ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷಾಗಿ 2ನೇ ಬಾರಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಭಾರತ (Indian American) ಮೂಲದ ಕಶ್ಯಪ್ ʻಕಶ್ʼ ಪಟೇಲ್ ಅವರನ್ನ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (FBI) ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಈ ಮೂಲಕ ಟ್ರಂಪ್ ಸಂಪುಟಕ್ಕೆ ಆಯ್ಕೆಯಾದ ಭಾರತೀಯ ಮೂಲದ 2ನೇ ವ್ಯಕ್ತಿ ಎಂಬ ಹೆಗ್ಗಳಿಕೆ ಕಶ್ಯಪ್ ಅವರದ್ದಾಗಿದೆ.
ಈ ಮಾಹಿತಿಯನ್ನು ಟ್ರಂಪ್ (Donald Trump) ತಮ್ಮ ಟ್ರೂಥ್ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಮೂಲದ ಅಮೆರಿಕನ್ ಪ್ರಜೆ ಕಶ್, ನಮ್ಮ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅವರು ಎಫ್‌ಬಿಐಗೆ ಇನ್ನಷ್ಟು ಸಮಗ್ರತೆಯನ್ನು ತರಲಿದ್ದಾರೆ. ಕಶ್ ಪಟೇಲ್ ಅವರು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ನ ಮುಂದಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬುದನ್ನು ಪ್ರಕಟಿಸಲು ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ.
ಯಾರು ಈ ಕಶ್?
ಕಾಶ್ ಒಬ್ಬ ಪ್ರತಿಭಾವಂತ ವಕೀಲ, ತನಿಖಾಧಿಕಾರಿ ಹಾಗೂ ಅಮೆರಿಕದ ಹೋರಾಟಗಾರ. ಭ್ರಷ್ಟಾಚಾರವನ್ನು ಬಯಲಿಗೆಳೆಯಲು, ನ್ಯಾಯವನ್ನು ರಕ್ಷಿಸಲು ಹಾಗೂ ಅಮೆರಿಕದ ಜನರ ಪರವಾಗಿ ತಮ್ಮ ಜೀವನ ಸವೆಸಿ ಸುದೀರ್ಘ ಹೋರಾಟ ನಡೆಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ರಷ್ಯಾದ ಹುಸಿ ಬೆದರಿಕೆ ಅನಾವರಣಗೊಳಿಸುವಲ್ಲಿ ಕಶ್ಯಪ್ ಅವರ ಪಾತ್ರ ದೊಡ್ಡದಿದೆ. ಸತ್ಯದ ಪರ ವಕೀಲರಾಗಿ, ಬದ್ಧತೆ ಮತ್ತು ಸಂವಿಧಾನದ ಪರವಾಗಿ ಸದಾ ನಿಂತವರು. ನನ್ನ ಮೊದಲ ಅವಧಿಯಲ್ಲಿ ಕಶ್ ರಕ್ಷಣಾ ವಿಭಾಗದ ಸಿಬ್ಬಂದಿ ಮುಖ್ಯಸ್ಥರಾಗಿ, ರಾಷ್ಟ್ರೀಯ ಗುಪ್ತಚರ ವಿಭಾಗದ ಉಪ ನಿರ್ದೇಶಕರಾಗಿ ಮತ್ತು ಭಯೋತ್ಪಾದೆ ವಿರೋಧಿ ವಿಭಾಗದ ಹಿರಿಯ ನಿರ್ದೇಶಕರಾಗಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಅಸಾಧಾರಣ ಕೆಲಸ ಮಾಡಿದ್ದಾರೆ ಎಂದು ಟ್ರಂಪ್ ಗುಣಗಾನ ಮಾಡಿದ್ದಾರೆ.
ಬರಾಕ್ ಒಬಾಮಾ ಅವರ ಅವಧಿಯಲ್ಲಿ ನ್ಯಾಯ ವಿಭಾಗದಲ್ಲಿ ಅಲ್ಪಕಾಲ ಸೇವೆ ಸಲ್ಲಿಸಿದ್ದ ಕಶ್ಯಪ್ ಅವರು 2 ವರ್ಷಗಳ ಕಾಲ ಡೆವಿನ್ ನ್ಯೂನ್ಸ್, ಆರ್-ಕ್ಲಿಫ್ ಪರ ಹಿರಿಯ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು. 2017 ಮತ್ತು 2018ರಲ್ಲಿ ಹೌಸ್ ಇಂಟೆಲಿಜೆನ್ಸ್ ಕಮಿಟಿ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ, ಎಫ್‌ಬಿಐ ರಷ್ಯಾ ತನಿಖೆಗೆ ನೆರವಾಗಿದ್ದರು.
44 ವರ್ಷದ ಕಶ್ಯಪ್ ಪಟೇಲ್ ಪೂರ್ವ ಆಫ್ರಿಕಾದಿಂದ ವಲಸೆ ಬಂದ ಗುಜರಾತಿ ಮೂಲದ ದಂಪತಿಗೆ ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ಜನಿಸಿದರು. ಕಾನೂನು ಪದವಿ ಪಡೆದ ನಂತರ ಫ್ಲೋರಿಡಾದಲ್ಲಿ ವಕೀಲರಾಗಿ ಕೆಲಸ ಮಾಡಿದರು, ರಾಜ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಗ್ರಾಹಕರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿದರು. ನಂತರ ನ್ಯಾಯಾಂಗ ಇಲಾಖೆಯ ಪ್ರಾಸಿಕ್ಯೂಟರ್ ಆಗಿ ಸೇರಿಕೊಂಡರು. ಪೂರ್ವ ಆಫ್ರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ನಡೆಯುತ್ತಿದ್ದ ಅಂತರರಾಷ್ಟ್ರೀಯ ಭಯೋತ್ಪಾದನೆ ಪ್ರಕರಣಗಳನ್ನು ನಿರ್ವಹಿಸಿದ್ದರು.