ನವದೆಹಲಿ: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಕದನ ವಿರಾಮವನ್ನು (America Iran Ceasefire) ಭಾರತ (India) ಸ್ವಾಗತಿಸಿದೆ. ಕದನ ವಿರಾಮವು ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿಗೆ ದಾರಿ ಮಾಡಿಕೊಡುತ್ತದೆ ಎಂಬ ಭರವಸೆಯನ್ನು ಭಾರತ ವ್ಯಕ್ತಪಡಿಸಿದೆ. ಇದಕ್ಕೆ ನಿರಂತರ ಸಂವಾದ ಮತ್ತು ರಾಜತಾಂತ್ರಿಕತೆಯ ಅಗತ್ಯವನ್ನು ಒತ್ತಿಹೇಳಿದೆ.
ಕದನ ವಿರಾಮದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯ, ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ. ಈ ಮೂಲಕ ಮಧ್ಯ ಪ್ರಾಚ್ಯದಲ್ಲಿ ಶಾಶ್ವತ ಶಾಂತಿ ಸಾಧ್ಯವಾಗಲಿದೆ. ಯುದ್ಧದಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿತ್ತು. ಜಾಗತಿಕ ಇಂಧನ ಪೂರೈಕೆ ಮತ್ತು ವ್ಯಾಪಾರ ಜಾಲಗಳಿಗೆ ಅಡ್ಡಿಯಾಗಿತ್ತು ಎಂದು ಹೇಳಿದೆ. ಇದನ್ನೂ ಓದಿ: ಅಮೆರಿಕ-ಇರಾನ್ ಮಧ್ಯೆ 2 ವಾರಗಳ ಕದನ ವಿರಾಮ ಘೋಷಣೆ
ಕದನ ವಿರಾಮ ಘೋಷಣೆಯಿಂದ ಹಾರ್ಮುಜ್ ಜಲಸಂಧಿಯ ಮೂಲಕ ಅಡೆತಡೆಯಿಲ್ಲದ ಸಂಚಾರಕ್ಕೆ ಅವಕಾಶ ದೊರೆತಿದೆ. ಈ ಹಿನ್ನೆಲೆಯಲ್ಲಿ, ಭಾರತವು ಸಂಘರ್ಷದ ವಿಶಾಲ ಆರ್ಥಿಕ ಪರಿಣಾಮಗಳನ್ನು ಗುರುತಿಸಿದೆ. ಭಾರತದ ಈ ಪ್ರತಿಕ್ರಿಯೆಯು ಯುದ್ಧ ಪೀಡಿತ ಪ್ರದೇಶದಲ್ಲಿ ಶಾಂತಿಗಾಗಿ ಅಂತರರಾಷ್ಟ್ರೀಯ ಬೆಂಬಲವನ್ನು ಪ್ರತಿಬಿಂಬಿಸುತ್ತದೆ.
ಇದರ ನಡುವೆಯೂ ಕದನ ವಿರಾಮದ ಕುರಿತು ಅನಿಶ್ಚಿತತೆ ಮುಂದುವರೆದಿದೆ. ವಿಶ್ಲೇಷಕರು, ಸಂಘರ್ಷ ಮರುಕಳಿಸುವುದನ್ನು ತಪ್ಪಿಸಲು ನಿರಂತರ ಚರ್ಚೆ ನಿರ್ಣಾಯಕವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.
ಇರಾನ್‌ಗೆ ನೀಡಿದ್ದ 48 ಗಂಟೆಗಳ ಡೆಡ್‌ಲೈನ್ ಅಮೆರಿಕ ಕಾಲಮಾನ ರಾತ್ರಿ 8 ಗಂಟೆಗೆ ಅಂತ್ಯವಾಗುವ ಒಂದು ಗಂಟೆಯ ಮೊದಲು ಟ್ರಂಪ್ (Donald Trump) ತಮ್ಮ ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಈ ಕದನ ವಿರಾಮ ಘೋಷಿಸಿದ್ದರು. ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್ ಒಪ್ಪಿಕೊಂಡಿದೆ. ಅವರ ಕಡೆಯಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಕದನ ವಿರಾಮಕ್ಕೆ ಇರಾನ್ ವಿಧಿಸಿದ 10 ಷರತ್ತುಗಳು ಏನು?

