ಭಾರತದ ರಕ್ಷಣಾ ಉಪಕರಣಗಳ ಖರೀದಿ ಸಮಿತಿ (DAC), ಇತ್ತೀಚೆಗಷ್ಟೇ ಸುಮಾರು 45,000 ಕೋಟಿ ರೂ. ಮೌಲ್ಯದ ವಿವಿಧ ಆಯುಧಗಳ ಖರೀದಿಗೆ ಒಪ್ಪಿಗೆ ಸೂಚಿಸಿದೆ. ಅನುಮೋದನೆ ಪಡೆದ ಆಯುಧಗಳಲ್ಲಿ, ಕಡಿಮೆ ವ್ಯಾಪ್ತಿಯ, ಗಾಳಿಯಿಂದ ಭೂಮಿಗೆ ದಾಳಿ ನಡೆಸಬಲ್ಲ ಧ್ರುವಾಸ್ತ್ರ ಕ್ಷಿಪಣಿಗಳು, ಭಾರತ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿರ್ಮಾಣದ 12 ಸುಖೋಯ್-30 MKI ಯುದ್ಧ ವಿಮಾನಗಳೂ ಸೇರಿವೆ. ಅದರೊಂದಿಗೆ ಆರ್ಟಿಲರಿ ಗನ್‌ಗಳು ಮತ್ತು ರೇಡಾರ್‌ಗಳನ್ನ ಕ್ಷಿಪ್ರವಾಗಿ ಸಾಗಿಸಲು ಅತ್ಯವಶ್ಯಕವಾದ ಹೈ ಮೊಬಿಲಿಟಿ ವೆಹಿಕಲ್ (HMV) ಹಾಗೂ ಗನ್ ಟೋವಿಂಗ್ ವೆಹಿಕಲ್ಸ್‌ಗಳನ್ನ (GTV) ಖರೀದಿಸಲು ಅನುಮೋದನೆ ನೀಡಿದೆ. ಜೊತೆಗೆ ಭಾರತೀಯ ನೌಕಾಪಡೆಯ ಬಳಕೆಗೆ ಹೊಸ ತಲೆಮಾರಿನ ಸಮೀಕ್ಷಾ ಹಡಗುಗಳ ಖರೀದಿಗೂ ಅನುಮತಿ ಲಭಿಸಿದೆ.
Advertisement
ಈ ಸಂಬಂಧ ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯ, ಎಲ್ಲ ಖರೀದಿಯನ್ನೂ ಭಾರತೀಯ ಮೂಲಗಳಿಂದ ನಡೆಸಲಾಗುವುದು ಎಂದಿದ್ದು, ಇದು ಭಾರತದ ‘ಆತ್ಮನಿರ್ಭರ ಭಾರತ’ ಯೋಜನೆಗೆ ಪೂರಕವಾಗಿದೆ ಎಂದಿದೆ. ‘ಬೈ ಇಂಡಿಯನ್’ ವರ್ಗದ ಖರೀದಿಯಲ್ಲಿನ ಆಯುಧಗಳು ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣವಾಗಿರುವುದಿಲ್ಲ. ಆದರೂ ಅವುಗಳ ನಿರ್ಮಾಣದಲ್ಲಿ ಕನಿಷ್ಠ 60% ಭಾರತೀಯ ನಿರ್ಮಾಣದ್ದಾಗಿರಬೇಕು ಎನ್ನುವ ಗುರಿ ಹೊಂದಲಾಗಿದೆ. ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಹಲವು ರಕ್ಷಣಾ ಉತ್ಪನ್ನಗಳಲ್ಲಿ 50% ನಷ್ಟು ಭಾರತೀಯ ನಿರ್ಮಾಣವನ್ನ ಸಾಧಿಸುವ ಗುರಿ ಹೊಂದುವ ಬದಲು, ದೇಶ ಕನಿಷ್ಠ 60% – 65% ಸ್ವದೇಶೀ ನಿರ್ಮಾಣ ಗುರಿ ಸಾಧಿಸಬೇಕು ಎಂದು ಕರೆ ನೀಡಿದ್ದಾರೆ. ಈ ಮೂಲಕ ಆ ಉತ್ಪನ್ನಗಳು ಹೆಚ್ಚು-ಹೆಚ್ಚು ಭಾರತೀಯ ನಿರ್ಮಾಣದ್ದಾಗಿರಲಿವೆ.
Advertisement
Advertisement
ಧ್ರುವಾಸ್ತ್ರ: ಗಾಳಿಯಿಂದ ಭೂಮಿಗೆ ದಾಳಿ ನಡೆಸುವ ಕ್ಷಿಪಣಿ
ಇತ್ತೀಚಿನ ವರದಿಗಳ ಪ್ರಕಾರ, ಭಾರತದ ದೇಶೀಯ ನಿರ್ಮಾಣದ ಹೆಲಿಕಾಪ್ಟರ್ ಲಾಂಚ್ಡ್ ನಾಗ್ (ಹೆಲಿನಾ) ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ಎಟಿಜಿಎಂ) ಎಲ್ಲ ಪರೀಕ್ಷೆಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹೆಲಿನಾ ಭಾರತೀಯ ಭೂಸೇನೆಯ ಆವೃತ್ತಿಯಾದರೆ, ಭಾರತೀಯ ವಾಯುಪಡೆಯ ಆವೃತ್ತಿಯನ್ನ ಧ್ರುವಾಸ್ತ್ರ ಎಂದು ಕರೆಯಲಾಗುತ್ತದೆ. ಈ ಧ್ರುವಾಸ್ತ್ರವೂ ತನ್ನ ಆರಂಭಿಕ ಪ್ರಾಯೋಗಿಕ ಪರೀಕ್ಷೆಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
Advertisement
ಹೆಲಿನಾ ಮತ್ತು ಧ್ರುವಾಸ್ತ್ರಗಳು 3ನೇ ತಲೆಮಾರಿನ ಆ್ಯಂಟಿ ಟ್ಯಾಂಕ್ ನಿರ್ದೇಶಿತ ಕ್ಷಿಪಣಿಗಳಾಗಿದ್ದು, ಶತ್ರುಗಳ ವಿರುದ್ಧ ನೇರವಾಗಿ ಅಥವಾ ಗಾಳಿಯಿಂದಲೇ ದಾಳಿ ನಡೆಸಬಲ್ಲವು. ಹೆಲಿನಾ ಕ್ಷಿಪಣಿಗಳನ್ನು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್ಎಚ್) ಧ್ರುವದಿಂದ ಉಡಾವಣೆಗೊಳಿಸಲಾಗುತ್ತದೆ. ಎಎಲ್ಎಚ್ ಧ್ರುವ ಅವಳಿ ಲಾಂಚರ್‌ಗಳನ್ನ ಹೊಂದಿದ್ದು, ಎರಡು ಬದಿಯಲ್ಲೂ ಒಂದೊಂದು ಲಾಂಚರ್‌ಗಳನ್ನು ಹೊಂದಿದೆ. ಇದು ಒಟ್ಟು 8 ಕ್ಷಿಪಣಿಗಳನ್ನ ಒಯ್ಯುವ ಸಾಮರ್ಥ್ಯ ಗಳಿಸಿದೆ. ಪ್ರತಿಯೊಂದು ಕ್ಷಿಪಣಿಗೂ 1 ಕೋಟಿ ರೂ.ಗಿಂತಲೂ ಕಡಿಮೆ ಬೆಲೆಯಿರುತ್ತದೆ.
ಧ್ರುವಾಸ್ತ್ರ ಕ್ಷಿಪಣಿ 500 ಮೀಟರ್‌ಗಳಷ್ಟು ಕನಿಷ್ಠ ವ್ಯಾಪ್ತಿ ಹಾಗೂ 7 ಕಿಮೀಗಳ ಗರಿಷ್ಠ ವ್ಯಾಪ್ತಿಯನ್ನ ಒಳಗೊಂಡಿದೆ. ಇದನ್ನ ಗರಿಷ್ಠ 4 ಕಿಮೀ ಗಳಷ್ಟು ಎತ್ತರದಿಂದ ಉಡಾವಣೆಗೊಳಿಸಬಹುದಾಗಿದೆ. ಪ್ರತಿ ಗಂಟೆಗೆ 70 ಕಿಮೀ ಗಳಷ್ಟು ವೇಗದಲ್ಲಿ ನಿಖರವಾಗಿ ದಾಳಿ ನಡೆಸಬಲ್ಲದು. ಈ ಕ್ಷಿಪಣಿಯಲ್ಲಿ ವಿಶೇಷ ಸಿಡಿತಲೆಯಿದ್ದು, ಶತ್ರುಗಳ ಟ್ಯಾಂಕ್‌ಗಳ ರಕ್ಷಣಾ ವ್ಯವಸ್ಥೆಯನ್ನ ಭೇದಿಸುವ ಸಾಮರ್ಥ್ಯ ಹೊಂದಿದೆ. ಶತ್ರು ವಾಹನಗಳು ಸಾಮಾನ್ಯ ರಕ್ಷಣಾ ವ್ಯವಸ್ಥೆ ಹೊಂದಿದ್ದರೂ, ಎಕ್ಸ್‌ಪ್ಲೋಸಿವ್ ರಿಯಾಕ್ಟಿವ್ ಆರ್ಮರ್ ಹೊಂದಿದ್ದರೂ ಅವುಗಳನ್ನ ಈ ಸಿಡಿತಲೆ ಭೇದಿಸಬಲ್ಲದು.
ಧ್ರುವಾಸ್ತ್ರವನ್ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಇಂಟಿಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್‌ಮೆಂಟ್ ಪ್ರೋಗ್ರಾಮ್ (IGMDP) ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ಕ್ಷಿಪಣಿ ವ್ಯವಸ್ಥೆಯ ಸಾಮರ್ಥ್ಯ ಮತ್ತು ನಂಬಿಕಾರ್ಹತೆಯನ್ನ ಪರೀಕ್ಷಿಸಲು ಹಲವು ಪರೀಕ್ಷೆಗಳು, ಪ್ರಯೋಗಗಳನ್ನ ಕೈಗೊಳ್ಳಲಾಗಿದೆ. ಈ ಕ್ಷಿಪಣಿ ವ್ಯವಸ್ಥೆಯನ್ನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಭಿವೃದ್ಧಿ ಪಡಿಸಿರುವ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ಧ್ರುವ ಹಾಗೂ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (LCH) ಹೆಲಿಕಾಪ್ಟರ್‌ಗಳಿಗೆ ಅಳವಡಿಸಲಾಗುತ್ತದೆ.
ಧ್ರುವಾಸ್ತ್ರದಲ್ಲಿ ಒಂದು ಇಮೇಜಿಂಗ್ ಇನ್‌ಫ್ರಾರೆಡ್ ಸೀಕರ್ ವ್ಯವಸ್ಥೆ ಇದ್ದು, ಇದು ಶತ್ರುವಿನಿಂದ ಬರುವ ಉಷ್ಣತೆಯ ಆಧಾರದಲ್ಲಿ ಕ್ಷಿಪಣಿಯನ್ನ ಗುರಿಯೆಡೆಗೆ ನಿರ್ದೇಶಿಸುತ್ತದೆ. ಇದು ಗುರಿ ಹೊರಸೂಸುವ ಉಷ್ಣತೆ ಮತ್ತು ಇನ್‌ಫ್ರಾರೆಡ್ (ಅತಿಗೆಂಪು) ವಿಕಿರಣವನ್ನ ಗುರುತಿಸುವ ಮೂಲಕ ಕಾರ್ಯಾಚರಿಸುತ್ತದೆ. ಪ್ರತಿಯೊಂದು ವಸ್ತುವೂ ಬೆರಳಚ್ಚಿನ ರೀತಿಯಲ್ಲಿ ಅದರದ್ದೇ ಆದ ಉಷ್ಣತೆ (ಹೀಟ್ ಸಿಗ್ನೇಚರ್) ಹೊಂದಿದೆ. ಕ್ಷಿಪಣಿಯ ಸೀಕರ್ ಈ ಹೀಟ್ ಸಿಗ್ನೇಚರ್ ಛಾಯಾಚಿತ್ರಗಳನ್ನು ತೆಗೆದು, ಅವುಗಳನ್ನು ಬಳಸಿಕೊಂಡು ಕ್ಷಿಪಣಿಯನ್ನು ಆ ಗುರಿಯೆಡೆಗೆ ನಿಖರವಾಗಿ ನಿರ್ದೇಶಿಸುತ್ತದೆ. ಆ ಮೂಲಕ, ಇನ್‌ಫ್ರಾರೆಡ್ ಸೀಕರ್ ಗುರಿಯನ್ನು ಅದು ಹೊರಸೂಸುವ ಉಷ್ಣತೆಯ ಆಧಾರದಲ್ಲಿ ‘ವೀಕ್ಷಿಸಿ’, ಅದರೆಡೆಗೆ ಕ್ಷಿಪಣಿಯನ್ನ ಕರಾರುವಾಕ್ಕಾಗಿ ದಾಳಿ ನಡೆಸುವಂತೆ ಮಾಡುತ್ತದೆ. ಈ ತಂತ್ರಜ್ಞಾನ ಸಾಮಾನ್ಯವಾಗಿ ಉಷ್ಣತೆಯನ್ನ ಸೂಸುವ ವಸ್ತುಗಳಾದ ವಾಹನಗಳು, ವಿಮಾನಗಳು ಅಥವಾ ಕಟ್ಟಡಗಳ ಮೇಲೆ ದಾಳಿ ನಡೆಸಲು ಪೂರಕವಾಗಿದೆ.
ಧ್ರುವಾಸ್ತ್ರ ಕ್ಷಿಪಣಿ 43 ಕೆಜಿ ತೂಕ ಹೊಂದಿದೆ. ಇದು ಇದರ ಮೂಲ ವಿನ್ಯಾಸವಾದ ನಾಗ್ ಕ್ಷಿಪಣಿಯಷ್ಟೇ ತೂಕ ಹೊಂದಿದೆ. ಇದರ ಸಿಡಿತಲೆ 8 ಕೆಜಿಗಳಷ್ಟು ತೂಕವಿದೆ. ಇದು ಅಂದಾಜು 1.85 – 1.9 ಮೀಟರ್ (6 ಅಡಿ) ಉದ್ದವಿದ್ದು, 0.16-0.2 ಮೀಟರ್ (8 ಇಂಚ್) ವ್ಯಾಸವನ್ನ ಒಳಗೊಂಡಿರುತ್ತದೆ.
ಮಾಹಿತಿ: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
Web Stories