CricketLatestSports

ಟೀಂ ಇಂಡಿಯಾಗೆ 150ನೇ ಟೆಸ್ಟ್ ಗೆಲುವು – ಕೀಪರ್ ರಿಷಭ್, ಇಶಾಂತ್ ಶರ್ಮಾ, ಬೂಮ್ರಾ ದಾಖಲೆ!

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಭಾರತ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧದ 137 ರನ್ ಅಂತರದ ಗೆಲುವು ಸಾಧಿಸಿ ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತನ್ನ 150ನೇ ಗೆಲುವು ದಾಖಲಿಸಿದೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 5ನೇ ತಂಡ ಎಂಬ ಖ್ಯಾತಿಗೆ ಟೀಂ ಇಂಡಿಯಾ ಪಾತ್ರವಾಗಿದೆ.

ಮೊದಲ ಸ್ಥಾನದಲ್ಲಿ ಕಾಂಗರೂ ಪಡೆ!: ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾ ಹೆಸರಲ್ಲಿದೆ. ಕಾಂಗರೂ ಪಡೆ ಇದುವರೆಗೆ 384 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. 364 ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ತಂಡ 2ನೇ ಸ್ಥಾನದಲ್ಲಿದ್ದರೆ, 171 ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್ ಹಾಗೂ 162 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.

IND v AUS 4

ಸೋಲಿನಲ್ಲಿ ಆಸ್ಟ್ರೇಲಿಯಾ ದ್ವಿತೀಯ!: ಇದುವರೆಗೆ ಆಡಿದ ಟೆಸ್ಟ್ ಮ್ಯಾಚ್ ಗಳಲ್ಲಿ 222 ಬಾರಿ ಸೋಲುಂಡ ಆಸ್ಟ್ರೇಲಿಯಾ ಸೋಲಿನ ಸಾಧನೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. 298 ಸೋಲಿನ ಜೊತೆ ಇಂಗ್ಲೆಂಡ್ ಸೋಲಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನೆರಡು ಸೋಲನುಭವಿಸಿದರೆ ಇಂಗ್ಲೆಂಡ್ ತಂಡ ಸೋಲಿನಲ್ಲೂ ‘ತ್ರಿಶತಕ’ದ ಸಾಧನೆ ಮಾಡಲಿದೆ.

ರಿಷಭ್ ದಿ ಕಿಲ್ಲರ್!: ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಬಲಿ ಪಡೆದ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆಗೆ ರಿಷಭ್ ಪಂತ್ ಭಾಜನರಾಗಿದ್ದಾರೆ. ಸದ್ಯ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅವರು 20 ಬಲಿ ಪಡೆದಿದ್ದಾರೆ. ಇನ್ನೂ ಒಂದು ಟೆಸ್ಟ್ ಪಂದ್ಯ ಬಾಕಿ ಉಳಿದಿದ್ದು ಇದರಲ್ಲಿ ರಿಷಭ್ ತನ್ನ ಸಾಧನೆಯನ್ನು ಇನ್ನಷ್ಟು ಬಲಪಡಿಸುವ ಸಾಧ್ಯತೆಯೇ ಹೆಚ್ಚಾಗಿದೆ.

IND v AUS 5

ಇದುವರೆಗೆ ಭಾರತದ ಇಬ್ಬರು ವಿಕೆಟ್ ಕೀಪರ್ ಗಳು ತಲಾ 19 ಬಲಿ ಪಡೆದು ಅಗ್ರಸ್ಥಾನದಲ್ಲಿದ್ದರು. ನರೇನ್ ತಮ್ಹಾನೆ ಹಾಗೂ ಸೈಯದ್ ಕೀರ್ಮಾನಿ ಅವರು ಪರಸ್ಪರ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದರು. ತಮ್ಹಾನೆ ಅವರು 1954-55ರಲ್ಲಿ ಪಾಕಿಸ್ತಾನ ವಿರುದ್ಧದ 7 ಪಂದ್ಯಗಳ ಸರಣಿಯಲ್ಲಿ ಈ ದಾಖಲೆ ಮಾಡಿದ್ದರೆ, ಸೈಯದ್ ಕೀರ್ಮಾನಿ ಅವರು ಕೂಡಾ ಪಾಕಿಸ್ತಾನ ವಿರುದ್ಧ 1979-80ರಲ್ಲಿ 6 ಪಂದ್ಯಗಳಲ್ಲಿ 19 ಬಲಿ ಪಡೆದಿದ್ದರು.

ಇಶಾಂತ್ ಶರ್ಮಾ ದಾಖಲೆ!: ಇಶಾಂತ್ ಶರ್ಮಾ ಇಂದು ಆಸ್ಟ್ರೇಲಿಯಾ ತಂಡದ ನಥಾನ್ ಲಿಯೋನ್ ಅವರ ವಿಕೆಟ್ ಪಡೆಯುತ್ತಿದ್ದಂತೆ ಭಾರತದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ 6ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಈ ಮೂಲಕ ಅವರು ಬಿಷನ್ ಸಿಂಗ್ ಬೇಡಿ ಅವರನ್ನು ಹಿಂದಿಕ್ಕಿದರು. 90 ಟೆಸ್ಟ್ ಪಂದ್ಯಗಳಲ್ಲಿ ಇಶಾಂತ್ ಶರ್ಮಾ 267 ವಿಕೆಟ್ ಪಡೆದರೆ, ಬೇಡಿ 266 ವಿಕೆಟ್ ಗಳಿಸಿ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು.

IND v AUS 2

ಕಪಿಲ್ ದಾಖಲೆ ಮುರಿದ ಬೂಮ್ರಾ!: ಆಸ್ಟ್ರೇಲಿಯಾ ಮಣ್ಣಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಕಪಿಲ್ ದೇವ್ ಹೆಸರಿನಲ್ಲಿದ್ದ ದಾಖಲೆಯನ್ನು ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‍ನಲ್ಲಿ ನಡೆದ ಈ ಪಂದ್ಯದಲ್ಲಿ ಬೂಮ್ರಾ 86 ರನ್ ನೀಡಿ 9 ವಿಕೆಟ್ ಪಡೆದುಕೊಂಡರೆ, ಕಪಿಲ್ ದೇವ್ ಅವರು 1985ರಲ್ಲಿ ಆಡಿಲೇಡ್ ಕ್ರೀಡಾಂಗಣದಲ್ಲಿ 109 ರನ್ ನೀಡಿ 8 ವಿಕೆಟ್ ಪಡೆದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Related Articles

Leave a Reply

Your email address will not be published. Required fields are marked *