ಹೊರಗಿನ ಪರಿಸ್ಥಿತಿ ಏನೇ ಇರಲಿ, ಆಂತರಿಕವಾಗಿ ಭಾರತ ಗಟ್ಟಿಯಾಗಿದೆ: ಮೋದಿ

Public TV
2 Min Read
NARENDRA MODI SPEECH

ಬೆಂಗಳೂರು: ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದಾಗಿದೆ. ಹೊರಗಿನ ಪರಿಸ್ಥಿತಿಗಳು ಏನೇ ಇರಲಿ, ಆಂತರಿಕವಾಗಿ ಭಾರತ ಗಟ್ಟಿಯಾಗಿದೆ. ಸದೃಢ ಸರ್ಕಾರ, ನಿರಂತರ ಪರಿವರ್ತನೆ, ತಳಮಟ್ಟದಲ್ಲಿ ಸಾಮಾಜಿಕ ಆರ್ಥಿಕ ಪ್ರಾಬಲ್ಯ ಭಾರತವನ್ನು ಗಟ್ಟಿಯಾಗಿ ಇಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.

ನೆಲಮಂಗಲ (Nelamangala) ಹತ್ತಿರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (BIES)ದಲ್ಲಿ ಭಾರತ ಇಂಧನ ಸಪ್ತಾಹ 2023ಕ್ಕೆ ಚಾಲನೆ ನೀಡಿ ಬಳಿಕ ಮಾತನಾಡುತ್ತಾ, ಈಗ ಟರ್ಕಿಯಲ್ಲಿ ಭೂಕಂಪದಿಂದ ಸಾಕಷ್ಟು ನೋವಾಗಿದೆ. ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಅವರೊಂದಿಗೆ ಎಲ್ಲ ಭಾರತೀಯರು ಜೊತೆಗಿದ್ದೇವೆ ಎಂದು ಹೇಳಿದರು.

ಭಾರತದಲ್ಲಿ ಜಿ-20 ಅಧ್ಯಕ್ಷತೆ ದೊರೆತ ನಂತರ ನಡೆಯುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ. 21ನೇ ಶತಮಾನದಲ್ಲಿ ವಿಶ್ವದ ಭವಿಷ್ಯವನ್ನು ನಿರ್ಧರಿಸುವಲ್ಲಿ ಇಂಧನ ಕ್ಷೇತ್ರವು ಪ್ರಮುಖ ಪಾತ್ರ ವಹಿಸಲಿದೆ. ಈ ಶಕ್ತಿಯ ಹೊಸ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಪರಿವರ್ತನೆಯಲ್ಲಿ ಭಾರತವು ಇಂದು ಪ್ರಬಲವಾದ ಧ್ವನಿಗಳಲ್ಲಿ ಒಂದಾಗಿ ಮಾರ್ಪಟ್ಟಿದೆ ಎಂದರು. ಇದನ್ನೂ ಓದಿ: ಅದಾನಿ ವಿಚಾರದಲ್ಲಿ ತೀವ್ರವಾದ ಪ್ರತಿಪಕ್ಷಗಳ ಪ್ರತಿಭಟನೆ – ಮತ್ತೆ ಲೋಕಸಭೆ, ರಾಜ್ಯಸಭೆ ಕಲಾಪ ಮುಂದೂಡಿಕೆ

ಭಾರತದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಸ್ಥಿರ ಸರ್ಕಾರವಿದೆ. ಹೀಗಾಗಿಯೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಪೂರಕವಾಗುವ ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ. ದೇಶದ ಹಳ್ಳಿಹಳ್ಳಿಗಳಿಗೆ ಇಂಟರ್ನೆಟ್ ವ್ಯವಸ್ಥೆ ತಲುಪಿದೆ. ಇಂಟರ್ನೆಟ್ ಬಳಕೆ ಪ್ರಮಾಣ 3 ಪಟ್ಟು ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ಬಡವರ್ಗದಲ್ಲಿದ್ದವರು ಮಧ್ಯಮವರ್ಗಕ್ಕೆ ಬಂದಿದ್ದಾರೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತ ಮುಂಚೂಣಿಗೆ ಬಂದಿದೆ ಎಂದರು.

NARENDRA MODI

ಭಾರತದಲ್ಲಿ ಪ್ರಸ್ತುತ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ವಿಶ್ವದ ಒಟ್ಟು ಬೇಡಿಕೆಯಲ್ಲಿ ಶೇ 5ರಷ್ಟು ಇದೆ. ಇದು ಮುಂದಿನ ಕೆಲವೇ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ನಮ್ಮ ಪೆಟ್ರೋಲಿಯಂ ಸಂಸ್ಕರಣಾಗಾರಗಳ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸುತ್ತಿದ್ದೇವೆ. ಇಲ್ಲಿ ಸ್ಟಾರ್ಟಪ್‍ಗಳಿಗೆ ಹೆಚ್ಚು ಉತ್ತೇಜನವಿದೆ. ನೀವು ಇಲ್ಲಿನ ಇಂಧನ ಕ್ಷೇತ್ರದ ವಿಕಸನದ ಸಹಭಾಗಿಗಳಾಗಬಹುದು. ನೈಸರ್ಗಿಕ ಅನಿಲ ಕ್ಷೇತ್ರದಲ್ಲಿಯೂ ಸುಧಾರಣೆಗೆ ಸತತ ಪ್ರಯತ್ನ ನಡೆಯುತ್ತಿದೆ ಎಂದು ನುಡಿದರು.

ಮುಂದಿನ ಕೆಲವೇ ದಿನಗಳಲ್ಲಿ ಎಲ್ಲ ಕುಟುಂಬಗಳಲ್ಲಿ ಸೋಲಾರ್ ಒಲೆಗಳು ಬಳಕೆಗೆ ಬರಲಿವೆ. ಇದರಿಂದ ಇಂಧನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಪ್ಲಾಸ್ಟಿಕ್ ಬಾಟಲಿಗಳಿಂದ ನಾವು ರೂಪಿಸಿರುವ ಸಮವಸ್ತ್ರಗಳು ಯಾವುದೇ ರೀತಿಯಲ್ಲಿ ಗುಣಮಟ್ಟ ಅಥವಾ ಫ್ಯಾಷನ್ ವಿಚಾರದಲ್ಲಿ ಕಡಿಮೆಯಾಗಿಲ್ಲ. 10 ಕೋಟಿ ಪ್ಲಾಸ್ಟಿಕ್ ಬಾಟಲಿಗಳನ್ನು ಹೀಗೆ ಮರುಬಳಕೆ ಮಾಡಲಾಗುವುದು. ಇದರಿಂದ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ಭಾರತದಲ್ಲಿ ಇಂಧನ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಗಮನಿಸಿ, ಬಳಸಿಕೊಳ್ಳಿ. ನಿಮ್ಮ ಹೂಡಿಕೆಗೆ ಭಾರತವು ಅತ್ಯಂತ ಪ್ರಶಸ್ತ ತಾಣವಾಗಿದೆ ಎಂದು ಹೇಳಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *