ಬೆಂಗಳೂರು: ಟೀಂ ಇಂಡಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್‍ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಟಿ-20 ಸರಣಿಯು ಸಮಬಲದೊಂದಿಗೆ ಅಂತ್ಯಕಂಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ-20 ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವು ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಟೀಂ ಇಂಡಿಯಾ ಒಡ್ಡಿದ 135 ರನ್‍ಗಳ ಸವಾಲನ್ನು ದಕ್ಷಿಣ ಆಫ್ರಿಕಾ 3 ಓವರ್ ಗಳು ಬಾಕಿ ಇರುವಾಗಲೇ ಭೇದಿಸಿತು.
Advertisement
ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೀಜಾ ಹೆಂಡ್ರಿಕ್ಸ್ 26 ಎಸೆತಗಳನ್ನು ಎದುರಿಸಿ 4 ಬೌಂಡರಿ ಸೇರಿ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಕ್ವಿಂಟನ್ ಡಿಕಾಕ್ 25 ಎಸೆತಗಳನ್ನು ಎದುರಿಸಿ 5 ಸಿಕ್ಸರ್, 6 ಬೌಂಡರಿ ಸೇರಿ ಅಜೇಯ 79 ರನ್ ಸಿಡಿಸಿದರೆ, ತೆಂಬಾ ಬವೂಮಾ 23 ಎಸೆತಗಳಲ್ಲಿ ಸಿಕ್ಸ್, 2 ಬೌಂಡರಿ ಸಿಡಿಸಿ ಅಜೇಯ 27 ರನ್ ಕಲೆ ಹಾಕಿದರು.
Advertisement
Advertisement
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್‍ಗಳ ನಷ್ಟಕ್ಕೆ 134 ರನ್ ದಾಖಲಿಸಿತ್ತು. ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ್ದರು. ಆದರೆ ಇನ್ನಿಂಗ್ಸ್ ನ ಮೂರನೇ ಓವರ್ ನ ಎರಡನೇ ಎಸೆತದಲ್ಲಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಬಳಿಕ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದ ಶಿಖರ್ ಧವನ್‍ಗೆ ಕೊಹ್ಲಿ ಸಾಥ್ ನೀಡಿದ್ದರು.
Advertisement
ಇನ್ನಿಂಗ್ಸ್ ನ ಏಳನೇ ಓವರ್ ನಲ್ಲಿ ಶಿಖರ್ ಧವನ್ ವಿಕೆಟ್ ಒಪ್ಪಿಸಿದರು. 25 ಎಸೆತಗಳನ್ನು ಎದುರಿಸಿದ ಶಿಖರ್ ಧವನ್ ಎರಡು ಸಿಕ್ಸರ್, 4 ಬೌಂಡರಿ ಸೇರಿ 36 ರನ್ ಕಲೆಹಾಕಿದರು. ಧವನ್ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಕೂಡ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. 15 ಎಸೆತಗಳನ್ನು ಎದುರಿಸಿದ ವಿರಾಟ್ 9 ರನ್ ದಾಖಲಿಸಲು ಶಕ್ತರಾದರು.
ಇನ್ನಿಂಗ್ಸ್ ನ 9 ಓವರ್‌ಗಳ ವೇಳೆಗೆ ಟೀಂ ಇಂಡಿಯಾ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ಆಗ ಯುವ ಆಟಗಾರರಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ವಿಕೆಟ್ ಕಾಯ್ದುಕೊಂಡು ರನ್ ಕದಿಯಲು ಆರಂಭಿಸಿದರು. ಆದರೆ ಇನ್ನಿಂಗ್ಸ್ ನ 13ನೇ ಓವರ್ ನ 4ನೇ ಎಸೆತದಲ್ಲಿ ರಿಷಭ್ ಪಂತ್ ಹಾಗೂ 5ನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿದರು. 20 ಎಸೆತಗಳನ್ನು ಎದುರಿಸಿದ ಪಂತ್ ಸಿಕ್ಸ್, ಒಂದು ಬೌಂಡರಿ ಸೇರಿ 19 ರನ್ ದಾಖಲಿಸಿದರೆ, ಶ್ರೇಯಸ್ ಅಯ್ಯರ್ 5 ರನ್ ಕದಿಕಲು ಶಕ್ತರಾದರು.
ರವೀಂದ್ರ ಜಡೇಜಾ 19 ರನ್, ಹಾರ್ದಿಕ್ ಪಾಂಡ್ಯ 14 ರನ್ ದಾಖಲಿಸಿ ತಂಡಕ್ಕೆ ಆಸರೆಯಾದರು. ಈ ಮೂಲಕ ಟೀಂ ಇಂಡಿಯಾ ಇನ್ನಿಂಗ್ಸ್ ನ ನಿಗದಿತ 20 ಓವರ್ ಗಳಲ್ಲಿ 134 ರನ್ ದಾಖಲಿಸಿತ್ತು.
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ-20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಬಳಿಕ ಮೊಹಾಲಿಯಲ್ಲಿ ಸೆಪ್ಟೆಂಬರ್ 18ರಂದು ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ಭಾನುವಾರ ಬೆಂಗಳೂರಿನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಗೆಲುವು ಸಾಧಿಸಿ ಸರಣಿ ಸಮಬಲಗೊಳಿಸಿಕೊಂಡಿದೆ.