ಕೊಲಂಬೊ: ಸಂಘಟಿತ ಬೌಲಿಂಗ್ ಪ್ರದರ್ಶನ, ಯಶಸ್ವಿ, ಸೂರ್ಯ, ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಟಿ20 ಸರಣಿಯನ್ನು 2-0 ರಲ್ಲಿ ಗೆದ್ದುಕೊಂಡಿದ್ದು, ಸರಣಿ ಕೈವಶ ಮಾಡಿಕೊಂಡಿದೆ.
Advertisement
ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಬಾರಿಸಿತ್ತು. 162 ರನ್‌ಗಳ ಗುರಿ ಬೆನ್ನತ್ತಿದ ಭಾರತ ಮೊದಲ ಮೂರು ಎಸೆತಗಳಲ್ಲಿ 6 ರನ್ ಗಳಿಸುತ್ತಿದ್ದಂತೆ ಮಳೆಯ ಆರ್ಭಟ ಶುರುವಾಯಿತು. ಸುಮಾರು 1 ಗಂಟೆಗಳ ಕಾಲ ಮಳೆಯಾದ ಕಾರಣ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಟೀಂ ಇಂಡಿಯಾಕ್ಕೆ 8 ಓವರ್‌ಗಳಲ್ಲಿ 78 ರನ್ ಗುರಿ ನೀಡಲಾಯಿತು. ಸ್ಪರ್ಧಾತ್ಮಕ ಗುರಿ ಪಡೆದ ಭಾರತ ಕೇವಲ 6.3 ಓವರ್‌ಗಳಲ್ಲೇ 3 ವಿಕೆಟ್ ನಷ್ಟಕ್ಕೆ 81 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
Advertisement
Advertisement
ಚೇಸಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದ್ರೆ ಸಂಜು ಸ್ಯಾಮ್ಸನ್ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆಗುವ ಮೂಲಕ ಆಘಾತ ನೀಡಿದರು. ನಂತರ ಕ್ರೀಸ್‌ಗಿಳಿದ ಸೂರ್ಯಕುಮಾರ್ ಯಾದವ್, ಜೈಸ್ವಾಲ್ ಜೊತೆಗೂಡಿ ಲಂಕಾ ಬೌಲರ್‌ಗಳಲ್ಲ ಬೆಂಡೆತ್ತಿದರು. 216.66 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯ 12 ಎಸೆತಗಳಲ್ಲಿ ಸ್ಫೋಟಕ 26 ರನ್ ಚಚ್ಚಿ ಔಟಾದರು. ಈ ಬೆನ್ನಲ್ಲೇ 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಸ್ ಬೀಸಿದ ಯಶಸ್ಬಿ ಜೈಸ್ವಾಲ್ 15 ಎಸೆತಗಳಲ್ಲಿ 30 ರನ್ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ಅಷ್ಟೊತ್ತಿಗಾಗಲೇ ಭಾರತದ ಗೆಲುವಿನ ಹಾದಿ ಸುಗಮನವಾಗಿತ್ತು.
Advertisement
ನಂತರ 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ 2 ಸಿಕ್ಸರ್, 1 ಬೌಂಡರಿಯೊಂದಿಗೆ ಸ್ಫೋಟಕ 22 ರನ್ ಬಾರಿಸಿ ಗೆಲುವು ತಂದುಕೊಟ್ಟರು. ರಿಷಭ್ ಪಂತ್ 2 ರನ್ ಗಳಿಸಿ ಅಜೇಯರಾಗುಳಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಬ್ಬರಿಸಿದರು. ಪಥುಮ್ ನಿಸ್ಸಾಂಕ 32 ರನ್, ಕುಸಲ್ ಪೆರೆರಾ ಅಮೋಘ 53 ರನ್ (34 ಎಸೆತ, 2 ಸಿಕ್ಸರ್, 6 ಬೌಂಡರಿ) ಸಿಡಿಸಿ ಮಿಂಚಿದರು. ಇದರೊಂದಿಗೆ ಕುಸಲ್ ಮೆಂಡಿಸ್ 10 ರನ್, ಕಮಿಂಡು ಮೆಂಡಿಸ್ 26 ರನ್, ಚರಿತ್ ಹಸಲಂಕ 14 ರನ್, ರಮೇಶ್ ಮೆಂಡಿಸ್ 12 ರನ್‌ಗಳ ಕೊಡುಗೆ ನೀಡಿದರು.
ಭಾರತದ ಪರ ರವಿ ಬಿಷ್ಣೋಯಿ 3 ವಿಕೆಟ್ ಕಿತ್ತರೆ, ಅರ್ಷ್ ದೀಪ್ ಸಿಂಗ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದು ಮಿಂಚಿದರು.