ವಾಷಿಂಗ್ಟನ್: ನಾವು ಕಠಿಣ ನಿರ್ಧಾರ ತೆಗೆದುಕೊಂಡಿದ್ದರೂ ನಮ್ಮ ಜೊತೆ ವ್ಯವಹಾರ ಒಪ್ಪಂದ ನಡೆಸುವಂತೆ ಭಾರತದಿಂದ ಮೊದಲ ಬಾರಿಗೆ ನಮಗೆ ದೂರವಾಣಿ ಕರೆ ಬಂದಿತ್ತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸೌತ್ ಡೊಕೊಟದ ನಡೆದ ಜಾಯಿಂಟ್ ಫಂಡ್‍ರೈಸಿಂಗ್ ಕಮಿಟಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಅಮೆರಿಕ ಸಾಗುತ್ತಿರುವ ಆರ್ಥಿಕ ಪಥದಲ್ಲೇ ಭಾರತ ಕೂಡ ಮುಂದುವರಿಸಲು ಬಯಸಿದೆ. ನಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಭಾರತ ಕಾಯುತ್ತಿದ್ದು, ಈ ಸಂಬಂಧಕ್ಕಾಗಿ ದೂರವಾಣಿ ಕರೆ ಮಾಡಿತ್ತು. ಆದರೆ ಭಾರತದಿಂದ ಯಾರು ಕರೆ ಮಾಡಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸದೇ, ಹೇಳುವ ಸಮಯ ಬಂದಾಗ ಎಲ್ಲಾ ಹೇಳುತ್ತೇನೆ ಎಂದು ತಿಳಿಸಿದರು.
ನನ್ನನ್ನೂ ಎಲ್ಲರೂ ಗೌರವಿಸುತ್ತಾರೆ, ಹೀಗಾಗಿ ನಾನೂ ಎಲ್ಲರನ್ನೂ ಗೌರವಿಸುತ್ತೇನೆ. ಅದು ಜಪಾನ್ ಪ್ರಧಾನಿ ಅಬೆ ಆಗಲಿ ಅಥವಾ ಭಾರತದ ಪ್ರಧಾನಿ ನರೇಂದ್ರ ಮೋದಿಯೇ ಆಗಲಿ ಎಲ್ಲರನ್ನೂ ನಾನು ಗೌರವಿಸುತ್ತೇನೆ. ಭಾರತವಲ್ಲದೇ ಜಪಾನ್ ಕೂಡ ನಮ್ಮೊಂದಿಗೆ ವ್ಯವಹರಿಸಲು ಚರ್ಚಿಸುತ್ತಿರುವಾಗಿ ಹೇಳಿದರು.
ಅಮೆರಿಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಗಣಿಸಿದ್ದು, ಇನ್ನಷ್ಟು ವೇಗವಾಗಿ ಅಭಿವೃದ್ಧಿ ಹೊಂದಲು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಭಾರತ ಮತ್ತು ಚೀನಾಕ್ಕೆ ನೀಡುತ್ತಿದ್ದ ಸಬ್ಸಿಡಿಗಳನ್ನು ನಿಲ್ಲಿಸಲು ಮುಂದಾಗಿದೆ.
ಭಾರತದ ವಸ್ತುಗಳ ಮೇಲೆ ಅಮೆರಿಕ ಅಮದು ಸುಂಕವನ್ನು ಹೆಚ್ಚಿಸಿದ್ದಕ್ಕೆ ಭಾರತವೂ ಅಮೆರಿಕದ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಂಪ್ ಭಾರತದ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದರು. ಇದರ ಬೆನ್ನಲ್ಲೇ ಅಮೆರಿಕವು ಇರಾನ್ ವಿರುದ್ಧ ಮುಂಬರುವ ನವೆಂಬರ್‍ನಿಂದ ಅನ್ವಯವಾಗುವಂತೆ ನಿರ್ಬಂಧಗಳನ್ನು ಹೇರಿದೆ. ಚೀನಾ, ಅಮೆರಿಕ ನಡುವಿನ ವ್ಯಾಪಾರ ಸಮರದಿಂದ ಡಾಲರ್ ಬೆಲೆ ವೃದ್ಧಿಸುತ್ತಿದ್ದರೆ, ರೂಪಾಯಿ ಮೌಲ್ಯ ಕುಸಿಯುತ್ತಿದೆ. ಇದರ ಬೆನ್ನಲ್ಲೇ ಇರಾನ್ ವಿರುದ್ಧದ ನಿರ್ಬಂಧ ಕೂಡ ತೈಲ ದರ ಏರಿಕೆಗೆ ಪ್ರಭಾವ ಬೀರಿದೆ. ಎರಡು ದೇಶಗಳ ನಡುವೆ ವ್ಯಾಪಾರ ವಿಚಾರದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಡೊನಾಲ್ಡ್ ಟ್ರಂಪ್ ಈ ಹೇಳಿಕೆ ನೀಡಿದ್ದು ಈಗ ಮತ್ತಷ್ಟು ಚರ್ಚೆಯಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv