ಚಂಡೀಗಢ: ಧರ್ಮಶಾಲಾದಲ್ಲಿ ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ತಂಡದ ನಡುವಿನ 3ನೇ ಟಿ-20 ಸರಣಿಯ ಅಂತಿಮ ಪಂದ್ಯಕ್ಕೆ ಮಳೆಯಾಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ಧರ್ಮಶಾಲಾದಲ್ಲಿ ಮೋಡ ಕವಿದ ವಾತಾವರಣವಿದೆ. ಹೀಗಿದ್ದರೂ ಹವಾಮಾನ ವರದಿ ಪ್ರಕಾರ ಮಳೆಯಾಗುವುದಿಲ್ಲ ಎಂದು ಹೇಳಿದೆ.
Advertisement
Advertisement
ದಿನದ ಗರಿಷ್ಠ ತಾಪಮಾನವು 12 ಡಿಗ್ರಿ ಸೆಲ್ಸಿಯಸ್ ಇದ್ದು, ಇದು ರಾತ್ರಿಯಲ್ಲಿ 4 ಡಿಗ್ರಿಗಳಿಗೆ ಇಳಿಯಬಹುದು. ಗಾಳಿಯ ವೇಗ ಗಂಟೆಗೆ 8 ಕಿಲೋಮೀಟರ್ ವರೆಗೆ ಇರುತ್ತದೆ. ಹಗಲಿನಲ್ಲಿ ತೇವಾಂಶವು 69 ಪ್ರತಿಶತದಷ್ಟು ಇರುತ್ತದೆ. ಇದು ರಾತ್ರಿಯಲ್ಲಿ 53 ಪ್ರತಿಶತಕ್ಕೆ ಇಳಿಯುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಆದ್ದರಿಂದ, ಯಾವುದೇ ಅಡೆತಡೆಗಳಿಲ್ಲದೆ ಭಾರತ ಮತ್ತು ಶ್ರೀಲಂಕಾ ನಡುವಿನ ಅಂತಿಮ ಪಂದ್ಯ ನಡೆಯಲಿದೆ.
Advertisement
ಭಾನುವಾರ (ಫೆಬ್ರವರಿ 27) ಹಿಮಾಚಲ ಪ್ರದೇಶದ ಸುಂದರವಾದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಸರಣಿಯನ್ನು ವೈಟ್‍ವಾಶ್ ಮಾಡಲು ನೋಡುತ್ತಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಇದೇ ಸ್ಥಳದಲ್ಲಿ ಶನಿವಾರ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಏಳು ವಿಕೆಟ್‍ಗಳಿಂದ ಲಂಕಾ ತಂಡವನ್ನು ಸೋಲಿಸುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
Advertisement
ಗೆಲ್ಲಲು 184 ರನ್‍ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 17.1 ಓವರ್‍ಗಳಲ್ಲಿ ಇನ್ನೂ 17 ಎಸೆತ ಬಾಕಿ ಇರುವಂತೆ 186 ರನ್ ಸಿಡಿಸಿ 7 ವಿಕೆಟ್‍ಗಳ ಭರ್ಜರಿ ಗೆಲುವಿನ ನಗೆ ಬೀರಿತು. ಈ ಮೊದಲು ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಟಿ-20 ಸರಣಿ ಗೆದ್ದಿತ್ತು. ಇದೀಗ ಶ್ರೀಲಂಕಾ ವಿರುದ್ಧ ಸರಣಿ ಜಯದೊಂದಿಗೆ ಹ್ಯಾಟ್ರಿಕ್ ಸರಣಿ ಗೆದ್ದಂತಾಗಿದೆ.
ಭಾರತದ ಪರ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 1 ರನ್ ಮತ್ತು ಇಶನ್ ಕಿಶನ್ 16 ರನ್ (15 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾಗೆ ಆಸರೆಯಾದ ಸಂಜು ಸ್ಯಾಮ್ಸನ್ 39 ರನ್ (25 ಎಸೆತ, 2 ಬೌಂಡರಿ, 3 ಸಿಕ್ಸ್) ಸಿಡಿಸಿ ನೆರವಾದರು. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಆರ್ಭಟಿಸಿದರು. ಲಂಕಾ ಬೌಲರ್‍ಗಳನ್ನು ಮನಬಂದಂತೆ ದಂಡಿಸಿದ ಅಯ್ಯರ್ ಅಜೇಯ 74 ರನ್ (44 ಎಸೆತ, 6 ಬೌಂಡರಿ, 4 ಸಿಕ್ಸ್) ಬಾರಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ ಬಿರುಸಿನ ಬ್ಯಾಟಿಂಗ್ ನಡೆಸಿ 45 ರನ್ (18 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿ ಇನ್ನೂ 17 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.
ಈ ಪಂದ್ಯದ ಗೆಲುವಿನ ಮೂಲಕ ಟೀಂ ಇಂಡಿಯಾವು ತನ್ನ ಗೆಲುವಿನ ಓಟವನ್ನು 11 ಪಂದ್ಯಗಳಿಗೆ ವಿಸ್ತರಿಸಿದೆ. ಟೀಂ ಇಂಡಿಯಾ ಕಳೆದ ವರ್ಷದ ವಿಶ್ವಕಪ್‍ನಲ್ಲಿ ಲೀಗ್ ಹಂತದಲ್ಲೇ ಹೊರ ಬಿದ್ದರೂ ಕೊನೆಯಲ್ಲಿ ನಡೆದ ಅಫ್ಘಾನಿಸ್ತಾನ, ಸ್ಕಾಟ್ಲೆಂಡ್, ನಮೀಬಿಯಾ ವಿರುದ್ದ ಜಯಗಳಿಸಿತ್ತು. ಅಲ್ಲಿಂದ ಆರಂಭವಾಗಿ ಎಲ್ಲ ಪಂದ್ಯಗಳನ್ನು ಭಾರತ ಜಯಗಳಿಸಿದೆ.
ಯಾವ ತಂಡದ ವಿರುದ್ಧ ಜಯ?
* ಅಫ್ಘಾನಿಸ್ತಾನ ವಿರುದ್ಧ 66 ರನ್
* ಸ್ಕಾಟ್ಲೆಂಡ್ ವಿರುದ್ಧ 8 ವಿಕೆಟ್
* ನಮೀಬಿಯಾ ವಿರುದ್ಧ 9 ವಿಕೆಟ್‍ಗಳು
* ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್
* ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್
* ನ್ಯೂಜಿಲೆಂಡ್ ವಿರುದ್ಧ 73 ರನ್
* ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್
* ವೆಸ್ಟ್ ಇಂಡೀಸ್ ವಿರುದ್ಧ 8 ರನ್
* ವೆಸ್ಟ್ ಇಂಡೀಸ್ ವಿರುದ್ಧ 17 ರನ್
* ಶ್ರೀಲಂಕಾ ವಿರುದ್ಧ 62 ರನ್
* ಶ್ರೀಲಂಕಾ ವಿರುದ್ಧ 7 ವಿಕೆಟ್