ಟ್ರಿನಿನಾಡ್: ಬ್ಯಾಟಿಂಗ್‍ನಲ್ಲಿ ಶುಭಮನ್ ಗಿಲ್ ಮತ್ತು ಬೌಲಿಂಗ್‍ನಲ್ಲಿ ಯಜುವೇಂದ್ರ ಚಹಲ್ ಆಟಕ್ಕೆ ಥಂಡಾ ಹೊಡೆದ ವೆಸ್ಟ್ ಇಂಡೀಸ್ ಸೋತು ಮುಖಭಂಗ ಅನುಭವಿಸಿದೆ. ಭಾರತ 119 ರನ್‍ಗಳ ಜಯದೊಂದಿಗೆ ಸರಣಿ ಕ್ಲೀನ್ ಸ್ವೀಪ್ ಸಾಧಿಸಿ ಮೆರೆದಾಡಿದೆ.
ಮಳೆಯ ನಡುವೆ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಶುಭಮನ್ ಗಿಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟ್ ಬೀಸಿ 36 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಒಟ್ಟುಗೂಡಿಸಿದರು. ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 35 ಓವರ್‌ಗಳಲ್ಲಿ 226 ರನ್‍ಗಳ ಗುರಿಯೊಂದಿಗೆ ಕಣಕ್ಕಿಳಿದ ವಿಂಡೀಸ್, ಭಾರತದ ಬೌಲರ್‌ಗಳ ಬಿಗಿ ದಾಳಿಗೆ ನಲುಗಿ 26 ಓವರ್‌ಗಳಲ್ಲಿ ಕೇವಲ 147 ರನ್‍ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 3-0 ಅಂತರದಲ್ಲಿ ಸರಣಿ ಗೆದ್ದು ವಿಂಡೀಸ್‍ಗೆ ತವರಿನಲ್ಲಿ ಶಾಕ್ ನೀಡಿತು. ಇದನ್ನೂ ಓದಿ: ಬಿಸಿಸಿಐ ಶೀರ್ಷಿಕೆ ಪ್ರಾಯೋಜಕ ಪಡೆದುಕೊಂಡ ಮಾಸ್ಟರ್ ಕಾರ್ಡ್ – ಪ್ರತಿ ಪಂದ್ಯಕ್ಕೆ ಸಿಗುತ್ತೆ ಕೋಟಿ ಕೋಟಿ
226 ರನ್‍ಗಳ ಗುರಿಯನ್ನು ಬೆನ್ನಟ್ಟುವ ವಿಶ್ವಾಸದಲ್ಲಿ ಕಣಕ್ಕಿಳಿದ ವೆಸ್ಟ್ ಇಂಡೀಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಬ್ರೆಂಡನ್ ಕಿಂಗ್ 42 ರನ್ (37 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ನಿಕೋಲಸ್ ಪೂರನ್ 42 ರನ್ (32 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ ಹೋರಾಡಿದ್ದನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮ್ಯಾನ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಚಹಲ್ 4 ಓವರ್ ಎಸೆದು 17 ರನ್ ನೀಡಿ 4 ವಿಕೆಟ್ ಕಿತ್ತು ವಿಂಡೀಸ್‍ಗೆ ಕಡಿವಾಣ ಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸಿರಾಜ್, ಠಾಕೂರ್ ತಲಾ 2 ವಿಕೆಟ್, ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಕಿತ್ತು ಮಿಂಚಿದರು.
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಉತ್ತಮ ಆರಂಭ ಪಡೆಯಿತು. ಶಿಖರ್ ಧವನ್, ಗಿಲ್ ಜೋಡಿ ಮೊದಲ ವಿಕೆಟ್‍ಗೆ 113 ರನ್ (138 ಎಸೆತ) ಜೊತೆಯಾಟವಾಡಿ ಭದ್ರ ಬುನಾದಿ ಹಾಕಿಕೊಟ್ಟಿತು. ಧವನ್ 58 ರನ್ (74 ಎಸೆತ, 7 ಬೌಂಡರಿ) ಬಾರಿಸಿ ಔಟ್ ಆದರೆ ಇತ್ತ ಗಿಲ್ ನಿಧಾನಗತಿಯಲ್ಲಿ ಅಬ್ಬರಿಸಲು ಆರಂಭಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 44 ರನ್ (34 ಎಸೆತ, 4 ಬೌಂಡರಿ, 1 ಸಿಕ್ಸ್) ಚಚ್ಚಿ ವಿಕೆಟ್ ಕಳೆದುಕೊಂಡರು. ಈ ಮೊದಲು ಗಿಲ್ ಜೊತೆ 2ನೇ ವಿಕೆಟ್‍ಗೆ 86 ರನ್ (58 ಎಸೆತ) ಜೊತೆಯಾಟವಾಡಿ ದೊಡ್ಡ ಮೊತ್ತಕ್ಕೆ ಕಾರಣರಾದರು. ಇದನ್ನೂ ಓದಿ: ನೀರಜ್ ಚೋಪ್ರಾಗೆ ಗಾಯದ ಸಮಸ್ಯೆ – ಕಾಮನ್‍ವೆಲ್ತ್ ಗೇಮ್ಸ್‌ಗೂ ಮುನ್ನವೇ ಭಾರತಕ್ಕೆ ಹಿನ್ನಡೆ
2 ರನ್‍ಗಳಿಂದ ಶತಕ ವಂಚಿತರಾದ ಗಿಲ್:
ಮಳೆಯಿಂದಾಗಿ 36 ಓವರ್‌ಗಳಿಗೆ ಇಳಿಕೆ ಕಂಡ ಪಂದ್ಯದಲ್ಲಿ ಗಿಲ್ ಅಜೇಯ 98 ರನ್ (98 ಎಸೆತ, 7 ಬೌಂಡರಿ, 2 ಸಿಕ್ಸ್) ಹೊಡೆದು 2 ರನ್‍ಗಳಿಂದ ಚೊಚ್ಚಲ ಶತಕವಂಚಿತರಾದರು. ಅಂತಿಮವಾಗಿ ಭಾರತ 36 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 225 ರನ್‍ಗಳ ಉತ್ತಮ ಮೊತ್ತ ಕಲೆ ಹಾಕಿತು.