India vs Srilanka: ಆಡುವ 11ರ ಬಳಗದಲ್ಲಿ ಮಯಾಂಕ್ ಇನ್!

Public TV
2 Min Read
MAYANK JADEJA

ಲಂಡನ್: ಬಾಂಗ್ಲಾದೇಶದ ವಿರುದ್ಧ ಗೆಲುವು ಪಡೆದು 2019 ವಿಶ್ವಕಪ್ ಟೂರ್ನಿ ಸೆಮಿ ಫೈನಲ್ ಪ್ರವೇಶ ಮಾಡಿರುವ ಟೀಂ ಇಂಡಿಯಾ ಶನಿವಾರ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ಟೀಂ ಇಂಡಿಯಾ ಸೆಮಿಫೈನಲ್‍ಗೆ ಪ್ರವೇಶ ಪಡೆದಿರುವ ಕಾರಣ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ಪ್ರಯೋಗಕ್ಕೆ ಮುಂದಾಗುವ ಸಾಧ್ಯತೆ ಇದ್ದು, ಬಹುಮುಖ್ಯ ಟೂರ್ನಿಯಲ್ಲಿ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಬಾರದು ಎಂದು ಕೆಲ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಇತ್ತ ತಂಡದಲ್ಲಿ ಬದಲಾವಣೆ ನಡೆದರೆ ಮಯಾಂಕ್ ಅಗರ್ವಾಲ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಮಯಾಂಕ್ ಆರಂಭಿಕರಾಗಿ ಕಣಕ್ಕೆ ಇಳಿದರೆ, ರಾಹುಲ್ 4ನೇ ಕ್ರಮಾಂಕದಲ್ಲಿ ರಿಷಬ್ ಪಂತ್ 5ನೇ ಸ್ಥಾನದಲ್ಲಿ ಆಡಲಿದ್ದಾರೆ. ಒಂದೊಮ್ಮೆ ನಾಳಿನ ಪಂದ್ಯದಲ್ಲಿ ಮಯಾಂಕ್ ಆಡುವುದು ಖಚಿತವಾದರೆ ವಿಶ್ವ ಕ್ರಿಕೆಟ್ ಇತಿಹಾಸಲ್ಲಿ ಮಯಾಂಕ್ ವಿಶೇಷ ದಾಖಲೆಯನ್ನು ಬರೆಯಲಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ನೇರವಾಗಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆಯಲಿದ್ದಾರೆ.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅನುಭವಿ ಆಟಗಾರ ರವೀಂದ್ರ ಜಡೇಜಾ ಅವರಿಗೆ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಕೆಲ ಮಾಜಿ ಕ್ರಿಕೆಟರ್ ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ತಲಾ ಇಬ್ಬರು ಸ್ಪಿನ್ ಹಾಗೂ ವೇಗದ ಬೌಲರ್ ಗಳೊಂದಿಗೆ ಕಣಕ್ಕೆ ಇಳಿದರೆ ಜಡೇಜಾಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಶ್ರೀಲಂಕಾ ಪಂದ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಮಧ್ಯಮ ಕ್ರಮಾಂಕ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ನೀಡಿದೆ. ಇದುವರೆಗೂ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ತಂಡದ ಆಟಗಾರರು ನಿರಾಸೆ ಮೂಡಿಸಿದ್ದಾರೆ. ಸೆಮಿ ಫೈನಲ್ ಪಂದ್ಯ ಸೇರಿದಂತೆ ವಿಶ್ವಕಪ್ ಗೆಲ್ಲುವ ದೃಷ್ಟಿಯಲ್ಲಿ ಟೀಂ ಇಂಡಿಯಾ ಆಟಗಾರರ ಫಾರ್ಮ್ ಬಹುಮುಖ್ಯವಾಗುತ್ತದೆ. ಅಲ್ಲದೇ ಸೆಮಿ ಫೈನಲ್‍ಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಆಡುವ ಅವಕಾಶ ಇದ್ದು, ಜುಲೈ 09 ರಂದು ಮೊದಲ ಸೆಮಿ ಫೈನಲ್ ಪಂದ್ಯ ಹಾಗೂ ಜುಲೈ 11 ರಂದು 2ನೇ ಸೆಮಿ ಫೈನಲ್ ಪಂದ್ಯ ನಡೆಯಲಿದೆ. ಜುಲೈ 14 ರಂದು ಲಾರ್ಡ್ಸ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *