಒಣ ಗೋಡಂಬಿ ಆಮದು ಮಾಡಿಕೊಂಡಿದ್ದು, ಇದರಲ್ಲಿ ಭಾರತದ ಪಾಲು ಸುಮಾರು 20% ರಷ್ಟಿದೆ. ಈ ಗೋಡಂಬಿಗೂ ಸುಂಕದಿಂದ ವಿನಾಯಿತಿ ಸಿಕ್ಕಿದೆ.
ಯಾವ ಉತ್ಪನ್ನಗಳಿಗೆ ವಿನಾಯಿತಿ ಸಿಕ್ಕಿಲ್ಲ?
ಭಾರತದಿಂದ ಅಮೆರಿಕಕ್ಕೆ ಬಹು-ಶತಕೋಟಿ ಡಾಲರ್ ರಫ್ತುಗಳಾಗಿರುವ ಸೀಫುಡ್ (ವಿಶೇಷವಾಗಿ ಸಿಗಡಿ) ಮತ್ತು ಬಾಸ್ಮತಿ ಅಕ್ಕಿಗೆ ಮಾತ್ರ ಸುಂಕ ವಿನಾಯಿತಿ ಸಿಕ್ಕಿಲ್ಲ. ಅದೇ ರೀತಿ, ಭಾರತೀಯ ರತ್ನಗಳು, ಆಭರಣಗಳು ಮತ್ತು ಉಡುಪುಗಳ ಮೇಲಿನ 50% ಸುಂಕ ನಿರ್ಬಂಧಗಳು ಸಹ ಮುಂದುವರಿದಿವೆ.
ಭಾರತ, ರಷ್ಯಾದ ತೈಲ ಆಮದನ್ನು ನಿಲ್ಲಿಸಿ, ಅಮೆರಿಕದ ಇಂಧನವನ್ನು ಹೆಚ್ಚು ಖರೀದಿಸಲು ಮುಂದಾದರೆ ಮಾತ್ರ ವ್ಯಾಪಾರ ಒಪ್ಪಂದ ಸಾಧ್ಯ ಎಂದು ಟ್ರಂಪ್ ಹೇಳಿದ್ದಾರೆ.

